ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ನೋಂದಣಿ ಕುರಿತು ಪ್ರಶ್ನಿಸಿದ್ದು, ಸಂಘಟನೆಯೇ ನೇರವಾಗಿ ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ. ವಕೀಲರು ಅಥವಾ ಇತರರ ಅಭಿಪ್ರಾಯಗಳಿಗೆ ನಾನು ಉತ್ತರ ನೀಡುವುದಿಲ್ಲ, ಸಂಘದ ಲೆಟರ್‌ಹೆಡ್‌ನಲ್ಲೇ ಉತ್ತರ ಬರಲಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಜೂ.20): ಗೃಹ ಸಚಿವನಾಗಿ ನಾನು ಪ್ರಶ್ನೆಗಳನ್ನು ಕೇಳಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ಕ್ಕೆ. ಆ ಸಂಘಟನೆಯೇ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ ಅಥವಾ ಬೇರೆ ಯಾರನ್ನಾದರೂ ನಿಯೋಜಿಸಲಿ. ಅದು ಬಿಟ್ಟು ಯಾವುದೇ ವಕೀಲರು ಬರೆಯುವ ಲೇಖನ, ಟ್ವೀಟ್ ಅಥವಾ ಇನ್ನಾವ ಅಭಿಪ್ರಾಯಗಳಿಗೂ ನಾನು ಉತ್ತರ ನೀಡುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನನ್ನ ಪ್ರಶ್ನೆಗಳಿಗೆ ಆರ್‌ಎಸ್ಸೆಸ್ಸೇ ಉತ್ತರ ಕೊಡಲಿ. ಅದು ಬಿಟ್ಟು ತನ್ನ ಗುಲಾಮರನ್ನು ಕಳುಹಿಸುವುದು ಬೇಡ. ಅವರ ಜತೆ ನಾನು ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಸಂಘಕ್ಕೆ ಪ್ರಶ್ನೆ ಕೇಳಿದರೆ ವಕೀಲರು ಏಕೆ ಲೇಖ ಬರೆಯುತ್ತಾರೆ?
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನೋಂದಣಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಆರ್‌ಎಸ್‌ಎಸ್‌ಗೆ ಪತ್ರ ಬರೆದಿದ್ದೇನೆ. ಆ ಬಗ್ಗೆ ವಕೀಲರು ಏಕೆ ಮಾತನಾಡುತ್ತಿದ್ದಾರೆ? ಅವರೇನು ಆರ್‌ಎಸ್‌ಎಸ್‌ನ ಮುಖವಾಣಿಯೇ? ಸಂಪಾದಕೀಯ ಲೇಖನ ಬರೆಯುವುದು, ಟ್ವೀಟ್ ಮಾಡುವುದು ಹಾಗೂ ಅಭಿಪ್ರಾಯ ಹೇಳುವುದೆಲ್ಲಾ ಏನಿದು ಅಸಂಬದ್ಧ? ನಾನು ಸಂಘಕ್ಕೆ ಸ್ಪಷ್ಟ ಪ್ರಶ್ನೆ ಕೇಳಿದ್ದೇನೆ. ಅವರೇ ಬಂದು ಉತ್ತರಿಸಲಿ. ಅಥವಾ ಬೇರೆ ಯಾರನ್ನಾದರೂ ಕಳುಹಿಸುವುದಿದ್ದರೆ ಕಳುಹಿಸಲಿ ಎಂದು ಹೇಳಿದರು.
ನನ್ನ ಪ್ರಶ್ನೆಗೆ ಆರ್‌ಎಸ್‌ಎಸ್ ಲೆಟರ್‌ಹೆಡ್‌ನಲ್ಲಿ ಉತ್ತರ ಕೊಡಲಿ
ನನ್ನ ಪ್ರಶ್ನೆಗಳಿಗೆ ಸಂಘದ ಲೆಟರ್‌ಹೆಡ್‌ನಲ್ಲಿ ಉತ್ತರ ಕೊಡಲಿ. ಅವರ ಬಳಿ ಲೆಟರ್ ಹೆಡ್ ಇದೆಯೇ? ಅದು ಇಲ್ಲ. ಅವರು ನಮ್ಮ ಬಳಿಗೆ ಬರಲಿ, ಮಾತನಾಡಲಿ. ನಾವು ಹೀಗೆ ಮಾಡಿದ್ದೇವೆ ಎಂದು ಹೇಳಲಿ. ಅದು ಬಿಟ್ಟು ಗುಲಾಮರನ್ನು ನನ್ನ ಜತೆ ಚರ್ಚೆಗೆ ಕಳುಹಿಸುವುದು ಬೇಡ. ಈ ವಿಚಾರವಾಗಿ ವಕೀಲರು ಹಾಗೂ ಬಿಜೆಪಿ ನಾಯಕರು ಸೇರಿ ಯಾರ ಜತೆಗೂ ಚರ್ಚೆ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: RSS Registration issue: ಖಾಸಗಿ ಸಂಘ-ಸಂಸ್ಥೆಗಳ ನೋಂದಣಿ ಕಡ್ಡಾಯವಲ್ಲ! | ಡಾ।। ಅರುಣ ಶ್ಯಾಮ್ ಲೇಖನ
ನಾನು ಕರ್ನಾಟಕ ಗೃಹ ಸಚಿವ..
ನಾನು ಕರ್ನಾಟಕದ ಗೃಹ ಸಚಿವನಾಗಿ ಏನು ಹೇಳುತ್ತಿದ್ದೇನೆ ಎಂದು ನನಗೆ ಗೊತ್ತಿದೆ. ಇಷ್ಟೊಂದು ದೊಡ್ಡ ಸಂಘಟನೆಯನ್ನು ನಮ್ಮ ರಾಜ್ಯದಲ್ಲಿ ನಡೆಸುತ್ತೀರಿ ಎಂದಾದರೆ ನೋಂದಣಿ ಮಾಡಬೇಕು. ಯಾವ ಕಾನೂನಿನಡಿ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಬೇಕು. ಮೋಹನ ಭಾಗವತ್ ಅವರಷ್ಟೇ ಸಮಾನ ಹಕ್ಕುಗಳು ನನಗೂ ಇವೆ ಎಂದರು.


