ಮಾರ್ಚ್ 1 ರಿಂದ ದ್ವಿತೀಯ ಪಿಯು ಪರೀಕ್ಷೆಗಳು ಆರಂಭವಾಗಲಿದ್ದು, ಈ ಬಾರಿ 7,13,862 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಗ್ರೇಸ್ ಮಾರ್ಕ್ಸ್ ಇರುವುದಿಲ್ಲ ಮತ್ತು ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು (ಫೆ.20); ರಾಜ್ಯದಾದ್ಯಂತ ಮಾರ್ಚ್ 1 ರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗಲಿವೆ. ಈ ಬಾರಿ 7,13,862 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದಾರೆ. ಆದರೆ, ಈ ಬಾರಿಗೆ ಯಾರಿಗೂ ಗ್ರೇಸ್ ಮಾರ್ಕ್ಸ್ ಕೊಡುವುದಿಲ್ಲ. ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಕಾಪಿ ಹೊಡೆಯಲು ಅವಕಾಶವೇ ಇಲ್ಲ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 1ರಿಂದ ದ್ವಿತೀಯ ಪಿಯು ಪರೀಕ್ಷೆ ಹಾಗೂ ಮಾರ್ಚ್ 21ರಿಂದ SSLC ಪರೀಕ್ಷೆ ಆರಂಭ ಆಗುತ್ತದೆ. ಸುಮಾರು 7,13,000 ಪಿಯು ಪರೀಕ್ಷೆ ಹಾಗೂ 8,96,000 ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 62 ಸಾವಿರ ವಿದ್ಯಾರ್ಥಿಗಳು ದ್ವಿತೀಯ ಪಿಯು ಹಾಗೂ 72 ಸಾವಿರ SSLC ವಿದ್ಯಾರ್ಥಿಗಳು ಕಳೆದ ವರ್ಷ ಎರಡು ಹಾಗೂ ಮೂರನೇ ಪರೀಕ್ಷೆ ಬರೆದಿದ್ದಾರೆ. ಕಳೆದ ವರ್ಷ ಕೊನೆಯಲ್ಲಿ ಎರಡು ಹಾಗೂ ಮೂರನೇ ಪರೀಕ್ಷೆ ಬಗ್ಗೆ ಹೇಳಿದ್ದೆವು. ಆದರೆ, ಈ ಬಗ್ಗೆ ಎಷ್ಟೋ ವಿದ್ಯಾರ್ಥಿಗಳಿಗೆ ಮಾಹಿತಿ ಇರಲಿಲ್ಲ. ಈ ಬಾರಿ ಎಲ್ಲಾ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಮಾಹಿತಿ ಇದ್ದು ಸಾಕಷ್ಟು ಸಹಾಯವಾಗಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: CBSE: 2026ರಿಂದ 10ನೇ ತರಗತಿಗೆ ಎರಡು ಪರೀಕ್ಷೆ: ಅಂತಾರಾಷ್ಟ್ರೀಯ ಪಠ್ಯಕ್ರಮ?
ಈ ವರ್ಷದ ದ್ವಿತೀಯ ಪಿಯು ಪರೀಕ್ಷೆ ಬರೆಯಲು 7,13,862 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಹೊಸಬರು- 6,61,474 ಆಗಿದ್ದಾರೆ. ಪುನರಾವರ್ತಿತ 34,071 ಹಾಗೂ ಖಾಸಗಿ ವಿದ್ಯಾರ್ಥಿಗಳು- 18, 317 ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟಾರೆ ರಾಜ್ಯದಾದ್ಯಂತ 5,050 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಇನ್ನು ಮಾರ್ಚ್ 21ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8,96,447 ವಿದ್ಯಾರ್ಥಿಗಳು ನೊಂದಣಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಹೊಸಬರು- 8,42,817 ಇದ್ದಾರೆ. ಪುನರಾವರ್ತಿತ 38,091 ಹಾಗೂ ವಿದ್ಯಾರ್ಥಿಗಳು- 15,539 ಪರೀಕ್ಷೆ ಬರೆಯಲಿದ್ದಾರೆ. ಒಟ್ಟಾರೆಯಾಗಿ 15,881 ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಬಾರಿ ಯಾವುದೇ ರೀತಿ ಗ್ರೇಸ್ ಮಾರ್ಕ್ಸ್ ಇರೋದಿಲ್ಲ. ಕೋವಿಡ್ ಸಮಯದಲ್ಲಿ ನೀಡಲಾಗುತ್ತಿತ್ತು. ಈ ಬಾರಿ ಗ್ರೇಸ್ ಮಾರ್ಕ್ಸ್ ಇಲ್ಲ. ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಯಲಿದೆ.
