ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆಗಾಗಿ ಸೀಲ್ ಡೌನ್ ಆಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಪುನರ್ ಆರಂಭಕ್ಕೆ ಅನುಮತಿ ಸಿಕ್ಕಿದೆ. ಸ್ಟುಡಿಯೋ ಆಡಳಿತ ಮಂಡಳಿಯ ಮನವಿ ಮೇರೆಗೆ, ಮಂಡಳಿಯು ಪರಿಶೀಲನೆ ನಡೆಸಿ ಅನುಮತಿ ನೀಡಿದ್ದು, ಇದರಿಂದ 'ಬಿಗ್ ಬಾಸ್ ಕನ್ನಡ' ಶೋ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರು(ಡಿ.10): ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಸೀಲ್ ಡೌನ್ ಆಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಇದೀಗ ಪುನರ್ ಆರಂಭಕ್ಕೆ ಅನುಮತಿ ದೊರೆತಿದೆ. ಇದರಿಂದಾಗಿ 'ಬಿಗ್ ಬಾಸ್ ಕನ್ನಡ ಸೀಸನ್ 12' ರ ರಿಯಾಲಿಟಿ ಶೋ ಸಹ ಪುನಃ ಅದೇ ಸ್ಥಳದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಜಾಲಿವುಡ್ ಸ್ಟೂಡಿಯೋ ಬಂದ್ ಆಗಿದ್ದು ಯಾಕೆ?

ಕಳೆದ ಅ. 7 ರಂದು ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಿ, ಸ್ಟುಡಿಯೋ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದು ಸೀಲ್ ಡೌನ್ ಮಾಡಿದ್ದರು. ಈ ಕಾರಣದಿಂದಾಗಿ ಬಿಗ್ ಬಾಸ್ ಕಾರ್ಯಕ್ರಮದ ಮುಂದುವರಿಕೆಯ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು.

ಪುನರ್ ಆರಂಭಕ್ಕೆ ಅನುಮತಿ:

ಸೀಲ್ ಡೌನ್ ಆದ ನಂತರ, ಜಾಲಿವುಡ್ ಸ್ಟುಡಿಯೋ ಆಡಳಿತ ಮಂಡಳಿಯು ತಾವು ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕೋರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ, ಮಂಡಳಿಯು ಸ್ಟುಡಿಯೋದಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ, ಡಿಸೆಂಬರ್ 5 ರಂದೇ ಪುನರ್ ಆರಂಭಕ್ಕೆ ಸದ್ದಿಲ್ಲದೇ ಅನುಮತಿ ನೀಡಿದೆ.

ಈ ಅನುಮತಿಯೊಂದಿಗೆ, ಜಾಲಿವುಡ್ ಸ್ಟುಡಿಯೋ ಇಂದಿನಿಂದ ಕಾರ್ಯಕ್ರಮಗಳನ್ನ ಮತ್ತೆ ಪ್ರಾರಂಭಿಸಿದೆ.