ಬೆಂಗಳೂರು(ಏ.12): ರಾಜ್ಯ ರಾಜಧಾನಿಯ ಸುಮಾರು 200ಕ್ಕೂ ಅಧಿಕ ಬಡಾವಣೆಗಳ ಜನರು ಹೊರ ಬರದಂತೆ ಎಲ್ಲಾ ಮಾರ್ಗಗಳು ಬಂದ್‌! ನಗರದ ಸರಿ ಸುಮಾರು 1075 ರಸ್ತೆಗಳು ಸಂಪೂರ್ಣ ಬ್ಲಾಕ್‌!!. ಇದು ಬೆಂಗಳೂರು ನಗರದ ಮಿನಿ ಸೀಲ್‌ಡೌನ್‌ ಸ್ವರೂಪ!!!

ಕಳೆದ ಶುಕ್ರವಾರವಷ್ಟೇ ಏಳು ಕೊರೋನಾ ಸೋಂಕಿತರು ಪತ್ತೆಯಾಗಿದ್ದ ಪಾದರಾಯನಪುರ ಹಾಗೂ ಬಾಪೂಜಿನಗರ ವಾರ್ಡ್‌ಗಳನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಬೆಣಗಳೂರಿನ ಸುಮಾರು 200ಕ್ಕೂ ಅಧಿಕ ಬಡಾವಣೆಗಳ ಒಂದು ಸಾವಿರಕ್ಕೂ ಅಧಿಕ ರಸ್ತೆಗಳನ್ನು ಬ್ಯಾರಿಕೇಟ್‌, ಮರ ಕೊಂಬೆ, ತಳ್ಳುವಗಾಡಿ, ಜಖಂಗೊಂಡಿರುವ ವಾಹನ, ಕಲ್ಲು, ಸಿಮೆಂಟ್‌ ಇಟ್ಟಿಗೆ ಸೇರಿದಂತೆ ಇನ್ನಿತರ ವಸ್ತುಗಳನ್ನು ರಸ್ತೆಗೆ ಅಡ್ಡವಿಟ್ಟು ನರಪಿಳ್ಳೆಯೂ ಹೊರ ನುಸುಳದಂತೆ ಬಂದ್‌ ಮಾಡಲಾಗುತ್ತಿದ್ದು, ಸಾರ್ವಜನಿಕರು ಲಾಕ್‌ಡೌನ್‌ ನಿರ್ಲಕ್ಷಿಸಿದ ಪರಿಣಾಮವಾಗಿ ಇದೀಗ ಇಡೀ ನಗರವನ್ನು ಏ.14ರಿಂದ ಏ.30ರ ವರೆಗೂ ‘ಮಿನಿ ಸೀಲ್‌ಡೌನ್‌’ ಮಾಡಿರುವುದು ಎದ್ದು ಕಾಣುತ್ತಿದೆ.

ಲಾಕ್‌ಡೌನ್‌ ನಡುವೆ ಪಾಸ್‌ಗಾಗಿ 44 ಲಕ್ಷ ಜನ ಅರ್ಜಿ!

ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಿನಿ ಸೀಲ್‌ಡೌನ್‌ ಅನ್ನು ಹೆಸರಿನಲ್ಲಿ ಲಾಕ್‌ಡೌನ್‌ ಅನ್ನು ಜಿಲ್ಲಾಡಳಿತ ಇನ್ನಷ್ಟುಕಠಿಣಗೊಳಿಸುವುದಕ್ಕೆ ಮುಂದಾದಂತೆ ಕಾಣುತ್ತಿದೆ. ಜತೆಗೆ ಅನಗತ್ಯವಾಗಿ ರಸ್ತೆಗೆ ಇಳಿಯುತ್ತಿದ್ದ ಸಾರ್ವಜನಿಕರನ್ನು ತಪಾಸಣೆ ನಡೆಸುವುದು, ಪರಿಶೀಲಿಸುವುದು ಒತ್ತಡದಲ್ಲಿ ಲಾಠಿ ರುಚಿ ತೋರಿಸಬೇಕಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಪೊಲೀಸರು ಸಾರ್ವಜನಿಕರು ಓಡಾಡಲು ಇರುವ ರಸ್ತೆಗಳನ್ನೇ ಬಂದ್‌ ಮಾಡಿದ್ದಾರೆ.

ಕಳೆದ ಮೂರು ದಿನಗಳಿಂದ ಬೆಂಗಳೂರು ಪೊಲೀಸ್‌ ಕಮಿಷನರೇಟ್‌ನ ಎಂಟು ವಿಭಾಗದ ಆಯಾ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸ್‌ ಸಿಬ್ಬಂದಿ ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ ರಸ್ತೆಗಳ ಸಂಪರ್ಕ ಕಡಿತಗೊಳ್ಳುವಂತೆ ಬಂದ್‌ ಮಾಡಿದ್ದಾರೆ. ಕೆಲವು ಕಡೆ ಮಾತ್ರ ಒಳ-ಹೊರ ಹೋಗಲು ಒಂದೇ ತಾಣದಲ್ಲಿ ರಹದಾರಿ ನೀಡಿದ್ದು, ಅಲ್ಲಿ ಪೊಲೀಸರ ಕಣ್ಗಾವಲಿರುತ್ತದೆ. ಹೀಗಾಗಿ ಬಡಾವಣೆಯ ಜನರು ವಿನಾಕಾರಣ ನಗರದ ಬೇರೆಡೆಗೆ ಸಂಚರಿಸುವುದನ್ನು ನಿರ್ಬಂಧಿಸಿದಂತೆ ಕಂಡು ಬರುತ್ತಿದೆ.

ಸಾರ್ವಜನಿಕರು ಮುಖ್ಯರಸ್ತೆಗಳಲ್ಲಿ ಮಾತ್ರ ಸಂಚರಿಸಬೇಕು, ಇಲ್ಲವೇ ನಡಿಗೆಯಲ್ಲಿಯೇ ಬಂದು ದಿನಸಿ, ತರಕಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮೂಲಕ ಅನಗತ್ಯವಾಗಿ ರಸ್ತೆಗಿಳಿಯುವ ವಾಹನ ಹಾಗೂ ಸಾರ್ವಜನಿಕರಿಗೆ ಪೊಲೀಸ್‌ ಇಲಾಖೆ ಬ್ರೇಕ್‌ ಹಾಕಿದೆ. ಜತೆಗೆ ಒಂದು ಬಡಾವಣೆಯ ಜನ ಇನ್ನೊಂದು ಬಡಾವಣೆಯೊಂದಿಗೆ ಸಂಪರ್ಕ ಕಡಿತಗೊಳಿಸುವುದಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಜತೆಗೆ ಪರಿಸ್ಥಿತಿ ಕೈ ಮೀರಿದರೆ ಬಡಾವಣೆಯನ್ನು ಸೀಲ್‌ಡೌನ್‌ ಮಾಡಿ ಅಲ್ಲಿನ ಜನರನ್ನು ಕ್ವಾರೆಂಟೈನ್‌ ಮಾಡಲು ಹಾಗೂ ತಪಾಸಣೆ ನಡೆಸುವುದಕ್ಕೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

KSRTC​ಯಿಂದ ವಿನೂ​ತನ ಐಡಿಯಾ, ಗುಜರಿ ಬಸ್‌ಗ​ಳಿಗೆ ಹೊಸ ರೂಪ!

ಎಲ್ಲಿ ಎಷ್ಟು?:

ಪೊಲೀಸ್‌ ಇಲಾಖೆಯ ಅಂಕಿ-ಅಂಶದ ಪ್ರಕಾರ ಪೂರ್ವ ವಿಭಾಗದ 207, ದಕ್ಷಿಣ ವಿಭಾಗದಲ್ಲಿ 240, ಈಶಾನ್ಯ ವಿಭಾಗದ 119, ಆಗ್ನೇಯ ವಿಭಾಗದ 90, ಕೇಂದ್ರ ವಿಭಾಗ- 83, ವೈಟ್‌ಫೀಲ್ಡ್‌ ವಿಭಾಗದ 26, ಪಶ್ಚಿಮ ವಿಭಾಗ- 210 ಹಾಗೂ ಉತ್ತರ ವಿಭಾಗದಲ್ಲಿ 100ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್‌ ಮಾಡಲಾಗಿದೆ ಎಂದ ಆಯಾ ವಿಭಾಗದ ಡಿಸಿಪಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದ್ದು, ಬೆಂಗಳೂರಿನ ಬಡಾವಣೆಗಳ ಸಂಪರ್ಕ ಕಡಿತಗೊಳಿಸಲಾಗಿದೆ.

ಏಕಮುಖ ಮಾರ್ಗ:

ನಗರದ ಬಹುತೇಕ ಮುಖ್ಯರಸ್ತೆಗಳು ಏಕಮುಖ ಸಂಚಾರವಾಗಿದೆ. ತುರ್ತು ವಾಹನ, ಸರ್ಕಾರಿ ವಾಹನ ಹಾಗೂ ಅನಗತ್ಯವಾಗಿ ಯಾವುದೇ ವಾಹನ ಬಂದರೂ ಏಕಮುಖ ಮಾರ್ಗದಲ್ಲಿಯೇ ಬರಬೇಕು. ಈ ಮೂಲಕ ಚೆಕ್‌ಪೋಸ್ಟ್‌ನಲ್ಲಿ ನಿಂತಿರುವ ಪೊಲೀಸರಿಗೆ ಈ ವಾಹನಗಳು ಎದುರಾಗುವ ಮೂಲಕ ತಪಾಸಣೆಯಾಗಿಯೇ ಹೋಗಬೇಕಾಗುತ್ತದೆ. ಒಂದು ವೇಳೆ ಸುಖ-ಸುಮ್ಮನೆ ಹೊರಗೆ ಬಂದರೆ, ಚೆಕ್‌ಪೋಸ್ಟ್‌ ಅಥವಾ ಗಸ್ತಿನಲ್ಲಿರುವ ಪೊಲೀಸರಿಗೆ ಸಿಕ್ಕಿ ಬೀಳುತ್ತಾರೆ.

ತರಕಾರಿ, ದಿನಸಿ, ಮಾಂಸ ಅಂಡಿಗೆ ಹೋಗುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹಾಲು, ದಿನಸಿ, ತರಕಾರಿ ತರಲು ಹೋಗುವ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಬಗ್ಗೆ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಜನರಿಗೆ ಒಳಿತಿಗಾಗಿ ಎಷ್ಟುಕ್ರಮ ತೆಗೆದುಕೊಂಡರೂ ಹೊರಗೆ ಬರುತ್ತಿದ್ದಾರೆ. ಈಗಾಗಿ ಮುಖ್ಯರಸ್ತೆಗಳನ್ನು ಬಂದ್‌ ಮಾಡಲಾಗಿದೆ ಎಂದರು.

ಆಹಾರ ಸಾಮಗ್ರಿ, ತುರ್ತು ಸೇವೆಗಳ ವಾಹನಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೂ ಕೆಲವರು ಪರಿಸ್ಥಿತಿಯ ಗಂಭೀರತೆ ಬಗ್ಗೆ ಅರಿವಿದ್ದರೂ ರಸ್ತೆಗೆ ಇಳಿಯುತ್ತಿದ್ದಾರೆ. ಈ ಪೈಕಿ ಪಾಸ್‌ ದುರ್ಬಳಕೆ ಮಾಡಿಕೊಳ್ಳುತ್ತಿರುವವರು ಇದ್ದಾರೆ. ರಸ್ತೆ ಬಂದ್‌ ಮಾಡುವ ಮೂಲಕ ಇನ್ನಷ್ಟುಬಿಗಿ ಕ್ರಮಕೈಗೊಳ್ಳಲಾಗಿದೆ. ಇದರಿಂದ ಕೊರೋನಾ ಸೋಂಕಿನ ಹೋರಾಟ ಮಾಡಲು ಸಾಧ್ಯ. ಲಾಕ್‌ಡೌನ್‌ ಇದ್ದರೂ ಅನಗತ್ಯವಾಗಿ ಸಾರ್ವಜನಿಕರು ಹೊರ ಬರದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ. ಹೀಗಾಗಿ ನಗರದ ಮುಖ್ಯರಸ್ತೆಗಳನ್ನು ಬಂದ್‌ ಮಾಡಲಾಗಿದೆ.

- ಭಾಸ್ಕರ್‌ರಾವ್‌, ಬೆಂಗಳೂರು ಪೊಲೀಸ್‌ ಆಯುಕ್ತ

ಯಾವ ಭಾಗ​ದ​ಲ್ಲಿ ಎಷ್ಟು ರಸ್ತೆ ಬಂದ್‌?

ಪೂರ್ವ 207

ದಕ್ಷಿಣ 240

ಈಶಾನ್ಯ 119

ಆಗ್ನೇಯ 90

ಕೇಂದ್ರ 83

ವೈಟ್‌ಫೀಲ್ಡ್‌ 26

ಪಶ್ಚಿಮ 210

ಉತ್ತರ 100