ಬೆಂಗಳೂರು (ಅ.21):  ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್‌ ಧರ್ಮದ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಿ ಎಲ್ಲ ವಿದ್ಯಾವಂತರಿಗೆ ಮಾಡಿರುವ ಅವಮಾನ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಟೀಕಿಸಿದ್ದಾರೆ.

ಈ ಸಂಬಂಧ ಅಭ್ಯರ್ಥಿಗಳ ಪಟ್ಟಿಸಮೇತ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪ್ರಕಾಶ್‌ ಸಂಬರಗಿ ಅವರು, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರವೀಣ್‌ ಕುಮಾರ್‌ ಅವರು ಪೀಟರ್‌ ಆಗಿದ್ದಾರೆ. ಇದನ್ನೇ ಅರ್ಹತೆಯಾಗಿ ಪರಿಗಣಿಸಿ ಧರ್ಮದ ಆಧಾರದ ಮೇಲೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ ಎಂದು ಟೀಕೆ ಮಾಡಿದ್ದಾರೆ.

ಅಲ್ಲದೆ, ಇಂತಹ ಆಯ್ಕೆ ಮಾಡಿರುವ ಕಾಂಗ್ರೆಸ್‌ಗೆ ಏಸುವೇ ಬುದ್ಧಿಕೊಡಬೇಕು ಎಂದೂ ವ್ಯಂಗ್ಯ ಮಾಡಿದ್ದಾರೆ. ಇದಲ್ಲದೆ, ಅಭ್ಯರ್ಥಿ ಪ್ರವೀಣ್‌ ಕುಮಾರ್‌ ಅವರು ಕೇವಲ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ತನ್ಮೂಲಕ, ‘ಶಿಕ್ಷಕರ ಕ್ಷೇತ್ರಕ್ಕೆ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದನ್ನು ಕಾಂಗ್ರೆಸ್‌ನ ಅಭ್ಯರ್ಥಿಗೆ ಮತ ಹಾಕೋ ಶಿಕ್ಷಕರಷ್ಟಾದರೂ ವಿದ್ಯಾರ್ಹತೆ ಅಭ್ಯರ್ಥಿಗೆ ಬೇಡವಾ?’ ಎಂದು ಪ್ರಶ್ನಿಸಿದ್ದಾರೆ.

ಶಾಕಿಂಗ್; 'ಬಿಗ್‌ಬಾಸ್‌ನಲ್ಲಿದ್ದ ಎಲ್ಲರ ನೆಚ್ಚಿನ ಈ ನಟಿಯೂ ಡ್ರಗ್ಸ್ ದಾಸಿ' ...

ಅಲ್ಲದೆ, ‘ಪ್ರವೀಣ್‌ ಹೋಗಿ ಪೀಟರ್‌ ಆಗಿದ್ದನ್ನೇ ಕಾಂಗ್ರೆಸ್‌ ಅರ್ಹತೆಯಾಗಿ ಪರಿಗಣಿಸಿದೆ ಎನ್ನುವ ಮೂಲಕ ಧರ್ಮದ ಆಧಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಮಾಡಿದೆ’ ಎಂದು ಆರೋಪಿಸಿದ್ದಾರೆ.

ಸಂಬರಗಿ ಬರೆದಿರೋದಿಷ್ಟು: ‘ಶಿಕ್ಷಕರ ಕ್ಷೇತ್ರಕ್ಕೆ ಧರ್ಮದ ಆಧಾರದ ಮೇಲೆ ಚುನಾವಣಾ ಟಿಕೆಟ್‌ ಕೊಡುವುದು ಶಿಕ್ಷಕರಿಗೆ ಮಾತ್ರವಲ್ಲ. ಎಲ್ಲಾ ವಿದ್ಯಾವಂತರಿಗೂ ಮಾಡಿರುವ ಅವಮಾನ. ಪ್ರವೀಣ್‌ ಹೋಗಿ ಪೀಟರ್‌ ಆದದ್ದೇ ಅರ್ಹತೆಯೇ? ವೋಟ್‌ ಹಾಕೋ ಶಿಕ್ಷಕರಷ್ಟಾದರು ಓದು-ಬರಹ ಬೇಡವೇ? ಆ ಏಸುವೇ ಕಾಂಗ್ರೆಸ್ಸಿಗೆ ಬುದ್ಧಿ ಕೊಡಬೇಕು’ ಎಂದು ಫೇಸ್‌ಬುಕ್‌ನಲ್ಲಿ ಪ್ರಶಾಂತ್‌ ಸಂಬರಗಿ ಟೀಕಿಸಿದ್ದಾರೆ.