ಗದಗ(ಜ.25): ಕೊರೋನಾ ಸೃಷ್ಟಿಸಿದ ಸಮ​ಸ್ಯೆ​ಯಿಂದಾಗಿ ರಾಜ್ಯ​ದ​ಲ್ಲಿಯೇ ಅತೀ ಹೆಚ್ಚು ನಷ್ಟಅನು​ಭ​ವಿ​ಸಿದ ಸಾರಿಗೆ ಸಂಸ್ಥೆ​ಯ 1.30 ಲಕ್ಷ ಸಿಬ್ಬಂದಿಗೆ ವೇತನ ನೀಡು​ವುದು ಸಮ​ಸ್ಯೆ​ಯಾ​ಗಿತ್ತು ಎಂದು ಸಾರಿಗೆ ಸಚಿವ, ಉಪ​ಮು​ಖ್ಯ​ಮಂತ್ರಿ ಲಕ್ಷ್ಮಣ ಸವದಿ ಹೇಳಿ​ದ್ದಾರೆ. 

ಭಾನು​ವಾರ ರಾತ್ರಿ ಗದಗ ನಗರದಲ್ಲಿ ನವೀಕೃತ ಗಾನಯೋಗಿ ಪಂ. ಪುಟ್ಟರಾಜ ಗವಾಯಿ ಬಸ್‌ ನಿಲ್ದಾಣ ಉದ್ಘಾಟನೆ ಮತ್ತು ಅಪಘಾತರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
2014ರಿಂದ ಬಸ್‌ ದರವನ್ನು ಹೆಚ್ಚಿಸಿಲ್ಲ ಹಾಗೂ ಸರ್ಕಾರ​ದಿಂದ ನಿಗಮಕ್ಕೆ 2980 ಕೋಟಿ ಬಾಕಿ ಹಣ ಒದಗಿಸಬೇಕಿದೆ. ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳು ಸೇರಿದಂತೆ ಒಟ್ಟಾರೆ 4000 ಕೋಟಿ ನಷ್ಟದಲ್ಲಿ ಸಂಸ್ಥೆ ನಡೆಯುತ್ತಿವೆ. ಸಂಸ್ಥೆಗಳಲ್ಲಿ ಪಾರದರ್ಶಕ ಆಡಳಿತ ಜಾರಿ ಮಾಡುವುದರೊಂದಿಗೆ ಹಣದ ಸೋರಿಕೆ ತಡೆದು ಸಂಸ್ಥೆಗಳ ನಷ್ಟ ಸರಿದೂಗಿಸುವ ಸಂಕಲ್ಪದೊಂದಿಗೆ ಸಾರಿಗೆ ಇಲಾಖೆ ಸಚಿವನಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮುನ್ನವೆ ಕೋವಿಡ್‌-19 ಮಹಾಮಾರಿ ಒಕ್ಕರಿಸಿದ್ದರಿಂದ ಹಿನ್ನೆಡೆಯುಂಟಾಯಿತು ಎಂದರು.

ಸಂಸ್ಥೆಯ ನೌಕ​ರ​ರಿ​ಗೆ ಒಂದು ತಿಂಗಳ ಸಿಬ್ಬಂದಿ ವೇತನ ಪಾವತಿಗೆ 326 ಕೋಟಿ ಅನುದಾನ ಅವಶ್ಯಕವಿತ್ತು. ಮುಖ್ಯಮಂತ್ರಿಗಳಲ್ಲಿ ಈ ಕುರಿತು ಮಾತನಾಡಿದಾಗ ಎರಡು ತಿಂಗಳುಗಳ ವೇತನದ ಅನುದಾನ ಸಂಸ್ಥೆಗೆ ಒದಗಿಸಿದರು. ಆದರೂ ಕೊರೋನಾ ಮುಗಿಯದ ಹಿನ್ನೆಲೆಯಲ್ಲಿ ಒಟ್ಟಾರೆ 5 ತಿಂಗಳ ವೇತನದ ಅನುದಾನ 1762 ಕೋಟಿಗಳನ್ನು ಸರ್ಕಾರ​ದಿಂದ ಪಡೆಯಲಾಗಿದೆ. ನೌಕರರು ರಾಜ್ಯಾದ್ಯಂತ ಪ್ರತಿಭಟನೆ ನಿರಂತರ ನಾಲ್ಕು ದಿನಗಳವರೆಗೆ ಸಾಗಿದ್ದರಿಂದ ಈಗಾಗಲೇ ನಷ್ಟದಲ್ಲಿರುವ ಸಂಸ್ಥೆಗೆ ಮತ್ತಷ್ಟುಹೊರೆಯಾಗಿ ಪರಿಣಮಿಸಿತು. ನೌಕರರ ಹತ್ತು ಬೇಡಿಕೆಗಳಲ್ಲಿ ಒಂಭತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದ್ದು, ಈ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.

ಗದಗ: ಕಳ್ಳತನ ತಡೆಯಲು ಬಂದ ಗೂರ್ಖಾ ಮೇಲೆ ಮಾರಣಾಂತಿಕ ಹಲ್ಲೆ

ಶಾಲಾ ಮಕ್ಕಳಿಗೆ ಉಚಿತ ಹಾಗೂ ರಿಯಾಯ್ತಿ ದರದಲ್ಲಿ ಬಸ್‌ ಪಾಸ್‌ಗಳನ್ನು ಒದಗಿಸುತ್ತಿದೆ. ಶಾಲಾ ಮಕ್ಕಳ ಪಾಲ​ಕ​ರು ​ದೈ​ನಂದಿನ ಕಾರ್ಯ​ಗ​ಳಿಗೆ ನಿತ್ಯ ಸರ್ಕಾರಿ ಬಸ್‌​ಗ​ಳಲ್ಲೇ ಸಂಚರಿಸುವ ಮೂಲಕ ಸಂಸ್ಥೆಗೆ ನೆರವಾಗಬೇಕು. ಸಾರಿಗೆ ಬಸ್‌ ಸೇರಿದಂತೆ ನಿಲ್ದಾಣಗಳಲ್ಲಿ ಶುಚಿತ್ವದೆಡೆಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅಪಘಾತರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿ, ಬಸ್‌ ನಿಲ್ದಾಣಕ್ಕೆ ಪಂ. ಪುಟ್ಟರಾಜ ಗವಾಯಿಗಳ ನಾಮಕರಣ ಮಾಡಲಾಗಿದ್ದು, ಅವರ ಹೆಸರಿಗೆ ಚ್ಯುತಿ ಬಾರದಂತೆ ನಿಲ್ದಾಣವನ್ನು ಶುಚಿಯಾಗಿಡುವಂತೆ ಒತ್ತು ನೀಡಬೇಕೆಂದು ತಿಳಿಸಿದರು. ಅಲ್ಲದೆ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ನಾಮಕರಣಕ್ಕೆ ಸಹಕಾರ ನೀಡಿದ ಸಾರಿಗೆ ಸಚಿವರಿಗೆ ಹಾಗೂ ಈ ಭಾಗದ ಶಾಸಕರಾದ ಎಚ್‌.ಕೆ. ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಶಾಸಕ ಎಚ್‌.ಕೆ. ಪಾಟೀಲ್‌ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಹುಬ್ಬಳ್ಳಿ ವಿಭಾಗಕ್ಕೆ ಒದಗಿಸಲಾಗುವ ಎಲೆಕ್ಟ್ರಿಕ್‌ ಬಸ್‌ಗಳಲ್ಲಿ ಹದಿನೈದು ಬ​ಸ್‌ಗಳನ್ನು ಗದಗ ವಿಭಾಗಕ್ಕೆ ನೀಡಬೇಕು. ಜಿಲ್ಲೆಯಲ್ಲಿ ಚಾಲಕ ತರಬೇತಿ ಕೇಂದ್ರ ಆರಂಭಿಸಲು, ಗದಗನಿಂದ ಬೆಂಗಳೂರು ಹಾಗೂ ಮೈಸೂರು ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ಮಲ್ಟಿಎಕ್ಸೆಲ್‌ ಬಸ್‌ ಸೇವೆ ಒದಗಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ವಾಯವ್ಯ ಸಾರಿಗೆ ಸಂಸ್ಥೆ​ಯ ಅಧ್ಯಕ್ಷ ವಿ.ಎಸ್‌. ಪಾಟೀಲ ಮಾತನಾಡಿ, ವಿಭಾಗದಲ್ಲಿ ಪ್ರತಿ ದಿನ 25 ಲಕ್ಷ ಜನ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಕೊರೋನಾ ಎದುರಾದ ನಂತರ ಅದು ಸಂಪೂರ್ಣ ಸ್ಥಗಿತಗೊಂಡು ಸಂಸ್ಥೆ ಅಧಿಕ ನಷ್ಟಅನುಭವಿಸಿದೆ. ಲಾಕ್‌ಡೌನ್‌ ಆನಂತರ ಆರಂಭವಾದ ಸಾರಿಗೆ ಸೇವೆಯಿಂದ ಪ್ರತಿದಿನ ಪ್ರಯಾಣಿಕರ ಸಂಖ್ಯೆ ಅಧಿಕಗೊಳ್ಳುತ್ತಿದ್ದು ಪ್ರತಿ ದಿನ 13 ಲಕ್ಷ ಜನ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು.

ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಸಾನ್ನಿಧ್ಯವಹಿಸಿದ್ದರು. ಶಾಸಕ ಕಳಕಪ್ಪ ಬಂಡಿ, ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ, ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ಎಸ್‌.ವಿ. ಸಂಕನೂರ, ತಾಪಂ ಅಧ್ಯಕ್ಷ ವಿದ್ಯಾಧರ ದೊಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಪಂ, ತಾಪಂ ಸದಸ್ಯರು, ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ, ಎಸಿ ರಾಯಪ್ಪ ಹುಣಸಗಿ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್‌.ಸಿ. ಹಿರೇಮಠ, ಸಂಸ್ಥೆಯ ಮುಖ್ಯ ಕಾಮಗಾರಿ ಅಭಿಯಂತರ ಟಿ.ಕೆ. ಪಾಲನೇತ್ರಾನಾಯಕ ಉಪಸ್ಥಿತರಿದ್ದರು.