Asianet Suvarna News Asianet Suvarna News

ಲಾಕ್‌ಡೌನ್‌ ನಡುವೆ ಪಾಸ್‌ಗಾಗಿ 44 ಲಕ್ಷ ಜನ ಅರ್ಜಿ!

ಲಾಕ್‌ಡೌನ್‌ ಪಾಸ್‌ಗೆ 44 ಲಕ್ಷ ಜನ ಅರ್ಜಿ!| ನಗರದ ಜನಸಂಖ್ಯೆಯೇ 1.10 ಕೋಟಿ| ಇದರಲ್ಲಿ ಅರ್ಧದಷ್ಟು ಜನರಿಗೆ ಓಡಾಟಕ್ಕೆ ಪಾಸ್‌ ಬೇಕಂತೆ|  ಈಗಾಗಲೇ 1.75 ಲಕ್ಷ ಮಂದಿಗೆ ಪಾಸ್‌ ವಿತರಣೆ| ಅಂಕಿ-ಅಂಶ ಕಂಡು ಸುರೇಶ್‌ ಕುಮಾರ್‌ ಅಚ್ಚರಿ

amid Of Lockdown 44 Lakh People Applies For Vehicle Pass In Bengaluru
Author
Bangalore, First Published Apr 12, 2020, 8:13 AM IST

ಬೆಂಗಳೂರು(ಏ.12): ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ವಿಧಿಸಿರುವ ಹೊರತಾಗಿಯೂ ನಗರದ ಜನಸಂಖ್ಯೆಯ ಸುಮಾರು ಅರ್ಧದಷ್ಟುಮಂದಿಗೆ ಮುಕ್ತವಾಗಿ ಓಡಾಡಲು ಪಾಸ್‌ ಬೇಕಂತೆ!

ಹೌದು, ಬೆಂಗಳೂರು ನಗರದ ಜನಸಂಖ್ಯೆ ಸುಮಾರು 1.10 ಕೋಟಿ ಇದೆ. ಈ ಪೈಕಿ ಲಾಕ್‌ಡೌನ್‌ ಬೆನ್ನಲ್ಲೇ ಸುಮಾರು 15 ರಿಂದ 20 ಲಕ್ಷ ಜನರು ಬೆಂಗಳೂರು ಖಾಲಿ ಮಾಡಿ ಸ್ವಂತ ಊರುಗಳತ್ತ ಮರಳಿದ್ದಾರೆ. ಪ್ರಸ್ತುತ ಸುಮಾರು 80-90 ಲಕ್ಷ ಜನಸಂಖ್ಯೆ ನಗರದಲ್ಲಿ ಇರಬಹುದು. ಈ ಪೈಕಿ 44.46 ಲಕ್ಷ ಮಂದಿ ಲಾಕ್‌ಡೌನ್‌ ಅವಧಿಯಲ್ಲಿ ಮುಕ್ತ ಓಡಾಟಕ್ಕೆ ನೀಡಲಾಗುವ ಪಾಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಈ ಅಂಕಿ-ಅಂಶಗಳನ್ನು ಖುದ್ದು ಸಚಿವ ಎಸ್‌. ಸುರೇಶ್‌ಕುಮಾರ್‌ ಅವರೇ ಬಹಿರಂಗಪಡಿಸಿ, ಅಚ್ಚರಿ ವ್ಯಕ್ತಪಡಿಸಿದ್ದಾರೆ!

KSRTC​ಯಿಂದ ವಿನೂ​ತನ ಐಡಿಯಾ, ಗುಜರಿ ಬಸ್‌ಗ​ಳಿಗೆ ಹೊಸ ರೂಪ!

24 ಸಾವಿರ ವಾಹನ ಜಪ್ತಿ:

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿರುವವರ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ರಾಜ್ಯದಲ್ಲಿ 43 ಸಾವಿರ ವಾಹನ ಜಪ್ತಿ ಮಾಡಿದ್ದು, ಬೆಂಗಳೂರಿನಲ್ಲೇ 24 ಸಾವಿರ ವಾಹನ ಜಪ್ತಿ ಮಾಡಲಾಗಿದೆ. ಅಗತ್ಯ ಸೇವೆಗಳಾದ ಫುಡ್‌ ಡೆಲಿವರಿ ಮತ್ತಿತರಿಗೆ ಸಂಚಾರ ಪಾಸ್‌ ವಿತರಿಸಲಾಗುತ್ತಿದೆ. ಆದರೆ, ಈ ರೀತಿ ಪಾಸ್‌ ಬೇಕು ಎಂದು 44.46 ಲಕ್ಷ ಮಂದಿ ಮನವಿ ಮಾಡಿದ್ದಾರೆ. ಆದರೆ ಅಗತ್ಯವಿರುವವರ ಅರ್ಜಿಗಳನ್ನು ಮಾತ್ರ ಪರಿಶೀಲಿಸಿ 1.75 ಲಕ್ಷ ಮಂದಿಗೆ ಇ-ಪಾಸ್‌ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಲಾಕ್‌ಡೌನ್‌ನಿಂದ ನಗರದಲ್ಲಿ ಸಂಚಾರ ದಟ್ಟಣೆ ತೀವ್ರ ಮಟ್ಟದಲ್ಲಿ ಕಡಿಮೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಇರುತ್ತಿದ್ದ ವಾಹನದಟ್ಟಣೆಯ ಶೇ.2 ರಷ್ಟುವಾಹನಗಳು ಮಾತ್ರ ಪ್ರಸ್ತುತ ರಸ್ತೆಗೆ ಇಳಿಯುತ್ತಿವೆ ಎಂದರು.

ಶೇ.50ರಷ್ಟುರಸ್ತೆಗಳು ಬ್ಲಾಕ್‌!:

ಅನಗತ್ಯವಾಗಿ ಓಡಾಡುವವರನ್ನು ನಿರ್ಬಂಧಿಸಲು ನಗರದಲ್ಲಿ ಶೇ.50ರಷ್ಟುರಸ್ತೆಗಳನ್ನು ಸಂಚಾರಕ್ಕೆ ಅವಕಾಶ ನೀಡದಂತೆ ಮುಚ್ಚಲಾಗಿದೆ. ಬಿಬಿಎಂಪಿಯ ಎರಡು ವಾರ್ಡ್‌ಗಳಲ್ಲಿ ಮಾತ್ರ ಸೀಲ್‌ಡೌನ್‌ ಮಾಡಲಾಗಿದೆ. ಉಳಿದ ಎಲ್ಲೂ ಸೀಲ್‌ಡೌನ್‌ ಮಾಡಿಲ್ಲ ಎಂದು ಹೇಳಿದರು.

ತುರ್ತು ಸೇವೆಗೆ ಹೊಯ್ಸಳ:

ನಗರದ ಎಲ್ಲಾ ಪೊಲೀಸ್‌ ಠಾಣೆಗಳ 273 ಹೊಯ್ಸಳ ವಾಹನಗಳನ್ನು ಜನಸಾಮಾನ್ಯರ ತುರ್ತು ಅಗತ್ಯಗಳಿಗೆ ಮುಕ್ತವಾಗಿ ಇಡಲಾಗಿದೆ. ರೋಗಿಗಳು, ಡಯಾಲಿಸಿಸ್‌ ಅಗತ್ಯವಿರುವವರು ಸೇರಿದಂತೆ ತುರ್ತು ಅಗತ್ಯ ಇರುವವರು (ಸಹಾಯವಾಣಿ 100) ಹೊಯ್ಸಳ ವಾಹನದ ಸೇವೆ ಪಡೆಯಬಹುದು. ಈ ವರೆಗೆ 4 ಸಾವಿರ ಟ್ರಿಪ್‌ಗಳನ್ನು ಹೊಯ್ಸಳ ವಾಹನಗಳು ಮಾಡಿವೆ ಎಂದರು.

ಬೆಂಗಳೂರಲ್ಲಿ ಮಿನಿ ಸೀಲ್‌​ಡೌ​ನ್‌, 1000 ಅಡ್ಡ ರಸ್ತೆ​ಗಳು ಸಂಪೂರ್ಣ ಬಂದ್‌!

25 ಸಾವಿರಕ್ಕೂ ಹೆಚ್ಚು ವಾಹನ ಜಪ್ತಿ

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಇಡೀ ರಾಜ್ಯವೇ ಲಾಕ್‌ಡೌನ್‌ ಆಗಿದ್ದರೂ ರಾಜಧಾನಿ ಬೆಂಗಳೂರಿನಲ್ಲಿ ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆಯಾಗಿಲ್ಲ.

ಲಾಕ್‌ಡೌನ್‌ ಬಳಿಕ ನಗರದಲ್ಲಿ ವಶಪಡಿಸಿಕೊಂಡ ವಾಹನಗಳ ಸಂಖ್ಯೆ ಶನಿವಾರಕ್ಕೆ 25,079 ಆಗಿದೆ.

ಈ ಪೈಕಿ 23,401 ದ್ವಿಚಕ್ರ ವಾಹನ, 716 ತ್ರಿಚಕ್ರ ವಾಹನ ಹಾಗೂ 962 ನಾಲ್ಕು ಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇಷ್ಟಾದರೂ ರಸ್ತೆಗಿಳಿಯುವ ಜನರು ಅನಗತ್ಯವಾಗಿ ಬರುತ್ತಿದ್ದಾರೆ. ಇಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ದಯವಿಟ್ಟು ಸಹಕರಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದ್ದಾರೆ.

Follow Us:
Download App:
  • android
  • ios