ಸಂಪತ್‌ ತರೀಕೆರೆ

 ಬೆಂಗಳೂರು (ಸೆ.06):  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌-19 ನಿಯಮಗಳಲ್ಲಿ ಸಡಿಲಿಕೆ ಮಾಡಿದರೆ ಜನವರಿ ಕಡೆಯ ಅಥವಾ ಫೆಬ್ರವರಿ 2ನೇ ವಾರದಲ್ಲಿ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಚಿಂತನೆ ನಡೆಸಿದೆ.

ಶತಮಾನ (1915ರಿಂದ)ದಿಂದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಇತಿಹಾಸವನ್ನು ಪ್ರಚುರಪಡಿಸುವುದು ಮತ್ತು ಭಾಷೆಯನ್ನು ಬೆಳೆಸುವ ಮೂಲ ಉದ್ದೇಶದಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿ ವರ್ಷವೂ ಆಯೋಜಿಸುತ್ತಾ ಬಂದಿದೆ. ಕನ್ನಡಕ್ಕಾಗಿ ಅವಿರತ ದುಡಿದ, ಕನ್ನಡ ಭಾಷೆಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದ ಸಾಹಿತಿಗಳು, ಕವಿಗಳನ್ನು ಗುರುತಿಸಿ ಸಮ್ಮೇಳನ ಅಧ್ಯಕ್ಷರನ್ನಾಗಿ ನಿಯೋಜಿಸಲಾಗುತ್ತಿದೆ. ಈ ಬಾರಿ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಲಬುರಗಿಯಲ್ಲಿ ನಡೆದ 85ನೇ ಸಮ್ಮೇಳನದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ನಿಗದಿಯಂತೆ ಹಾವೇರಿಯಲ್ಲಿಯೇ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಕನ್ನಡ ಭೀಷ್ಮ ಜಿ ವಿ ಅಯ್ಯರ್ ಜನ್ಮ ದಿನದ ಸವಿನೆನಪು

‘ಆದರೆ, ಕೋವಿಡ್‌-19 ಹಿನ್ನೆಲೆಯಲ್ಲಿ ಯಾವ ತಿಂಗಳಲ್ಲಿ ಸಮ್ಮೇಳನ ಆಯೋಜಿಸಬೇಕು ಎಂಬುದು ನಿರ್ಧಾರವಾಗಿಲ್ಲ. ತಜ್ಞರ ಪ್ರಕಾರ ನವೆಂಬರ್‌ ಅಥವಾ ಡಿಸೆಂಬರ್‌ ಅವಧಿಯಲ್ಲಿ ಕೊರೋನಾ ಸೋಂಕು ಕಡಿಮೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಸೋಂಕು ಇಳಿಮುಖವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌-19 ನಿಯಮಗಳಲ್ಲಿ ಸಡಿಲಿಕೆ ಮಾಡಿದರೆ ಜನವರಿ ಕಡೆಯ ಅಥವಾ ಫೆಬ್ರವರಿ 2ನೇ ವಾರದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ ಮನುಬಳಿಗಾರ್‌ ಅವರು ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷರ ಆಯ್ಕೆ:

ಡಿಸೆಂಬರ್‌ನಲ್ಲಿ ಕೊರೋನಾ ಸೋಂಕು ಕಡಿಮೆಯಾದರೆ ಜನವರಿ ಮೊದಲ ವಾರದಲ್ಲೇ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ಕರೆದು ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗುವುದು. ನಂತರ ಸಮ್ಮೇಳನಕ್ಕೆ ಕನಿಷ್ಠ ಒಂದೂವರೆ ತಿಂಗಳು ಪೂರ್ವ ಸಿದ್ಧತೆ ಆಗಬೇಕಿದ್ದು ಫೆಬ್ರವರಿ 2ನೇ ವಾರದಲ್ಲಿ ಸಮ್ಮೇಳನ ನಡೆಸುವ ಉದ್ದೇಶವಿದೆ. ಈ ಹಿಂದೆ 84ನೇ ಸಮ್ಮೇಳನವನ್ನು ಧಾರವಾಡದಲ್ಲಿ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ಜ.4,5,6ರಂದು ಹಾಗೂ 85ನೇ ಸಮ್ಮೇಳನವನ್ನು ಫೆಬ್ರವರಿ 5,6 ಮತ್ತು 7ರಂದು ಕಲಬುರಗಿಯಲ್ಲಿ ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಸಲಾಗಿತ್ತು. ಹೀಗಾಗಿ 86ನೇ ಸಮ್ಮೇಳನವನ್ನು ಫೆಬ್ರವರಿಯಲ್ಲಿ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದು ಕಸಾಪ ಮೂಲಗಳು ತಿಳಿಸಿವೆ.

ಮಾ.3ಕ್ಕೆ ಅವಧಿ ಮುಕ್ತಾಯ:

ನಿಗದಿಯಂತೆ 2021 ಮಾಚ್‌ರ್‍ 3ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರ ಅಧಿಕಾರಾವಧಿ ಮುಕ್ತಾಯವಾಗಲಿದೆ. ಬೈಲಾ ಪ್ರಕಾರ ಇನ್ನೂ ಆರು ತಿಂಗಳು ಅಧಿಕಾರ ವಿಸ್ತರಿಸಿಕೊಳ್ಳಲು ಅವಕಾಶವಿದೆ. ಈ ನಡುವೆ ಕಸಾಪ ಅಧ್ಯಕ್ಷರ ಅಧಿಕಾರಾವಧಿ ಮೂರು ವರ್ಷ ಇದ್ದುದ್ದನ್ನು ಐದು ವರ್ಷಕ್ಕೆ ವಿಸ್ತರಿಸಿಕೊಂಡ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಒಂದು ವೇಳೆ ಅವಧಿಗೂ ಮುನ್ನವೇ ತೀರ್ಪು ಪ್ರಕಟಗೊಂಡರೆ ಅದರಂತೆ ಅಧ್ಯಕ್ಷರು ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

ಅದಕ್ಕೂ ಮುನ್ನವೇ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಉದ್ದೇಶ ಮನು ಬಳಿಗಾರ್‌ ಅವರದ್ದಾಗಿದೆ. ಹೀಗೆ ಅವಕಾಶ ಸಿಕ್ಕರೆ ತಮ್ಮ ಅಧಿಕಾರವಧಿಯಲ್ಲಿ ಸತತ ಐದು ಸಾಹಿತ್ಯ ಸಮ್ಮೇಳನ ಆಯೋಜಿಸಿದ ಹೆಗ್ಗಳಿಕೆ ಮನುಬಳಿಗಾರ್‌ ಅವರದ್ದಾಗಲಿದೆ.

ಕೋವಿಡ್‌-19 ಪರಿಸ್ಥಿತಿ ಮತ್ತು ಸರ್ಕಾರಗಳ ನಿರ್ಧಾರ ಮೇಲೆ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಬೇಕೇ ಅಥವಾ ಬೇಡವೇ ಎಂಬುದು ನಿರ್ಧಾರವಾಗಲಿದೆ. ಸಮ್ಮೇಳನಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳುವ ತೀರ್ಮಾನದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಅಂತಿಮ ನಿರ್ಧಾರ ಕೈಗೊಳ್ಳಲಿದೆ​.

- ಡಾ.ಮನು ಬಳಿಗಾರ್‌, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು.