ಬೆಂಗಳೂರು(ನ.05): ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ‘ಕಾವೇರಿ’ ವೆಬ್‌ಸೈಟ್‌ ತಿರುಚಿ ನಿವೇಶನಗಳ ಅಕ್ರಮ ಪರಭಾರೆ ಪ್ರಕರಣದ ಸಂಬಂಧ 18 ಸಬ್‌ ರಿಜಿಸ್ಟ್ರಾರ್‌ಗಳಿಗೆ ಬಂಧನ ಭೀತಿ ಎದುರಾಗಿದೆ.

ಈ ವಿವಾದದ ಕುರಿತು ವಿಚಾರಣೆಗೆ ಬರುವಂತೆ ಕೆಂಗೇರಿ, ದಾಸನಪುರ, ಲಗ್ಗೆರೆ, ಮಾದನಾಯನಕನಹಳ್ಳಿ ಹಾಗೂ ಪೀಣ್ಯ ಸೇರಿದಂತೆ ಕೆಲವು ಸಬ್‌ ರಿಜಿಸ್ಟ್ರಾರ್‌ಗಳಿಗೆ ಸಿಸಿಬಿ ನೋಟಿಸ್‌ ನೀಡಿತ್ತು. ಆದರೆ ಇದಕ್ಕೆ ಉತ್ತರಿಸದೆ ಅಧಿಕಾರಿಗಳು ತಪ್ಪಿಸಿಕೊಂಡಿದ್ದು, ಪ್ರಕರಣದಲ್ಲಿ ಆ ಅಧಿಕಾರಿಗಳ ಮೇಲೆ ಅನುಮಾನ ಮೂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಗಂಡು ಮಕ್ಕಳೂ ಸುರಕ್ಷರಲ್ಲ..! ಮದುವೆಗೆ ಹೊರಟಿದ್ದ ಸ್ನೇಹಿತರ ಕಿಡ್ನಾಪ್

ಈ ಸಂಬಂಧ ಮಾತನಾಡಿದ ಜಂಟಿ ಪೊಲೀಸ್‌ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಅವರು, ‘ಕಾವೇರಿ’ ವೆಬ್‌ ಸೈಟ್‌ ಪ್ರಕರಣದ ಕುರಿತು ದೂರುದಾರರಿಂದ ಕೆಲವು ದಾಖಲೆಗಳನ್ನು ಕೇಳಲಾಗಿತ್ತು. ಆದರೆ ಇದುವರೆಗೆ ಅವರಿಂದ ದಾಖಲೆಗಳು ಬಂದಿಲ್ಲ ಎಂದಿದ್ದಾರೆ.

ಕೆಲವು ಅಧಿಕಾರಿಗಳ ಪಾತ್ರದ ಕುರಿತು ನಿಖರ ಮಾಹಿತಿ ಲಭ್ಯವಾಗಿದೆ. ವಿಚಾರಣೆಗೆ ಹಾಜರಾಗದ ಸಬ್‌ ರಿಜಿಸ್ಟ್ರಾರ್‌ಗಳ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಆರೋಪಿಗಳ ಬಂಧನವಾಗಲಿದೆ ಎಂದು ಹೇಳಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ!.

ಇನ್ನು ಈ ಪ್ರಕರಣದ ಸಂಬಂಧ ಡಿಸಿಪಿ ರವಿಕುಮಾರ್‌ ನೇತೃತ್ವದ ತಂಡ ಕಾರ್ಯಾಚರಣೆ ಮುಂದುವರೆಸಿದ್ದು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಕೆಲವು ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ಮೇಲೆ ದಾಳಿ ನಡೆಸಿ ಕಂಪ್ಯೂಟರ್‌ ಸೇರಿದಂತೆ ಕೆಲವು ದಾಖಲೆಗಳನ್ನು ಜಪ್ತಿ ಮಾಡಿದ್ದರು. ಈ ದಾಳಿ ಬೆನ್ನಲ್ಲೇ ಬಂಧನ ಭೀತಿಗೊಳಗಾದ 18 ಸಬ್‌ ರಿಜಿಸ್ಟ್ರಾರ್‌ಗಳು ಹಾಗೂ ಕಂಪ್ಯೂಟರ್‌ ಆಪರೇಟರ್‌ಗಳು, ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಜಾಮೀನು ಅರ್ಜಿಗಳಿಗೆ ಸಿಸಿಬಿ ಪೊಲೀಸರು ಸಹ ಆಕ್ಷೇಪಣೆ ಸಲ್ಲಿಸಿದ್ದಾರೆ.