Asianet Suvarna News Asianet Suvarna News

ನೇಮಕ ಮುನ್ನ ಸೆಕ್ಯುರಿಟಿ ಗಾರ್ಡ್‌ಗೆ ತರಬೇತಿ ಕಡ್ಡಾಯ; ಅಧಿಸೂಚನೆ ಪ್ರಕಟ

  • ನೇಮಕ ಮುನ್ನ ಸೆಕ್ಯುರಿಟಿ ಗಾರ್ಡ್‌ಗೆ ತರಬೇತಿ ಕಡ್ಡಾಯ
  •  ಭದ್ರತಾ ಸಿಬ್ಬಂದಿಯ ಹಿನ್ನೆಲೆ ಪರಿಶೀಲಿಸಬೇಕು
  • ಭದ್ರತಾ ಸಂಸ್ಥೆಗಳ ಬಗ್ಗೆ ಸರ್ಕಾರದಿಂದ ಕರಡು ನಿಯಮ ಪ್ರಕಟ
Security guard training is mandatory before hiring govt notification published rav
Author
First Published Nov 24, 2022, 1:09 AM IST

ಬೆಂಗಳೂರು (ನ.24) : ಬೇಕಾಬಿಟ್ಟಿಖಾಸಗಿ ಭದ್ರತಾ ಏಜೆನ್ಸಿ ಸ್ಥಾಪಿಸಿ, ಸೂಕ್ತ ತರಬೇತಿ, ದೈಹಿಕ ಕ್ಷಮತೆ ಹೊಂದಿಲ್ಲದ ಹಾಗೂ ಯಾವುದೇ ಹಿನ್ನೆಲೆ ಗೊತ್ತಿಲ್ಲದ ಭದ್ರತಾ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕರಡು ನಿಯಮ ರಚಿಸಿ ಅಧಿಸೂಚನೆ ಹೊರಡಿಸಿದೆ. ‘ಕರ್ನಾಟಕ ಖಾಸಗಿ ಭದ್ರತಾ ಏಜೆನ್ಸಿ ನಿಯಮ-2022’ ಅಡಿಯಲ್ಲಿ ಕರಡು ನಿಯಮ ರೂಪಿಸಿ, ಈ ಸಂಬಂಧ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಕರಡು ನಿಯಮದಲ್ಲೇನಿದೆ?:

ಭದ್ರತಾ ಏಜೆನ್ಸಿ ಆರಂಭಿಸುವ ಕಂಪನಿ, ಸಂಸ್ಥೆ ಅಥವಾ ವ್ಯಕ್ತಿಗಳ ಗುಂಪು ‘ನಿಯಂತ್ರಣ ಪ್ರಾಧಿಕಾರ’ಕ್ಕೆ ಅಗತ್ಯ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳನ್ನು ಎಲ್ಲ ರೀತಿಯಿಂದ ಪರಿಶೀಲಿಸಬೇಕು. ಒಂದು ವೇಳೆ ಕಂಪನಿ ಅಥವಾ ಸಂಸ್ಥೆ ಬೇರೆ ರಾಜ್ಯದಲ್ಲಿ ಅನುಮತಿ ಪಡೆದಿದ್ದರೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

Crime News: ಸೆಕ್ಯುರಿಟಿ ಗಾರ್ಡ್‌ ಕಟ್ಟಿಹಾಕಿ ಮಳಗಿ ಸಹಕಾರಿ ಸಂಘ ದರೋಡೆಗೆ ಯತ್ನ

ಲೈಸೆನ್ಸ್‌ ಪಡೆದ ಕಂಪನಿ ‘ನಿಯಂತ್ರಣ ಪ್ರಾಧಿಕಾರ’ ಸೂಚಿಸಿದ ಸಂಸ್ಥೆಯಿಂದ ಆರು ದಿನಗಳ ಕಾಲ ವಿಐಪಿ ಭದ್ರತೆ, ಆಂತರಿಕ ಭದ್ರತೆ, ಸಂಸ್ಥೆಗಳ ಭದ್ರತೆ, ಅಗ್ನಿಶಾಮಕ, ಪ್ರಕೃತಿ ವಿಕೋಪ/ತುರ್ತು ನಿರ್ವಹಣೆ ಪದ್ಧತಿ/ವಿವಿಧ ದಾಖಲೆಗಳ ಪರಿಶೀಲನೆ, ಮಾಹಿತಿಗಳ ಭದ್ರತೆ, ಸ್ಫೋಟಕಗಳು, ಐಇಡಿ, ಭದ್ರತೆಗೆ ಸಂಬಂಧಪಟ್ಟಉಪಕರಣಗಳು, ಸಂಪರ್ಕ ಸಾಧನಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತರಬೇತಿ ಪಡೆಯಬೇಕು.

ಇದರ ಜೊತೆಗೆ ಸಂಬಂಧಪಟ್ಟಕಾರ್ಮಿಕರ ಕಾನೂನು, ಭದ್ರತಾ ಸಿಬ್ಬಂದಿಗಳ ಯೂನಿಫಾರಂ, ತರಬೇತಿ, ದಾಖಲೆಗಳ ನಿರ್ವಹಣೆ ಮಾಡಬೇಕು, ಸಾರ್ವಜನಿಕರು, ಪೊಲೀಸರು ಹಾಗೂ ಇತರೆ ಇಲಾಖೆಗಳ ಜೊತೆ ಸಮನ್ವಯ ಸಾಧಿಸುವ ಕೆಲಸವನ್ನು ಲೈಸೆನ್ಸ್‌ ಕಂಪನಿ ಮಾಡಬೇಕು.

ನೇಮಕಕ್ಕೂ ಮುನ್ನ ಪರಿಶೀಲನೆ:

ಭದ್ರತಾ ಸಿಬ್ಬಂದಿ ಅಥವಾ ಸೂಪರ್‌ವೈಸರ್‌ ನೇಮಕಕ್ಕೂ ಮುನ್ನ ಆತನ ಗುಣ, ಹಿನ್ನೆಲೆ ಕುರಿತು ಸಲ್ಲಿಸುವ ಪ್ರಮಾಣ ಪತ್ರಗಳನ್ನು ಪರಿಶೀಲಿಸಬೇಕು. ನೇಮಕಗೊಳ್ಳುವ ಭದ್ರತಾ ಸಿಬ್ಬಂದಿಗೆ ಪ್ರವೇಶಾತಿ ಸಮಯದಲ್ಲಿ 20 ದಿನಗಳ ಅವಧಿಯಲ್ಲಿ ಕನಿಷ್ಠ 100 ಗಂಟೆಗಳ ಕಾಲ ತರಗತಿ ಶಿಕ್ಷಣ, 60 ಗಂಟೆ ಫೀಲ್ಡ್‌ ಟ್ರೈನಿಂಗ್‌ ನೀಡಬೇಕು. ಮಾಜಿ ಸೈನಿಕರು ಹಾಗೂ ಪೊಲೀಸ್‌ ಸಿಬ್ಬಂದಿಗೆ 7 ದಿನಗಳ ಅವಧಿಯಲ್ಲಿ 40 ಗಂಟೆಗಳ ತರಗತಿ ಶಿಕ್ಷಣ, 16 ಗಂಟೆ ಫೀಲ್ಡ್‌ ಟ್ರೈನಿಂಗ್‌ ನೀಡಬೇಕು.

ದೈಹಿಕ ಕ್ಷಮತೆ:

ಭದ್ರತಾ ಸಿಬ್ಬಂದಿಯಾಗಿ ನಿಯೋಜನೆಗೊಳ್ಳುವ ವ್ಯಕ್ತಿ ಎತ್ತರ 160 ಸೆಂ.ಮಿ. ಎತ್ತರ (ಮಹಿಳೆಯರು 150 ಸೆಂ.ಮಿ) ಹೊಂದಿರಬೇಕು, ಎದೆ ಅಳತೆ 80 ಸೆಂ.ಮೀ ಇರಬೇಕು, ಕಣ್ಣಿಗೆ ಸಂಬಂಧಪಟ್ಟಂತೆ ದೂರದೃಷ್ಟಿ6/6, ಸಮೀಪ ದೃಷ್ಟಿ0.6/0.6 ಇರಬೇಕು, ಬಣ್ಣಗುರುಡು ಇರಬಾರದು, ಶ್ರವಣ ದೋಷ ಮುಕ್ತನಾಗಿರಬೇಕು. ಕಂಪನಿ ಪ್ರತಿ ವರ್ಷಕ್ಕೊಮ್ಮೆ ಆತನ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಆತನ ದೈಹಿಕ ಕ್ಷಮತೆಯನ್ನು ಖಾತ್ರಿ ಪಡಿಸಿಕೊಳ್ಳಬೇಕು.

2023ರಲ್ಲಿ ಸರ್ಕಾರಿ ನೌಕರರಿಗೆ ಸಿಗಲಿವೆ 19 ಸರ್ಕಾರಿ ರಜೆ ದಿನ..!

15 ಜನರಿಗೆ ಒಬ್ಬ ಸೂಪರ್‌ವೈಸರ್‌ ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ ಭದ್ರತಾ ಸಿಬ್ಬಂದಿಗಳು ಬೇರೆ ಬೇರೆ ಪ್ರದೇಶದಲ್ಲಿ ನಿಯೋಜಿತರಾಗಿದ್ದಲ್ಲಿ ಕನಿಷ್ಠ 6 ಜನ ಭದ್ರತಾ ಸಿಬ್ಬಂದಿಗೆ ಒಬ್ಬ ಸೂಪರ್‌ವೈಸರ್‌ ನೇಮಕ ಮಾಡಿ ಅವರ ಮೇಲೆ ನಿಗಾ ಹಾಗೂ ಸಲಹೆ ನೀಡುತ್ತಿರಬೇಕು.

Follow Us:
Download App:
  • android
  • ios