ಬೆಂಗಳೂರು :  ಚಿತ್ರನಟ ಯಶ್‌ ಅವರು ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಣೆಗೆ ನಿರಾಕರಿಸಿದ್ದರಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಅಭಿಮಾನಿ ರವಿ ಚಿಕಿತ್ಸೆ ಫಲಿಸದೆ ಮಂಗಳವಾರ ತಡರಾತ್ರಿ ಮೃತಪಟ್ಟಿದ್ದಾನೆ.

ಮರಣಶಯ್ಯೆಯಲ್ಲಿ ಇದ್ದಾಗಲೂ ತನ್ನ ಯೋಗಕ್ಷೇಮ ವಿಚಾರಣೆಗೆ ಆಗಮಿಸಿದ ಯಶ್‌ ಅವರಿಗೆ ರವಿ ಜನ್ಮದಿನದ ಶುಭಾಶಯ ಕೋರಿದ. ಆ ವೇಳೆ ತುಂಬಾ ಭಾವುಕರಾದ ಯಶ್‌, ಕೈಮುಗಿದು ರವಿಯ ಪೋಷಕರಿಗೆ ಮಗನ ಸ್ಥಿತಿ ಕುರಿತು ಕ್ಷಮೆ ಕೋರಿದರು. ಇದಾದ ಕೆಲ ಹೊತ್ತಿನ ಬಳಿಕ ರವಿ ಕೊನೆಯುಸಿರೆಳೆದ.

ಮಂಗಳವಾರ ಯಶ್‌ ಅವರ ಜನ್ಮದಿನವಾಗಿತ್ತು. ಪ್ರತಿ ವರ್ಷದಂತೆ ನೆಚ್ಚಿನ ನಟನಿಗೆ ಶುಭಕೋರಲು ಹೊಸಕೆರೆಹಳ್ಳಿಯ ಅವರ ಮನೆಗೆ ರವಿ ತೆರಳಿದ್ದ. ಆದರೆ ಅಂಬರೀಷ್‌ ನಿಧನದ ಹಿನ್ನೆಲೆಯಲ್ಲಿ ಹುಟ್ಟು ಆಚರಣೆಗೆ ಯಶ್‌ ನಿರಾಕರಿಸಿದ್ದರು. ಇದರಿಂದ ಬೇಸತ್ತು ಆತ ಅಲ್ಲಿಯೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ರವಿ ದೇಹ ಶೇ.80ರಷ್ಟುಸುಟ್ಟು ಹೋಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ರಾತ್ರಿ 1.45ರ ಸುಮಾರಿಗೆ ಮೃತಪಟ್ಟಿದ್ದಾನೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಡಾ.ಕೆ.ಟಿ.ರಮೇಶ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಯಶ್‌, ‘ಈ ರೀತಿಯ ವರ್ತನೆಯನ್ನು ಅಭಿಮಾನ ಎಂದೂ ಯಾರೂ ಹೇಳುವುದಿಲ್ಲ. ಮನುಷ್ಯತ್ವವಿರುವ ಯಾರಿಗೂ ಇದೂ ಸಂತೋಷ ತರುವುದಿಲ್ಲ. ಯಾರೊಬ್ಬರೂ ನನಗೆ ಇಂಥ ಪ್ರೀತಿ ತೋರಿಸುವುದು ಬೇಡ’ ಎಂದು ಬೇಸರ ತೋಡಿಕೊಂಡರು.