SC ST Reservation: ಎಸ್ಸಿ, ಎಸ್ಟಿ ಮೀಸಲು ಏರಿಕೆ ಮಸೂದೆ ಮಂಡನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ವಿಧೇಯಕ ಮಂಡಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ
ವಿಧಾನಸಭೆ(ಡಿ.21): ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ (ಎಸ್‌ಸಿ/ಎಸ್‌ಟಿ) ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಸಂಬಂಧ ಹೊರಡಿಸಿದ್ದ ಸುಗ್ರೀವಾಜ್ಞೆಯ ಮುಂದುವರೆದ ಭಾಗವಾಗಿ ‘ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ-2022’ ಅನ್ನು ಮಂಗಳವಾರ ಸದನದಲ್ಲಿ ಮಂಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಮಂಡಿಸಿದರು. ಎಸ್‌ಸಿ ವರ್ಗಕ್ಕೆ ಪ್ರಸ್ತುತ ಶೇ.15 ಮೀಸಲಾತಿ ಇದ್ದು, ಅದನ್ನು ಶೇ.17ಕ್ಕೆ ಮತ್ತು ಎಸ್‌ಟಿ ವರ್ಗದ ಮೀಸಲಾತಿ ಶೇ.3 ಇದ್ದು, ಅದನ್ನು ಶೇ.7ಕ್ಕೆ ಹೆಚ್ಚಿಸುವ ಕುರಿತು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಸರ್ಕಾರವು ಸರ್ವಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಂಡಿತ್ತು. ಬಳಿಕ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಸುಗ್ರೀವಾಜ್ಞೆ ಹೊರಡಿಸಿತ್ತು. ಇದೀಗ ಸದನದಲ್ಲಿ ವಿಧೇಯಕ ಮಂಡಿಸುವ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಳ ಅನುಷ್ಠಾನಕ್ಕೆ ಮುಂದಾಗಿದೆ.
ಬೆಳಗಾವಿಯಲ್ಲಿ 4 ಹೊಸ ಮಸೂದೆ ಮಂಡನೆ: ಕಾಗೇರಿ
ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಸಂವಿಧಾನಬದ್ಧವಾಗಿ ಉದ್ಯೋಗ ಮತ್ತು ಶೈಕ್ಷಣಿಕವಾಗಿ ಸಾಕಷ್ಟುಪ್ರಾತಿನಿಧ್ಯ ಇಲ್ಲ. ಹೆಚ್ಚಳ ಮಾಡುವಂತೆ ಪರಿಶಿಷ್ಟಮುಖಂಡರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರು. ಅಲ್ಲದೇ, ನಾಯಕ ವಿದ್ಯಾರ್ಥಿ ಸಂಘವು ಹೈಕೋರ್ಚ್ ಮೊರೆ ಹೋಗಿತ್ತು. ನ್ಯಾಯಾಲಯವು ಈ ಬಗ್ಗೆ ಗಮನಹರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು. ಇದರ ಆಧಾರ ಮೇಲೆ ಸರ್ಕಾರವು ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು.
ಆಯೋಗವು ಸಂಪೂರ್ಣವಾಗಿ ಅಧ್ಯಯನ ನಡೆಸಿ ವರದಿಯನ್ನು ನೀಡಿತು. ವರದಿಯಲ್ಲಿ, ಈಗಲೂ ಮುಖ್ಯವಾಹಿನಿಯಿಂದ ಎಸ್‌ಸಿ/ಎಸ್‌ಟಿ ಸಮುದಾಯದ ಹಲವು ಜಾತಿಗಳು ಹೊರಗಿವೆ. ಅಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿದೆ ಎಂದು ತಿಳಿಸಿತು. ಅಲ್ಲದೇ, ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ಶೈಕ್ಷಣಿಕ ಸಂಸ್ಥೆ ಮತ್ತು ಸರ್ಕಾರಿ ಉದಯೋಗದಲ್ಲಿ ಪ್ರಾತಿನಿಧ್ಯ ಸಾಕಷ್ಟುಇಲ್ಲ. ಈ ಹಿಂದುಳಿದಿರುವಿಕೆಯಿಂದ ಹೊರಬರಲು ತೀವ್ರ ಕಷ್ಟಕರವಾಗಿದೆ. ಹೀಗಾಗಿ ಎಸ್‌ಸಿಗೆ ಶೇ.17ರಷ್ಟುಮತ್ತು ಎಸ್‌ಟಿಗೆ ಶೇ.7ರಷ್ಟುಮೀಸಲಾತಿ ನೀಡುವುದು ಸೂಕ್ತ ಎಂದು ವರದಿ ಹೇಳಿದೆ.
ನ್ಯಾ.ನಾಗಮೋಹನದಾಸ್ ಆಯೋಗದ ವರದಿ ಅನುಷ್ಠಾನವನ್ನು ಅವಲೋಕಿಸಲು ಸರ್ಕಾರವು ನ್ಯಾ.ಸುಭಾಷ್ ಬಿ ಅಡಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ನೇಮಕ ಮಾಡಿತು. ಆ ಸಮಿತಿಯು ಸಹ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ವರದಿ ನೀಡಿದರಿಂದ ಸರ್ಕಾರವು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಮಹತ್ವದ ತೀರ್ಮಾನ ಕೈಗೊಂಡು ಸುಗ್ರೀವಾಜ್ಞೆ ಹೊರಡಿಸಿತ್ತು.
ಈಗಾಗಲೇ ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಿರುವುದರಿಂದ ರಾಜ್ಯದಲ್ಲಿಯೂ ಶೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡಲು ಈ ತೀರ್ಮಾನ ಕೈಗೊಂಡಿತ್ತು.