ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಶಬರಿಮಲೆ ಅಯ್ಯಪ್ಪಸ್ವಾಮಿಗೆ ಹರಕೆ!
ಸತೀಶ್ ಜಾರಕಿಹೊಳಿ ಅವರು 2028ಕ್ಕೆ ಸಿಎಂ ಆಗುವ ಹೇಳಿಕೆ ನೀಡಿದ ಬಳಿಕ, ಅಭಿಮಾನಿಗಳು ಅವರನ್ನು ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಿದ್ದಾರೆ. ಜಾರಕಿಹೊಳಿ ಸಿಎಂ ಆಗಲೆಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿರುವ ವಿಡಿಯೋ ವೈರಲ್ ಆಗಿದೆ.
ಬೆಳಗಾವಿ (ಜ.12): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ ನಡುವೆ ಕಸರತ್ತು ಜೋರಾಗಿ ನಡೆದಿರುವ ಬೆನ್ನಲ್ಲೇ ಇತ್ತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು 2028ಕ್ಕೆ ನಾನೇ ಸಿಎಂ ಅಭ್ಯರ್ಥಿಯಾಗಿದ್ದು ಏನಾಗುತ್ತದೆಯೋ ಕಾದು ನೋಡೋಣ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕ 'ಸತೀಶ್ ಜಾರಕಿಹೊಳಿ ಮುಂದಿನ ಸಿಎಂ' ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.
ಜಾರಕಿಹೊಳಿ ಸಿಎಂ ಆಗಲೆಂದು ಅಯ್ಯಪ್ಪ ಸ್ವಾಮಿಗೆ ಹರಕೆ
ಸತೀಶ್ ಜಾರಕಿಹೊಳಿ ಅಭಿಮಾನಿಗಳು ಕಾರ್ಯಕರ್ತರು ಸಭೆ ಸಮಾರಂಭಗಳಲ್ಲಿ ಜಾರಕಿಹೊಳಿ 'ಮುಂದಿನ ಸಿಎಂ ಜಾರಕಿಹೊಳಿ' ಘೋಷಣೆ ಕೂಗುತ್ತಿದ್ದಾರೆ. ಇನ್ನೊಂದೆಡೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
5 ವರ್ಷ ನೀನೇ ಸಿಎಂ, ಬೇಡ ಅಂದವ್ರು ಯಾರು? ಆದರೆ ಈಗಲ್ಲ; ಡಿಕೆಶಿಗೆ ಸಿದ್ದು ಆಪ್ತರ ಠಕ್ಕರ್
ಬೆಳಗಾವಿಯಲ್ಲಿ ಅಯ್ಯಪ್ಪ ಮಾಲಾಧಾರಿಯಿಂದ ಸತೀಶ್ ಜಾರಕಿಹೊಳಿ ಸಿಎಂ ಆಗಲೆಂದು ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ವಿಶೇಷ ಹರಕೆ ಹೊತ್ತಿದ್ದಾರೆ. ಗೋಕಾಕ ಪಟ್ಟಣದ ಅಯ್ಯಪ್ಪ ಮಾಲಾಧಾರಿಯಾಗಿರುವ ಸಂತೋಷ ಸಂಕಪಾಳೆ ಎಂಬುವವರಿಂದ ವಿಶೇಷ ಹರಕೆ. ಜಾರಕಿಹೊಳಿ ಮುಂದಿನ ಸಿಎಂ ಆಗಬೇಕು ಎಂದು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಸತೀಶ್ ಜಾರಕಿಹೊಳಿ ಫೋಟೋ ತಲೆಮೇಲೆ ಹೊತ್ತುಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕದಲ್ಲಿ ಮೂರು ಉಪಚುನಾವಣೆಗಳು ಮುಗಿದು ಕಾಂಗ್ರೆಸ್ ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ಬದಲಾವಣೆ ಜಟಾಪಟಿ ಜೋರಾಗಿ ನಡೆದಿದೆ. 'ಮುಖ್ಯಮಂತ್ರಿ ಬದಲಾವಣೆ ಮಾತೇ ಇಲ್ಲ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಎರಡು ಬಣಗಳಾಗಿ ತೀವ್ರ ಸಿಎಂ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ-ಡಿಕೆ ಶಿವಕುಮಾರ ಪರಸ್ಪರ ದಾಳ ಉರುಳಿಸುತ್ತಲೇ ಇದ್ದಾರೆ. ಈ ನಡುವೆ ನಾನು ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿಯವರು ಸಹ ಮೈಕೊಡವಿ ನಿಂತಿರುವುದು ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ಕುತೂಹಲ ಕೆರಳಿಸಿದೆ.