ಬೆಂಗಳೂರು(ಫೆ.08): ಕುರುಬರಿಗೆ ಪರಿಶಿಷ್ಟಪಂಗಡ (ಎಸ್‌ಟಿ) ಮೀಸಲಾತಿ ನೀಡುವಂತೆ ಒತ್ತಾಯಿಸಿ 21 ದಿನಗಳ ಕಾಲ ನಡೆದ ಬೃಹತ್‌ ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಭಾನುವಾರ ಲಕ್ಷಾಂತರ ಮಂದಿ ಕುರುಬರು ಬೆಂಗಳೂರಿಗೆ ಹರಿದುಬಂದಿದ್ದು, ಸಮುದಾಯಕ್ಕೆ ಎಸ್‌.ಟಿ. ಮೀಸಲಾತಿ ಕಲ್ಪಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಬಲ ಹಕ್ಕೊತ್ತಾಯ ಮಾಡಿದ್ದಾರೆ.

"

ಅಲ್ಲದೆ, ಕುರುಬರು ಎಸ್‌ಟಿ ಎಂಬುದಕ್ಕೆ ಕುಲ ಶಾಸ್ತ್ರೀಯ ಅಧ್ಯಯನ ವರದಿ ಅಗತ್ಯವಿಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೂಡಲೇ ಕುರುಬರನ್ನು ಎಸ್‌ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ. ನಮ್ಮ ಜೀವ ಇರುವವರೆಗೂ ಹೋರಾಟ ಮುಂದುವರೆಯುತ್ತದೆ. ಮುಂದೆ ಸ್ವರೂಪವೂ ಬದಲಾಗುತ್ತದೆ ಎಂದು ಹೋರಾಟದ ನೇತೃತ್ವ ವಹಿಸಿದ್ದ ಕಾಗಿನೆಲೆ ಮಹಾಸಂಸ್ಥಾನ ಮಠದ ನಿರಂಜನಾನಂದಪುರಿ ಸ್ವಾಮೀಜಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಎಲ್ಲಾ ಮಠಾಧೀಶರು, ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಜ.15ರಂದು ಕಾಗಿನೆಲೆ ಗುರುಪೀಠದಿಂದ ಪ್ರಾರಂಭವಾದ ಬೃಹತ್‌ ಪಾದಯಾತ್ರೆ 21 ದಿನಗಳ ಬಳಿಕ ಫೆ.3ಕ್ಕೆ ಬೆಂಗಳೂರು ತಲುಪಿತ್ತು. ಭಾನುವಾರ ಮಾದಾವರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿದ್ದ ಬೃಹತ್‌ ಪಾದಯಾತ್ರೆ ಸಮಾರೋಪ ಸಮಾವೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿ ಕಹಳೆ ಮೊಳಗಿಸಿದರು. ಈ ವೇಳೆ ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ಮೀಸಲಾತಿ ಕಲ್ಪಿಸುವಂತೆ ಮನವಿ ಪತ್ರ ಸಲ್ಲಿಸಿದರು.

ಸಮಾಜ ಮೋದಿ ಜೊತೆ- ಕಾಗಿನೆಲೆ ಶ್ರೀ:

ಸಮಾವೇಶ ಉದ್ದೇಶಿಸಿ ಮಾತನಾಡಿದ ನಿರಂಜನಾನಂದಪುರ ಸ್ವಾಮೀಜಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೇ ಎಸ್‌ಟಿ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೀವು ಶಿಫಾರಸು ಮಾಡಿ. ಕೇಂದ್ರದಲ್ಲಿ ಹೋಗಿ ಮಾಡಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕುರುಬರನ್ನು ಎಸ್‌ಟಿ ಮೀಸಲಾತಿಗೆ ಸೇರಿಸಬೇಕು. ರಾಜ್ಯದಲ್ಲಿ 60 ಲಕ್ಷ ಕುರುಬರಿದ್ದೇವೆ. ಅವರೆಲ್ಲರ ಪರವಾಗಿ ನಾನು ವಚನ ನೀಡುತ್ತಿದ್ದೇನೆ. ನೀವು ಎಸ್‌ಟಿ ಮೀಸಲಾತಿ ನೀಡಿದರೆ ಕೊನೆಯವರೆಗೂ ಕುರುಬರೆಲ್ಲರೂ ನಿಮ್ಮ ಜೊತೆಯಲ್ಲೇ ಇರುತ್ತೇವೆ ಎಂದು ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದರು.

ನಮಗೆ ಉಪ್ಪಿನ ಕಾಯಿ ಬೇಡ:

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ, 75 ವರ್ಷಗಳ ಹಿಂದೆಯೇ ಕುರುಬರು ಎಸ್‌ಟಿ ಮೀಸಲಾತಿಯಲ್ಲಿದ್ದರು. ಬಾಬಾ ಸಾಹೇಬ್‌ ಅಂಬೇಡ್ಕರ್‌ ನೀಡಿದ ಮೀಸಲಾತಿಯನ್ನು ಪಡೆಯಲು ಆಗಿರಲಿಲ್ಲ. ಕುರುಬರಿಗೆ ಪರಿಶಿಷ್ಟಪಂಗಡದ ಲಕ್ಷಣಗಳು ಹೆಚ್ಚಿದ್ದು, ನಮಗೆ ಮೀಸಲಾತಿ ಕಲ್ಪಿಸಲು ಕುಲಶಾಸ್ತ್ರೀಯ ಅಧ್ಯಯನವೇ ಬೇಕಾಗಿಲ್ಲ. ನೀವು ಕನಕಜಯಂತಿ ದಿನ ರಜೆ ಘೋಷಿಸಿದ್ದೀರಿ, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ 40 ಕೋಟಿ ರು. ಅನುದಾನ ನೀಡಿದ್ದೀರಿ. 60 ಲಕ್ಷ ಸಮುದಾಯವಿರುವ ಕುರುಬರಿಗೆ ಇದು ಉಪ್ಪಿನಕಾಯಿ ಮಾತ್ರ. ನಮಗೆ ಎಸ್‌ಟಿ ಮೀಸಲಾತಿ ಎಂಬ ಊಟ ಬೇಕು ಎಂದು ಆಗ್ರಹಿಸಿದರು.

ನಮ್ಮ ನಾಲ್ಕು ಶಾಸಕರು ರಾಜೀನಾಮೆ ನೀಡಿ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ನಾವು ಬೇರೆ ಸ್ವಾಮೀಜಿಗಳ ರೀತಿಯಲ್ಲಿ ಕೆಟ್ಟಭಾಷೆ ಬಳಸುವುದಿಲ್ಲ. ಬ್ಲ್ಯಾಕ್‌ಮೇಲ್‌ ಸಹ ಮಾಡುವುದಿಲ್ಲ. ಕೇಂದ್ರಕ್ಕೆ ಶಿಫಾರಸು ಮಾಡಿ ಎಂದು ಕೇಳುತ್ತಿದ್ದೇವೆ. ನೀವು ಕೇಂದ್ರಕ್ಕೆ ಕಳುಹಿಸಿದರೆ ಕೇಂದ್ರದಿಂದ ಅನುಮೋದನೆ ಪಡೆಯುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಮಣ್ಣಾಗುವವರೆಗೂ ಹೋರಾಟ:

ನಾವು ಯಾವುದೇ ಪಕ್ಷದ ಪರ, ವಿರುದ್ಧ ಅಥವಾ ವ್ಯಕ್ತಿಯ ಪರ, ವಿರುದ್ಧವಾಗಿ ಹೋರಾಟ ನಡೆಸುತ್ತಿಲ್ಲ. ಎಸ್‌ಟಿ ಮೀಸಲಾತಿ ಕೊಡಬೇಕಾಗಿರುವುದು ಸರ್ಕಾರದ ಧರ್ಮ. ಮೀಸಲಾತಿ ನೀಡದಿದ್ದರೆ ನಾವು ಸುಮ್ಮನೆ ಕೂರುವುದಿಲ್ಲ. ನಮ್ಮ ಜೀವ ಇರುವವರೆಗೂ, ಈ ಶರೀರ ಮಣ್ಣು ಸೇರುವವರೆಗೂ ಮೀಸಲಾತಿಗೆ ಹೋರಾಟ ನಡೆಸುತ್ತೇವೆ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಂಬೇಡ್ಕರ್‌ ಅವರೇ ಮೀಸಲಾತಿ ನೀಡಿದ್ದರು:

ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಇದು ಭಾರತದ ಮೂಲ ನಿವಾಸಿಗಳ ಕೂಗು. ಕುರುಬರ ಮಕ್ಕಳ ಜೀವನ ಉಳಿಸಲು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರೇ ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡಿದ್ದರು. ರಾಜ್ಯದಲ್ಲಿ ಬೀದರ್‌, ಗುಲಬರ್ಗಾ, ಯಾದಗಿರಿ, ಕೊಡಗು ಜಿಲ್ಲೆಗಳಲ್ಲಿನ ಸೀಮಿತ ಕುರುಬ ಸಮುದಾಯಗಳಿಗೆ ಮಾತ್ರ ಎಸ್‌ಟಿ ಮೀಸಲಾತಿಯಿದೆ. ಇದೇ ರೀತಿ ಅಖಂಡ ಕರ್ನಾಟಕದ ಕುರುಬರಿಗೆ ಮೀಸಲಾತಿ ಕಲ್ಪಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.

ಸಚಿವರಾದ ಎಂ.ಟಿ.ಬಿ. ನಾಗರಾಜು, ಆರ್‌. ಶಂಕರ್‌, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್‌, ಎಚ್‌.ಎಂ. ರೇವಣ್ಣ, ಈಶ್ವರಪ್ಪ ಅವರ ಪುತ್ರ ಹಾಗೂ ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಇ. ಕಾಂತೇಶ್‌, ಕುರುಬರ ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದ ಜನಪ್ರತಿನಿಧಿಗಳು ಸೇರಿದಂತೆ ಹಲವರು ಹಾಜರಿದ್ದರು.

ಮೀಸಲಾತಿ ಸಿಕ್ಕಿತಲೇ ಪರಾಕ್‌: ಕಾರ್ಣಿಕ ನೆನೆದ ಶ್ರೀಗಳು

ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, 360 ಕಿ.ಮೀ. ಉದ್ದದ ಪಾದಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಸಮಾರೋಪ ಸಮಾವೇಶದಲ್ಲಿ ಎಲ್ಲಾ ಭೇದ, ಭಾವ ಮರೆತು ಕುರುಬರ ಸುನಾಮಿಯೇ ಎದ್ದಿದೆ. ಈ ಹಿಂದೆ ಗೊರವಯ್ಯ ನುಡಿದಿದ್ದ ಕಾರ್ಣಿಕ ನಿಜವಾಗಿದೆ. ಹಿಂದೆ ‘ಕುರುಬರೆಲ್ಲರೂ ಒಗ್ಗೂಡಿದರೆ ಎಸ್‌ಟಿ ಮೀಸಲಾತಿ ಸಿಕ್ಕಿತಲೇ ಪರಾಕ್‌’ ಎಂದು ಗೊರವಯ್ಯ ನುಡಿದಿದ್ದರು ಎಂದರು.

ಸಿದ್ದು ಅನುಪಸ್ಥಿತಿಯಲ್ಲಿ ನಡೆದ ಮೊದಲ ಬೃಹತ್‌ ಕುರುಬ ಸಮಾವೇಶ

ಕುರುಬ ಸಮುದಾಯದ ಪ್ರಶ್ನಾತೀತ ನಾಯಕ ಎಂದೇ ಹೆಸರಾಗಿರುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಭಾನುವಾರ ಕುರುಬರ ಬೃಹತ್‌ ಸಮಾವೇಶ ನಡೆದಿದೆ. ಕನಕಗುರು ಪೀಠ ಸ್ಥಾಪನೆ ವೇಳೆ ನಡೆದ ಸಮಾವೇಶ ಹಾಗೂ 2012ರಲ್ಲಿ ದಾವಣಗೆರೆಯಲ್ಲಿ ನಡೆದಿದ್ದ ಸಮಾವೇಶ ಸೇರಿದಂತೆ ಎಲ್ಲಾ ಬೃಹತ್‌ ಸಮಾವೇಶಗಳ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಿಕೊಂಡಿದ್ದರು. ರಾಯಣ್ಣ ಬ್ರಿಗೇಡ್‌ ಸಮಾವೇಶಗಳಲ್ಲಿ ಸಿದ್ದರಾಮಯ್ಯ ಭಾಗವಹಿಸದಿದ್ದರೂ ಅದು ಈ ಮಟ್ಟಕ್ಕೆ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಇದು ಕುರುಬರ ಇತಿಹಾಸದಲ್ಲಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ನಡೆದ ಅತಿದೊಡ್ಡ ಸಮಾವೇಶ ಎನ್ನಲಾಗಿದೆ.