ವರನಟ ರಾಜ್‌ಕುಮಾರ್ ಬಳಿಕ ಕಾವೇರಿ ಹೋರಾಟಕ್ಕಿಳಿದ ದೊಡ್ಡಮನೆ ಕುಡಿ: ಪ್ರಾಣಾನೇ ಮುಡಿಪಾಗಿಡೋದಾಗಿ ಪ್ರಮಾಣ
ಕರ್ನಾಟಕದಲ್ಲಿ ಕಾವೇರಿ ಹೋರಾಟದ ಕಿಚ್ಚು ಹೆಚ್ಚಾದ ಕೂಡಲೇ ದೊಡ್ಡಮನೆ ಕುಡಿ ಡಾ.ರಾಜ್‌ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಅವರು ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಸೆ.21): ಕರ್ನಾಟಕದಲ್ಲಿ ಕಾವೇರಿ ಹೋರಾಟದ ಕಿಚ್ಚು ಹೆಚ್ಚಾದ ಕೂಡಲೇ ದೊಡ್ಡಮನೆ ಕುಡಿ ಡಾ.ರಾಜ್‌ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಅವರು ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಕಾವೇರಿ ನೀರಿಗಾಗಿ ನಮ್ಮ ಪ್ರಾಣವನ್ನೇ ಮುಡಿಪಾಗಿಡುತ್ತೇವೆ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ.
ಕನ್ನಡ ನಾಡಿನ ಜೀವನದಿ ಕಾವೇರಿ... ಎಂದು ಸಿನಿಮಾದಲ್ಲಿ ಹಾಡಿ ಕುಣಿದ ಡಾ. ವಿಷ್ಣುವರ್ಧನ್, ಕಾವೇರಮ್ಮ ಕಾಪಾಡಮ್ಮ ಎಂದು ಹಾಡಿ ಕುಣಿದ ಮಂಡ್ಯದ ಗಂಡು ಅಂಬರೀಶ್ ಹಾಗೂ ಕನ್ನಡದ ಕನ್ಮಣಿ ವರನಟ ಡಾ.ರಾಜ್ ಕುಮಾರ್ ಅವರು ಕರ್ನಾಟಕದಲ್ಲಿ ಕಾವೇರಿ ಹೋರಾಟ ಆರಂಭವಾದ ತಕ್ಷಣವೇ ಅವರೂ ಕೂಡ ಹೋರಾಟಗಾರರ ಜೊತೆಗೆ ಬಂದು ಕೈಜೋಡಿಸುತ್ತಿದ್ದರು. ಅದರೆ, ಈ ವರ್ಷ ಕಾವೇರಿ ನೀರಿನ ಹೋರಾಟ ಆರಂಭವಾದರೂ ಯಾವೊಬ್ಬ ನಟರೂ ಕಾವೇರಿ ಹೋರಾಟಕ್ಕೆ ಬರಲಿಲ್ಲ. ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದೆ ಸಿನಿಮಾ ನಟರೂ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಧಿಕ್ಕಾರ ಕೂಗಿದ ನಂತರ ಒಬ್ಬೊಬ್ಬರೇ ಕಾವೇರಿ ಹೋರಾಟಕ್ಕೆ ಕೈ ಎತ್ತುತ್ತಿದ್ದಾರೆ.
ಕರ್ನಾಟಕಕ್ಕೆ ಮತ್ತೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್! ಪ್ರತಿದಿನ 5000 ಕ್ಯೂಸೆಕ್ಸ್ ಕಾವೇರಿ ನೀರು ಬಿಡಲು ಆದೇಶ
ಪ್ರಾಣ ಮುಡಿಪಾಗಿಡುವುದಾಗಿ ಬೆಂಬಲ ನೀಡಿದ ರಾಘವೇಂದ್ರ ರಾಜ್‌ಕುಮಾರ್: ಕರ್ನಾಟಕ ಕಾವೇರಿ ಹೋರಾಟದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್ ಅವರು, ನನ್ನ ತಂದೆ ಕೆಲವೊಂದು ನಮಗೆ ವಿಚಾರಗಳನ್ನ ಕಲಿಸಿಕೊಟ್ಟು ಹೋಗಿದ್ದಾರೆ. ನಾಡು ನುಡಿ, ನೀರು ವಿಚಾರವಾಗಿ ಜತೆಗೆ ಇರಬೇಕು ಎಂದು ಹೇಳಿಕೊಟ್ಟಿದ್ದಾರೆ. ಇದಕ್ಕೆ ನಮ್ಮ ಪ್ರಾಣನೇ ಮುಡಿಪಾಗಿ ಇಡುತ್ತೇವೆ. ಸದ್ಯಕ್ಕೆ ಇದರ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ನಮ್ಮ ನಮ್ಮ ಪಾತ್ರ ಬಂದಾಗ ಜನನೇ ನಮ್ಮನ್ನು ಕರೆಸಿಕೊಳ್ಳುತ್ತಾರೆ. ನಾವು ಜನರ ಜತೆಯಾಗಿಯೇ ಇರುತ್ತೇವೆ. ಎಲ್ಲರೂ ಒಟ್ಟಿಗೆ ಸೇರಿಕೊಂಡು ಹೋರಾಟ ಮಾಡಬೇಕು. ನಮ್ಮನ್ನು ತಾವು ಯಾವಾಗ ಎಲ್ಲಿಗೆ ಕರೆದ್ರು ಬರುತ್ತೇನೆ ಎಂದು ಹೇಳಿದರು.
ಕರ್ನಾಟಕ ಬಂದ್‌ಗೆ ಕರೆ ನೀಡಲು ನಿರ್ಧಾರ: ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಚಿತ್ರರಂಗದ ನಟರ ವಿರುದ್ಧ ಧಿಕ್ಕಾರ ಕೂಗಿದ ಬೆನ್ನಲ್ಲಿಯೇ ದರ್ಶನ್ ತೂಗುದೀಪ, ಕಿಚ್ಚ ಸುದೀಪ್, ಉಪೇಂದ್ರ ಸೇರಿದಂತೆ ಹಲವು ನಾಯಕ ನಟರು ಕಾವೇರಿ ಹೋರಾಟಗಾರರಿಗೆ ಬೆಂಬಲವನ್ನು ನೀಡಿದ್ದಾರೆ. ಇನ್ನು ಮಂಡ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹೋರಾಟ ಶುರುವಾಗಿದ್ದು, ಕನ್ನಂಬಾಡಿ ಕಟ್ಟೆಗೆ (ಕೆಆರ್‌ಎಸ್ ಜಲಾಶಯ) ಮುತ್ತಿಗೆ ಹಾಕಿ ನೀರು ಬಿಡದಂತೆ ರೈತರು ಒತ್ತಾಯಿಸಿದ್ದರು. ಆದರೆ, ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಕೂಡ ಹೋರಾಟ ಮಾಡಿದ್ದಾರೆ. ಇನ್ನು ಕರವೇ ವತಿಯಿಂದ ಕರ್ನಾಟಕ ಬಂದ್ ಮಾಡುವುದಾಗಿ ಕರೆ ನೀಡಿದ್ದು, ಇನ್ನೂ ದಿನಾಂಕ ನಿಗದಿ ಮಾಡಿಲ್ಲ.
ಕಾವೇರಿ ಹೋರಾಟಕ್ಕೆ ಧುಮಿಕಿದ ಮೊದಲ ಕನ್ನಡ ನಟ ದರ್ಶನ್ ತೂಗುದೀಪ
ಕೋರ್ಟ್‌ನಲ್ಲಿ ಕಾವೇರಿ ಒತ್ತಯಿಟ್ಟು ಸೋತು ಬಂದ ಸರ್ಕಾರ: ಇನ್ನು ಕಾವೇರಿ ಹೋರಾಟದ ನಡುವೆಯೂ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಕರ್ನಾಟಕ ಸರ್ಕಾರಕ್ಕೆ ಸೋಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣಾ ಸಮಿತಿಯ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಮುಂದಿನ 15 ದಿನಗಳ ಕಾಲ ತಲಾ 5,000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶವನ್ನು ಹೊರಡಿಸಿದೆ. ಇದರ ಬೆನ್ನಲ್ಲಿಯೇ ಕಾವೇರಿ ಹೋರಾಟದ ಕಿಚ್ಚು ರಾಜ್ಯದಲ್ಲಿ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ 5 ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ.