ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಆರ್‌ಎಸ್‌ಎಸ್‌ ಅನ್ನು 'ಡೇಂಜರ್' ಎಂದು ಕರೆದಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಪ್ರಿಯಾಂಕ್ ಖರ್ಗೆ ಬೆಂಬಲಿಗನೊಂದಿಗೆ ಮಾತನಾಡುತ್ತಾ, ಆರ್‌ಎಸ್‌ಎಸ್‌ ವಿರುದ್ಧ ಹೋದವರು ಉಳಿದಿಲ್ಲ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

  •  ಖರ್ಗೆ ಬೆಂಬಲಿಗನ ಜತೆಗಿನ ಆಡಿಯೋ ವೈರಲ್‌--
  • ದಲಿತ ವ್ಯಕ್ತಿಗೆ ಆರ್‌ಎಸ್‌ಎಸ್ ಬಗ್ಗೆ ಕಾಳಜಿ ಏಕೆ?
  • ಆರ್‌ಎಸ್‌ಎಸ್‌ ತಂಟೆಗೆ ಬಂದವರು ಉಳಿದಿಲ್ಲ
  • ಬಜಿಗಜಿಣಗಿಯದು ಎನ್ನಲಾದ ಆಡಿಯೋ ವೈರಲ್‌

--

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಜಯಪುರ (ಜೂ.24) ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ಆರ್‌ಎಸ್‌ಎಸ್‌ ಕುರಿತು ಆಡಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆಯ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ(Priyank kharge)ಯವರ ಬೆಂಬಲಿಗನೊಬ್ಬನ ಜೊತೆ ಮಾತನಾಡಿದ ಸಂಸದರು, ‘ಆರ್‌ಎಸ್ಎಸ್‌ನವರು ಭಾರಿ ಡೇಂಜರ್. ಆರ್‌ಎಸ್‌ಎಸ್(RSS) ವಿರುದ್ಧ ಹೋರಾಡಿದವರು ಬದುಕುಳಿದಿಲ್ಲ. ದಲಿತ ವ್ಯಕ್ತಿಗೆ ಆರ್‌ಎಸ್‌ಎಸ್‌ ಬಗ್ಗೆ ಇಲ್ಲ ಸಲ್ಲದ ಕಾಳಜಿ ಏಕೆ?’ ಎಂದಿದ್ದು ಆಡಿಯೋದಲ್ಲಿ ದಾಖಲಾಗಿದೆ.

ಹಿನ್ನೆಲೆ ಏನು? ಈಗ ಆಗಿದ್ದೇನು?:

ಗೃಹ ಸಚಿವ ಪ್ರಿಯಾಂಕ್‌ ಖರ್ಗೆಯವರು ಆರ್‌ಎಸ್‌ಎಸ್‌ ನೋಂದಣಿ ಕುರಿತು ಸಂಘದ ಮುಖ್ಯಸ್ಥ ಮೋಹನ್ ಭಾಗವತ್‌ ಅವರಿಗೆ ಪತ್ರ ಬರೆದ ವಿಚಾರವಾಗಿ ನಡೆದ ಸಂಭಾಷಣೆಯ ಆಡಿಯೋ ಇದಾಗಿದೆ.

ಮೊನ್ನೆಯಷ್ಟೆ ಈ ಸಂಬಂಧ ಪತ್ರಕರ್ತರ ಎದುರು ಪ್ರತಿಕ್ರಿಯಿಸಿದ್ದ ರಮೇಶ ಜಿಗಜಿಣಗಿ, ‘ಆರ್‌ಎಸ್‌ಎಸ್‌ ವಿಚಾರ ದಲಿತ ಮನುಷ್ಯನಿಗೆ ಯಾಕೆ ಬೇಕು?, ಅವನಿಗೆ ತಲೆಯಿಲ್ಲ’ ಎಂದು ಪ್ರಿಯಾಂಕ್‌ ಖರ್ಗೆ ವಿರುದ್ಧ ಕಿಡಿಕಾರಿದ್ದರು.

ಈ ಹಿನ್ನೆಲೆಯಲ್ಲಿ ಪ್ರಿಯಾಂಕ್‌ ಖರ್ಗೆಯವರ ಬೆಂಬಲಿಗನೊಬ್ಬ ಕರೆ ಮಾಡಿ ‘ಕಾಕಾ (ಜಿಗಜಿಣಗಿ) ನೀವೂ ದಲಿತ ತಾನೆ?’ ಎಂದಿದ್ದಾನೆ. ಈ ವೇಳೆ, ಆಕ್ರೋಶಗೊಂಡ ಜಿಗಜಿಣಗಿ, ‘ನಾನು ದಲಿತ ಇದ್ದೇನಿ, ಆದ್ರೇ, ಬಿಜೆಪಿ ಪಾರ್ಟಿ ಒಳಗ ಇದ್ದೇನಿ. ಆರ್‌ಎಸ್ಎಸ್‌ಗೆ ಬೈದರೆ ದೊಡ್ಡವರು ಆಗಿ ಬಿಡ್ತಾರಾ? ಆರ್‌ಎಸ್ಎಸ್‌ಗೆ ಬೈದರೆ ಮಣ್ಣಾಗಿ ಹೋಗ್ತೀರಿ, ಹುಚ್ಚರ.... ಆರ್‌ಎಸ್ಎಸ್‌ನವರು ಭಾರಿ ಡೇಂಜರ್. ಆರ್‌ಎಸ್‌ಎಸ್ ವಿರುದ್ಧ ಹೋರಾಡಿದವರು ಬದುಕುಳಿದಿಲ್ಲ. ದಲಿತ ವ್ಯಕ್ತಿಗೆ ಆರ್‌ಎಸ್‌ಎಸ್‌ ಬಗ್ಗೆ ಇಲ್ಲ ಸಲ್ಲದ ಕಾಳಜಿ ಏಕೆ? ಆರ್‌ಎಸ್‌ಎಸ್ ನ್ನು ನೋಂದಾಯಿಸುವುದರಿಂದ ನೀವು ಏನು ಸಾಧಿಸುತ್ತೀರಿ? ಅದು ಗೃಹ ಸಚಿವರ ಕೆಲಸವಲ್ಲ’ ಎಂದು ಕಿಡಿ ಕಾರಿದ್ದಾರೆ.

ಆಡಿಯೋ ಅಸಲಿಯೇ?:

ಖರ್ಗೆ ಬೆಂಬಲಿಗನಿಗೆ ಸಂಸದರು ಬೈದಾಡಿದ್ದಾರೆ ಎನ್ನಲಾದ ಈ ಆಡಿಯೋ ವೈರಲ್‌ ಆಗಿದೆ. ಆದರೆ, ಇದು ನಿಜವಾಗಿಯೂ ನಡೆದ ಫೋನ್ ಸಂಭಾಷಣೆಯೋ ಅಥವಾ ಎಐನಲ್ಲಿ ಕೃತಕವಾಗಿ ತಯಾರಿಸಿದ ಆಡಿಯೋನೋ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ. ಈ ಕುರಿತು ಸ್ಪಷ್ಟನೆಗೆ ‘ಕನ್ನಡಪ್ರಭ’ ಸಂಪರ್ಕಿಸಿದರೂ ಸಂಸದ ರಮೇಶ ಜಿಗಜಿಣಗಿಯವರು ಕರೆ ಸ್ವೀಕರಿಸಿಲ್ಲ.