ನವದೆಹಲಿ[ಫೆ.19]: ಇತ್ತೀಚೆಗೆ ಬೆಂಗಳೂರಿನ ಎಚ್‌ಎಲ್‌ನಲ್ಲಿ ಮಿರಾಜ್‌-2000 ತರಬೇತಿ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಘಟನೆ ಸೇರಿದಂತೆ ಯುದ್ಧ ವಿಮಾನ ದುರಂತಗಳನ್ನು ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಸೋಮವಾರ ನಿರಾಕರಿಸಿದೆ.

ಮುಖ್ಯನ್ಯಾಯಮೂರ್ತಿ ನ್ಯಾ| ರಂಜನ್‌ ಗೊಗೋಯ್‌ ಹಾಗೂ ನ್ಯಾ| ಸಂಜೀವ್‌ ಖನ್ನಾ ಅವರಿದ್ದ ಪೀಠ, ಯುದ್ಧ ವಿಮಾನಗಳ ದುರಂತಗಳನ್ನು ನ್ಯಾಯಾಂಗ ತನಿಖೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಪತನಗೊಂಡ HAL ವಿಮಾನ: ಪೈಲಟ್ ಸಾವು

ಇದೇ ವೇಳೆ ಮೀರಜ್‌ ಯುದ್ಧ ವಿಮಾನ ಯಾವ ತಲೆಮಾರಿಗೆ ಸೇರಿದ್ದಾಗಿದೆ ಎಂದು ಅರ್ಜಿದಾರರ ಪರ ವಕೀಲರನ್ನು ಕೋರ್ಟ್‌ ಪ್ರಶ್ನಿಸಿತು. ಆದರೆ, ವಕೀಲರಿಂದ ಉತ್ತರ ಬಾರದೇ ಇದ್ದಾಗ, ಮೀರಜ್‌ ಯುದ್ಧ ವಿಮಾನ 3.5ನೇ ತಲೆಮಾರಿಗೆ ಸೇರಿದೆ ಎಂಬ ಮಾಹಿತಿಯನ್ನು ನ್ಯಾಯಾಧೀಶರು ನೀಡಿದರು. ಬಳಿಕ ‘ಯುದ್ಧ ವಿಮಾನದ ಕುರಿತಾದ ಮಾಹಿತಿಗಳೇ ನಿಮಗೆ ಗೊತ್ತಿಲ್ಲ. ಆದರೆ, ನೀವು ನ್ಯಾಯಾಂಗ ತನಿಖೆ ಬಯಸುತ್ತಿದ್ದೀರಿ’ ಎಂದು ಕೋರ್ಟ್‌ ತರಾಟೆ ತೆಗೆದುಕೊಂಡಿತು.