ಅಪ್ರಾಪ್ತ ಗರ್ಭಿಣಿಯರಿಗೆ ಭ್ರೂಣ ಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿದ ಆರೋಪದ ಮೇಲೆ ಮಂಡ್ಯ ಜಿಲ್ಲೆಯಲ್ಲಿ ಮೂವರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ., ಒಟ್ಟು 17 ಆರೋಪಿಗಳ ವಿರುದ್ಧ 12 ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು.

ಭ್ರೂಣ ಲಿಂಗ ಪತ್ತೆಗೆ ಸ್ಕ್ಯಾನಿಂಗ್ ಮಾಡಿದ ವೈದ್ಯರಿಗೆ ಎಫ್‌ಐಆರ್‌

ಮಂಡ್ಯ: ಅಪ್ರಾಪ್ತ ಗರ್ಭಿಣಿಯರಿಗೆ ಭ್ರೂಣ ಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿದ ಆರೋಪದ ಮೇಲೆ ಮಂಡ್ಯ ಜಿಲ್ಲೆಯಲ್ಲಿ ಮೂವರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಕೆಆ‌ರ್ ಪೇಟೆ ಚೇತನ ಮೆಟರ್ನಿಟಿ ಸೆಂಟರ್‌ನ ಡಾ.ದಿವ್ಯಾ ಚೇತನ, ನಾವಿ ಡಯಾಗ್ನಸ್ಟಿಕ್ ಸೆಂಟರ್ ಡಾ.ಹರ್ಷಿತ್, ಕುಶಾಲ್ ಡಯಾಗ್ನಸ್ಟಿಕ್ ಸೆಂಟರ್‌ನ ಡಾ.ಹರೀಶ್ ಬಂಧಿತರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಠಾಣೆಗಳಲ್ಲಿ 17 ಆರೋಪಿಗಳ ವಿರುದ್ಧ ಪ್ರತ್ಯೇಕವಾಗಿ ಒಟ್ಟು 12 ಎಫ್‌ಐಆರ್ ದಾಖಲಾಗಿವೆ.

ಅಪ್ರಾಪ್ತ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿ ಭ್ರೂಣ ಪತ್ತೆ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಪ್ರಿಯಾಂಕಾ ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದು ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸರ್ಕಾರಿ ವೈದ್ಯೆ, ಮೂವರು ಖಾಸಗಿ ವೈದ್ಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ.

ಈ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದ್ದರು. ಕೆಆರ್ ಪೇಟೆಯ 2 ಡಯಾಗ್ನೋಸ್ಟಿಕ್ ಸೆಂಟರ್‌ಗಳಲ್ಲಿ ಭ್ರೂಣಲಿಂಗ ಪತ್ತೆ ನಡೆದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ನಾವಿ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ 2024ರಲ್ಲಿ 19 ಮತ್ತು 2025ರಲ್ಲಿ 5 ಸೇರಿದಂತೆ ಒಟ್ಟು 24 ಅಪ್ರಾಪ್ತ ಗರ್ಭಿಣಿಯರಿಗೆ ಸ್ಕ್ಯಾನಿಂಗ್‌ ಮಾಡಲಾಗಿತ್ತು. ಕುಶಾಲ್ ಡಯಾಗ್ನಾಸ್ಟಿಕ್‌ ಸೆಂಟರ್‌ನಲ್ಲಿ 7 ಅಪ್ರಾಪ್ತ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿದ ಆರೋಪ ಕೇಳಿ ಬಂದಿದೆ.