ಸಂಸತ್‌ನಲ್ಲಿ ಒಪ್ಪಿಗೆ ಪಡೆದ ಸಿಎಎ ವಿರುದ್ಧ ಮಕ್ಕಳಲ್ಲಿ ತಪ್ಪು ಮಾಹಿತಿ ಬಿತ್ತಲು ಶಾಲಾ ಆಡಳಿತ ಪ್ರಯತ್ನಿಸಿದೆ. ಈ ಮೂಲಕ ಕೋಮು ಪ್ರಚೋದನೆಗೆ ನಾಂದಿ ಹಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. 

ಬೆಂಗಳೂರು(ಜೂ.15):  ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಕುರಿತು ಬೀದರ್‌ ಶಾಹೀನ್‌ ಶಾಲೆಯ ಮಕ್ಕಳು ನಾಟಕ ಪ್ರದರ್ಶಿಸಿದ್ದಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿಯ ನಾಲ್ವರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಈ ಕುರಿತಂತೆ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಶಾಹೀನ್‌ ಶಾಲೆಯ ಮುಖ್ಯಸ್ಥರಾದ ಅಲ್ಲಾವುದ್ದೀನ್‌, ಅಬ್ದುಲ್‌ ಖಾಲೀಕ್‌, ಮೊಹಮ್ಮದ್‌ ಬಿಲಾಲ್‌ ಇನಾಂದಾರ್‌ ಮತ್ತು ಮೊಹಮ್ಮದ್‌ ಮೆಹ್ತಾಬ್‌ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್‌ ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ ಗೌಡರ್‌ ಅವರ ಪೀಠ ಈ ಆದೇಶ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಭಾರತದಲ್ಲಿ ಫೇಸ್‌​ಬುಕ್‌ ಬಂದ್‌ ಮಾಡಿ​ಬಿ​ಡ್ತೇ​ವೆ: ಹೈಕೋರ್ಟ್‌ ಎಚ್ಚ​ರಿ​ಕೆ

ಶಾಹೀನ್‌ ಶಾಲೆಯಲ್ಲಿ ಸಿಎಎ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಗೆ (ಎನ್‌ಆರ್‌ಸಿ) ಸಂಬಂಧಿಸಿದಂತೆ 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾದ ನಾಟಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿಂದಿಸುವ ಸಂಭಾಷಣೆ ಇತ್ತು ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಸದಸ್ಯ ನೀಲೇಶ್‌ ದೂರು ದಾಖಲಿಸಿದ್ದರು. ಸಂಸತ್‌ನಲ್ಲಿ ಒಪ್ಪಿಗೆ ಪಡೆದ ಸಿಎಎ ವಿರುದ್ಧ ಮಕ್ಕಳಲ್ಲಿ ತಪ್ಪು ಮಾಹಿತಿ ಬಿತ್ತಲು ಶಾಲಾ ಆಡಳಿತ ಪ್ರಯತ್ನಿಸಿದೆ. ಈ ಮೂಲಕ ಕೋಮು ಪ್ರಚೋದನೆಗೆ ನಾಂದಿ ಹಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಇದರಿಂದ ಅರ್ಜಿದಾರರ ವಿರುದ್ಧ ದೇಶದ್ರೋಹ ಸೇರಿದಂತೆ ಮತ್ತಿತರರ ಆರೋಪಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.