ಬರದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ರಾಜ್ಯ ಸರ್ಕಾರವು ಗರಿಷ್ಠ ₹2,500 ಮಧ್ಯಂತರ ಪರಿಹಾರ ಘೋಷಿಸಿದ್ದು, ಸೋಮವಾರದಿಂದ ಹಣ ಬಿಡುಗಡೆಯಾಗಲಿದೆ. ಕೇಂದ್ರದ ಎನ್ಡಿಆರ್ಎಫ್ ಅನುದಾನ ಬಂದ ನಂತರ ಉಳಿದ ಪರಿಹಾರ ವಿತರಿಸಲಾಗುವುದು ಎಂದು ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ನ.1): ರಾಜ್ಯ ಸರ್ಕಾರವು ಬರದಿಂದ ಬೆಳೆ ನಷ್ಟ ಅನುಭವಿಸಿರುವ ಅರ್ಹ ರೈತರಿಗೆ ಗರಿಷ್ಠ ₹2,500 ಮಧ್ಯಂತರ ಪರಿಹಾರ ಘೋಷಿಸಿದ್ದು, ಸೋಮವಾರದಿಂದ ಹಣ ಬಿಡುಗಡೆ ಶುರುವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಇದೇ ವೇಳೆ, ‘ಈ ಸಂಬಂಧದ ಆದೇಶದಲ್ಲಿ ಅರ್ಹ ರೈತರನ್ನು ಗುರುತಿಸಲು ಸೂಚಿಸಿರುವ 17 ಅಂಶಗಳನ್ನು ತೊಡಕುಗಳಾಗಿ ಬಿಂಬಿಸುತ್ತಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ತಮ್ಮ ಸ್ಥಾನದ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು’ ಎಂದು ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನೈಜ ಫಲಾನುಭವಿಗಳಿಗೆ ಪರಿಹಾರ ತಲುಪಿಸುವುದು, ಒಂದೇ ಫಲಾನುಭವಿಗೆ ಎರಡೆರಡು ಬಾರಿ ಹಣ ಪಾವತಿ ತಡೆಯುವುದು ಹಾಗೂ ಸಾರ್ವಜನಿಕ ಹಣದ ಸದ್ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ನಿಯಮಗಳ ಉದ್ದೇಶ ಎಂದಿದ್ದಾರೆ.
ಹೆಕ್ಟೇರ್ ಮಿತಿ 2005ರಲ್ಲೇ ಇದೆ:
ಎರಡು ಹೆಕ್ಟೇರ್ ಮಿತಿಗೆ ಸಂಬಂಧಿಸಿದ ಆರೋಪಗಳಿಗೆ ಉತ್ತರಿಸಿರುವ ಅವರು, ಈ ಮಿತಿಯು ಕೇಂದ್ರ ಸರ್ಕಾರದ ಎಸ್ಡಿಆರ್ಎಫ್/ಎನ್ಡಿಆರ್ಎಫ್ ಪರಿಹಾರ ಮಾನದಂಡಗಳ ಭಾಗವಾಗಿದ್ದು, 2005ರಿಂದಲೇ ಜಾರಿಯಲ್ಲಿದೆ ಎಂದು ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಎರಡು ಹೆಕ್ಟೇರ್ ಮಿತಿಯು ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸಬಹುದಾದ ಗರಿಷ್ಠ ವಿಸ್ತೀರ್ಣಕ್ಕೆ ಸಂಬಂಧಿಸಿದ್ದೇ ಹೊರತು, ಎರಡು ಹೆಕ್ಟೇರ್ಗಿಂತ ಹೆಚ್ಚು ಜಮೀನು ಹೊಂದಿರುವ ರೈತರು ಪರಿಹಾರಕ್ಕೆ ಅನರ್ಹರು ಎಂದರ್ಥವಲ್ಲ. ಇದು ಕರ್ನಾಟಕ ಸರ್ಕಾರ ಹೊಸದಾಗಿ ವಿಧಿಸಿರುವ ನಿರ್ಬಂಧವಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ನಿಯಮಗಳಿಗೂ, ಅವುಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ಪ್ರಕ್ರಿಯೆಗಳಿಗೂ ಇರುವ ವ್ಯತ್ಯಾಸವನ್ನು ವಿರೋಧ ಪಕ್ಷದವರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ಎನ್ಡಿಆರ್ಎಫ್ ಬಿಡುಗಡೆ ಬಳಿಕ ಮುಂದಿನ ಕಂತು: (ಇಂಗ್ಲಿಷಿದೆ)
ಸೋಮವಾರದ ನಂತರ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಹ ರೈತರ ಖಾತೆಗಳಿಗೆ ಮಧ್ಯಂತರ ಪರಿಹಾರದ ಹಣ ಜಮೆ ಮಾಡಲು ನಿರ್ಧರಿಸಿದ್ದೇವೆ. ಇದು ಪರಿಹಾರದ ಮೊದಲ ಕಂತು ಮಾತ್ರವೇ ಹೊರತು ರೈತರಿಗೆ ಸಲ್ಲಬೇಕಾದ ಸಂಪೂರ್ಣ ಪರಿಹಾರವಲ್ಲ. ಕೇಂದ್ರ ಸರ್ಕಾರವು NDRF ಅನುದಾನ ಬಿಡುಗಡೆ ಮಾಡಿದ ಕೂಡಲೇ ಮುಂದಿನ ಕಂತಿನ ಪರಿಹಾರ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಪರಿಷ್ಕೃತ SDRF/NDRF ಮಾನದಂಡಗಳ ಪ್ರಕಾರ, ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ₹11,000, ನೀರಾವರಿ ಬೆಳೆಗಳಿಗೆ ₹22,000 ಹಾಗೂ ಬಹುವಾರ್ಷಿಕ ಮತ್ತು ತೋಟಗಾರಿಕೆ ಬೆಳೆಗಳಿಗೆ ₹30,000 ಪರಿಹಾರ ನೀಡಲು ಅವಕಾಶವಿದೆ. ನಿಗದಿತ ಮಿತಿಗಳ ಅನ್ವಯ ಅರ್ಹ ರೈತರಿಗೆ ಸಲ್ಲಬೇಕಾದ ಉಳಿದ ಪರಿಹಾರವನ್ನು ಅಗತ್ಯ NDRF ಅನುದಾನ ಬಿಡುಗಡೆಯಾದ ಬಳಿಕ ವಿತರಿಸಲಾಗುವುದು ಎಂದು ವಿವರಿಸಿದ್ದಾರೆ.






