ಸ್ಯಾಂಟ್ರೋ ರವಿಯಿಂದ ನನಗೆ ಮಾರಕ ಸೋಂಕು: ಪತ್ನಿಯಿಂದ ಹೇಳಿಕೆ
ವಂಚಕ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ಆತನ ಪತ್ನಿಯನ್ನು ಶನಿವಾರ ಸಿಐಡಿ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು (ಜ.22): ವಂಚಕ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಅತ್ಯಾಚಾರ ಪ್ರಕರಣ ಸಂಬಂಧ ಆತನ ಪತ್ನಿಯನ್ನು ಶನಿವಾರ ಸಿಐಡಿ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನೋಟಿಸ್ ಹಿನ್ನೆಲೆಯಲ್ಲಿ ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ತನಿಖಾಧಿಕಾರಿ ಮುಂದೆ ಹಾಜರಾದ ರವಿ ಪತ್ನಿಯನ್ನು ನಾಲ್ಕು ಗಂಟೆಗಳ ಸುದೀರ್ಘವಾಗಿ ಪ್ರಶ್ನಿಸಿ ಅಧಿಕಾರಿಗಳು ಹೇಳಿಕೆ ಪಡೆದಿದ್ದಾರೆ.
ಈ ವೇಳೆ ತಾವು ರವಿ ವಿರುದ್ಧ ಮಾಡಿರುವ ಆರೋಪಗಳಿಗೆ ಅವರು ಪೂರಕ ದಾಖಲೆಗಳನ್ನು ಕೂಡ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ನನಗೆ ಬೆದರಿಕೆ ಹಾಕಿ ಬಲವಂತವಾಗಿ ಲೈಂಗಿಕ ಶೋಷಣೆ ಮಾಡಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ನನ್ನ ಮೇಲೆ ಅತ್ಯಾಚಾರಗಳು ನಡೆದಿವೆ. ಈ ವೇಳೆ ನನಗೆ ಮಾರಣಾಂತಿಕ ಸೋಂಕು ಹರಡಲು ಕೂಡಾ ರವಿ ಕಾರಣವಾಗಿದ್ದಾನೆ ಎಂದು ಸಂತ್ರಸ್ತೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
Grama Vastavya: ಜನರಿಗೆ ಮತ್ತೆ 10 ಕೆ.ಜಿ ಪಡಿತರ ಅಕ್ಕಿ: ಸಚಿವ ಅಶೋಕ್
ಸ್ಯಾಂಟ್ರೋ ರವಿ ಮನೆಗಳ ತಪಾಸಣೆ: ಇದೇ ಪ್ರಕರಣ ಸಂಬಂಧ ಸ್ಯಾಂಟ್ರೋ ರವಿ ಮನೆ ಹಾಗೂ ಕಚೇರಿಗಳಲ್ಲಿ ಸಿಐಡಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಶೇಷಾದ್ರಿಪುರ ಮತ್ತು ಬಸವನಗುಡಿಯಲ್ಲಿರುವ ಮನೆಗಳು ಹಾಗೂ ಟ್ರಿನಿಟಿ ವೃತ್ತ ಸಮೀಪದಲ್ಲಿದ್ದ ಕಚೇರಿ ಮೇಲೆ ಸಿಐಡಿ ಡಿವೈಎಸ್ಪಿ ಅಂಜುಮಾಲ ನಾಯಕ್ ತಂಡ ದಾಳಿ ನಡೆಸಿ ಪರಿಶೀಲಿಸಿದೆ. ಅತ್ಯಾಚಾರ ನಡೆದಿದ್ದ ಎನ್ನಲಾದ ಸ್ಥಳಗಳಲ್ಲಿ ಕೂಡಾ ಆರೋಪಿ ರವಿ ಸಮಕ್ಷಮದಲ್ಲಿ ಮಹಜರ್ ಕೂಡಾ ತನಿಖಾ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಲ್ಲ ಸುಳ್ಳು ಆರೋಪ-ಸ್ಯಾಂಟ್ರೋ ರವಿ: ತನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಿಚಾರಣೆ ವೇಳೆ ಸ್ಯಾಂಟ್ರೋ ರವಿ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಗೆ ಆರೋಪಿ ಸಹಕರಿಸುತ್ತಾನೆ. ಆದರೆ ತನ್ನ ಮೇಲೆ ಆರೋಪಗಳನ್ನು ಆತ ಬಲವಾಗಿ ನಿರಾಕರಿಸುತ್ತಾನೆ. ನಾನು ಮದುವೆಯೇ ಆಗಿಲ್ಲ. ಹಣಕ್ಕಾಗಿ ನನ್ನ ಮೇಲೆ ಆರೋಪ ಮಾಡಲಾಗಿದೆ ಎಂದು ಆತ ದೂರಿದ್ದಾನೆ ಎನ್ನಲಾಗಿದೆ.
ಯತ್ನಾಳ್‌ಗೆ ಬಿಜೆಪಿಯ ಶಿಸ್ತುಸಮಿತಿ ಬುಲಾವ್, ವಿವರಣೆ ಪಡೆದು ಕ್ರಮ: ನಳಿನ್ ಕಟೀಲ್
ಸ್ಯಾಂಟ್ರೋ ರವಿ ಕೇಸ್ ಮುಚ್ಚಲು ಯತ್ನ: ಸ್ಯಾಂಟ್ರೋ ರವಿ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕುವ ಪ್ರಯತ್ನದಲ್ಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ರವಿ ಒಬ್ಬ ಪಿಂಪ್, ವೇಶ್ಯಾವಾಟಿಕೆ, ವರ್ಗಾವಣೆ ದಂಧೆ ಮತ್ತು ಪೋಕ್ಸೋ ಪ್ರಕರಣದ ಆರೋಪಿ. ಆತ ಹೊರ ಬಂದರೆ ತಮ್ಮ ಬಂಡವಾಳ ಎಲ್ಲಿ ಹೊರಗೆ ಬರುತ್ತದೆಯೋ ಎಂಬ ಕಾರಣಕ್ಕೆ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದು ದೂರಿದರು. ಪ್ರಕರಣದ ವಿಚಾರಣೆಯನ್ನು ರಾಜ್ಯ ಪೊಲೀಸ್‌ನ ಒಂದು ಘಟಕವೇ ಆದ ಸಿಐಡಿಗೆ ವಹಿಸಿದ್ದು ಏಕೆ? ಆತನನ್ನು ಆರಂಭದಲ್ಲೇ ಏಕೆ ವಶಕ್ಕೆ ಪಡೆಯಲಿಲ್ಲ? ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವುದು ಏಕೆ? ಇದೆಲ್ಲದರ ಹಿಂದೆ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ ಎಂದು ಆರೋಪಿಸಿದರು.