Asianet Suvarna News Asianet Suvarna News

ಮಕ್ಕಳು ಹೊರಹೋದ ಅರ್ಧ ತಾಸಲ್ಲಿ ಸರ್ಕಾರಿ ಶಾಲೆ ಚಾವಣಿ ಪದರ ಕುಸಿತ!

ಮಳೆಗೆ ನೆನೆದಿದ್ದ ಶಾಲಾ ಕೊಠಡಿಯಿಂದ ವಿದ್ಯಾರ್ಥಿಗಳನ್ನು ಬೇರೆಡೆ ಕರೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ಚಾವಣಿ ಕುಸಿದು ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದಿದೆ.

school roof collapses at athani in belagavi district gvd
Author
Bangalore, First Published Jul 15, 2022, 4:45 AM IST

ಅಥಣಿ (ಜು.15): ಮಳೆಗೆ ನೆನೆದಿದ್ದ ಶಾಲಾ ಕೊಠಡಿಯಿಂದ ವಿದ್ಯಾರ್ಥಿಗಳನ್ನು ಬೇರೆಡೆ ಕರೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ಚಾವಣಿ ಕುಸಿದು ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದಿದೆ. ಶಿಕ್ಷಕರ ಸಮಯ ಪ್ರಜ್ಞೆಯಿಂದ ಘಟಿಸಬಹುದಾಗಿದ್ದ ಅನಾಹುತ ತಪ್ಪಿದಂತಾಗಿದ್ದು, ಅದೃಷ್ಟವಶಾತ್‌ ಯಾರಿಗೂ ಪ್ರಾಣಾಪಾಯವಾಗಿಲ್ಲ. 

ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ 82 ವಿದ್ಯಾರ್ಥಿಗಳು ಓದುತ್ತಿರುವ ಕೋಣೆಯಲ್ಲಿ ಚಾವಣಿಯ ಪದರು ಕಳಚುತ್ತಿರುವುದನ್ನು ಕಂಡು ವರ್ಗ ಶಿಕ್ಷಕರು ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದಾರೆ. ಆಗ ಮುಖ್ಯ ಶಿಕ್ಷಕ ಎಸ್‌.ಎಂ.ರಾಠೋಡ ಅವರು ಮಕ್ಕಳ ಮೇಲೆ ಬೀಳುವ ಸ್ಥಿತಿಯನ್ನು ಅರಿತು ತಕ್ಷಣವೇ ಎಲ್ಲ ಮಕ್ಕಳನ್ನು ಬೇರೊಂದು ಕ್ಲಾಸ್‌ರೂಮ್‌ಗೆ ಸ್ಥಳಾಂತರಿಸಿ ಅಭ್ಯಾಸಕ್ಕೆ ವ್ಯವಸ್ಥೆ ಕಲ್ಪಿಸಿದರು. ಮಕ್ಕಳನ್ನು ಈ ಕೋಣೆಯಿಂದ ಸ್ಥಳಾಂತರಿಸಿದ ಅರ್ಧಗಂಟೆಯಲ್ಲಿ ಕೋಣೆಯ ಚಾವಣಿ ಪದರು ಕುಸಿದುಬಿದ್ದಿದೆ.

Belagavi: ಗೋಡೆ ಬಿದ್ದ ಮನೆಯಲ್ಲೇ ವಾಸಿಸುತ್ತಿದ್ದ ವೃದ್ಧೆಯರ ನೆರವಿಗೆ ಬಂದ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್

ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಸಮಯೋಚಿತವಾಗಿ ಸ್ಪಂದಿಸದೇ ಹೋಗಿದ್ದರೇ ಮಕ್ಕಳಿಗೆ ಅಪಾಯ ಕಾದಿತ್ತು. ಶಿಕ್ಷಕರ ಕಾರ್ಯಕ್ಕೆ ಮಕ್ಕಳ ಪಾಲಕರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆಯಲ್ಲಿ 238ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಶಾಲಾ ಕಟ್ಟಡದ ಐದು ಕೋಣೆಗಳು ಸೋರುವ ಸ್ಥಿತಿಯಲ್ಲಿವೆ. ಶಿಥಿಲಾವಸ್ಥೆಯ ಕೋಣೆಗಳನ್ನು ಸಂಬಂಧಪಟ್ಟಅಧಿಕಾರಿಗಳು ಪರಿಶೀಲಿಸಿ ಕೂಡಲೇ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸರ್ಕಾರಿ ನೌಕರರ ಸಂಘದ ಗೋಡೆ ಕುಸಿತ: ಪಟ್ಟಣದ ತಹಸೀಲ್ದಾರ್‌ ಕಚೇರಿ ಎದುರಿನ ಸರ್ಕಾರಿ ನೌಕರರ ಸಂಘದ ಕಟ್ಟಡದ ಗೋಡೆ ಕುಸಿದು ಕೆಳಭಾಗದಲ್ಲಿದ್ದ ಮನೆಯೊಂದರ ಛಾವಣಿ ಮೇಲೆ ಬಿದ್ದಿದೆ. ಈ ವೇಳೆ ಛಾವಣಿ ಕೆಳಗಿದ್ದ ಮಹಿಳೆ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಸುಮಾರು 50 ವರ್ಷಕ್ಕೂ ಹೆಚ್ಚು ಹಳೆಯದಾದ ಗೋಡೆ ಇದಾಗಿದೆ. ಕಲ್ಲು, ಮಣ್ಣಿನಿಂದ ನಿರ್ಮಾಣಗೊಂಡಿತ್ತು. ಸರ್ಕಾರಿ ನೌಕರರ ಸಂಘದ ಕಟ್ಟಡ ಹಲವು ವರ್ಷಗಳಿಂದ ಶಿಥಿಲಗೊಳ್ಳುತ್ತಿದೆ. ಸಂಘವು ವಾಣಿಜ್ಯ ಚಟುವಟಿಕೆಗೆ ಬಾಡಿಗೆಗೆ ಕಟ್ಟಡದ ಕೊಠಡಿಗಳನ್ನು ನೀಡಿದ್ದು ಕಟ್ಟಡದ ಕೆಳಭಾಗದಲ್ಲಿರುವ ಮನೆಗಳಿಗೆ ಅಪಾಯ ಎದುರಾಗಿದೆ. 

ಗ್ರಾಮೀಣ ರಸ್ತೆಗಳ ನವೀಕರಣಕ್ಕೆ ಹಸಿರು ನಿಶಾನೆ; ಸಚಿವ ಉಮೇಶ ಕತ್ತಿ ಪ್ರಯತ್ನಕ್ಕೆ ಫಲ

ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆಯನ್ನು ತಾಲೂಕಾಡಳಿತ ವಹಿಸಬೇಕಿದೆ ಎಂದು ಸಾರ್ವಜನಿಕರು ವಿನಂತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್‌ ವಿವೇಕ ಶೇಣ್ವಿ, ಸರ್ಕಾರಿ ನೌಕರರ ಸಂಘದ ಕಟ್ಟಡದ ಗೋಡೆ ಬಿದ್ದ ಘಟನೆಯಲ್ಲಿ ಮಹಿಳೆಗೆ ಚಿಕ್ಕದಾಗಿ ತರಚಿದ ಗಾಯಗಳಾಗಿವೆ. ಆದರೂ ಗೋಡೆ ಬಿದ್ದ ಕಟ್ಟಡದ ಕೆಳಗಡೆ ವಾಸವಿದ್ದವರಿಗೆ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ. ಸರ್ಕಾರಿ ನೌಕರರ ಸಂಘದ ಕಟ್ಟಡದ ಸುರಕ್ಷಿತೆ ಬಗ್ಗೆ ಸಂಬಂಧಪಟ್ಟಇಲಾಖೆಯ ಇಂಜಿನಿಯರ್‌ ಮೂಲಕ ತಕ್ಷಣ ಪರಿಶೀಲಿಸಿ ಮುಂದಿನ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios