ಸಾರಿಗೆ ನೌಕರರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಕರ್ನಾಟಕ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸಾರಿಗೆ ನೌಕರರಿಗೆ ಶುಭ ಸಮಾಚಾರ ಒಂದನ್ನು ನೀಡಿದ್ದಾರೆ. ಅವರು ನೀಡಿದ ಆ ಸುದ್ದಿ ಏನು..?
ಮಂಗಳೂರು (ಜ.31): ಕೆಎಸ್‌ಆರ್‌ಟಿಸಿ ನಾಲ್ಕು ನಿಗಮಗಳ ಸಾರಿಗೆ ಸಿಬ್ಬಂದಿಗೆ ಬಾಕಿಯುಳಿದ ಅರ್ಧ ವೇತನವನ್ನು ಡಿಸೆಂಬರ್ ಅಂತ್ಯದೊಳಗೆ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಜನವರಿ ತಿಂಗಳ ವೇತನವನ್ನೂ ಇಷ್ಟರಲ್ಲೇ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಸಾರಿಗೆ ಸಿಬ್ಬಂದಿ ವೇತನ ವಿಚಾರದಲ್ಲಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಲಾಕ್‌ಡೌನ್ ವೇಳೆ 2 ತಿಂಗಳ ಕಾಲ ಸಾರಿಗೆ ಸಂಚಾರ ಸ್ತಬ್ಧವಾಗಿತ್ತು. ಆದರೂ ಸರ್ಕಾರ ಸಾರಿಗೆ ನೌಕರರಿಗೆ 2 ತಿಂಗಳ 650 ಕೋಟಿ ರು. ವೇತನ ಪಾವತಿಸಿದೆ. ನಂತರ ಹಂತ ಹಂತವಾಗಿ ಸಾರಿಗೆ ಸಂಚಾರ ಆರಂಭವಾದ ಬಳಿಕ 7 ತಿಂಗಳ ವೇತನವನ್ನು ಶೇ.75 ಸರ್ಕಾರ ಹಾಗೂ ಶೇ.25 ನಿಗಮ ಸೇರಿಸಿ ನೀಡಿದೆ. ಇಲ್ಲಿವರೆಗೆ 1,760 ಕೋಟಿ ರು. ಮೊತ್ತವನ್ನು ಸರ್ಕಾರದಿಂದ ಪಡೆದು 1.30 ಲಕ್ಷ ಸಾರಿಗೆ ಸಿಬ್ಬಂದಿಗೆ ವೇತನ ನೀಡಲಾಗಿದೆ. ಡಿಸೆಂಬರ್‌ನಲ್ಲಿ ಅರ್ಧ ಸಂಬಳ ಮಾತ್ರ ನೀಡಲಾಗಿದೆ. ಅದನ್ನು ಕೂಡ ಮೂರ್ನಾಲ್ಕು ದಿನಗಳಲ್ಲಿ ಭರ್ತಿಯಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೊರೋನಾದಿಂದ ಸಾರಿಗೆ ಸಂಸ್ಥೆಯ 1.30 ಲಕ್ಷ ನೌಕರರಿಗೆ ಸಮಸ್ಯೆ: ಡಿಸಿಎಂ ಸವದಿ .
ನಾಲ್ಕು ದಿನಗಳ ಕಾಲ ಸಾರಿಗೆ ಸಿಬ್ಬಂದಿ ನಡೆಸಿದ ಮುಷ್ಕರ ಬಳಿಕ ಅವರ 10 ಬೇಡಿಕೆಗಳಲ್ಲಿ 9 ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಕೆಲವೇ ದಿನಗಳಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಲಿದೆ ಎಂದರು.
ನಿಗಮಗಳ ವಿಲೀನ ಇಲ್ಲ: ಕೆಎಸ್‌ಆರ್‌ಟಿಸಿಯ ನಾಲ್ಕು ನಿಗಮಗಳ ವಿಲೀನ ಕುರಿತು ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗ್ರಾಮೀಣ ಸಾರಿಗೆಯ ನೌಕರರಿಗೆ ಒಟಿ(ಓವರ್ ಟೈಮ್)ಭತ್ಯೆ ನೀಡಲು ಸೂಚನೆ ನೀಡಲಾಗಿದೆ ಎಂದರು.
ಮಂಗಳೂರಿನಲ್ಲಿ ಸಂಚಾರಕ್ಕೆ ಬಾಕಿ ಇರುವ 26 ನಮ್‌ರ್ ನಗರ ಸಾರಿಗೆ ಓಡಾಟ ಆರಂಭಿಸುವ ಬಗ್ಗೆ ಕೋರ್ಟ್ ತಡೆ ತೆರವಿಗೆ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು. ವಿವಿಧ ಸಾರಿಗೆ ಸಮಸ್ಯೆಗಳ ಇತ್ಯರ್ಥಕ್ಕೆ ಸಾರಿಗೆ ಇಲಾಖೆ, ಖಾಸಗಿ ಬಸ್ ಮಾಲೀಕರು ಹಾಗೂ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ತ್ವರಿತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.