PSI Recruitment Scam: ಮುಂದಿನ ತಿಂಗಳು ಎಸ್‌ಐ ಕೇಸ್ ಚಾರ್ಜ್‌ಶೀಟ್: ಡಿಜಿಪಿ ಪ್ರವೀಣ್ ಸೂದ್
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) 545 ಹುದ್ದೆಗಳ ನೇಮಕಾತಿ ಅವ್ಯವಹಾರ ಪ್ರಕರಣ ಸಂಬಂಧ ತನಿಖೆ ಮಾಡುತ್ತಿರುವ ಸಿಐಡಿ ಅಕ್ಟೋಬರ್‌ನಲ್ಲಿ ದೋಷಾರೋಪ ಪಟ್ಟಿಸಲ್ಲಿಸಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಬೆಂಗಳೂರು (ಸೆ.19): ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) 545 ಹುದ್ದೆಗಳ ನೇಮಕಾತಿ ಅವ್ಯವಹಾರ ಪ್ರಕರಣ ಸಂಬಂಧ ತನಿಖೆ ಮಾಡುತ್ತಿರುವ ಸಿಐಡಿ ಅಕ್ಟೋಬರ್‌ನಲ್ಲಿ ದೋಷಾರೋಪ ಪಟ್ಟಿಸಲ್ಲಿಸಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ ನಡೆಸುವುದಾಗಿ ಸರ್ಕಾರ ಹೇಳಿದೆ. ಕೆಲವರು ಪರೀಕ್ಷೆ ಮಾಡದಂತೆ ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯ ಸಹ ಸರ್ಕಾರದ ಪರ ತೀರ್ಪು ನೀಡಿದೆ. ಸಿಐಡಿ 90 ದಿನಗಳೊಳಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿಸಲ್ಲಿಸಲಿದೆ. ನಂತರವೇ ಮರು ಪರೀಕ್ಷೆ ದಿನಾಂಕ ಘೋಷಿಸುವುದಾಗಿ ಹೇಳಿದರು.
ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳು ಮುಂದೆ ಪರೀಕ್ಷೆ ಎದುರಿಸಲು ಅವಕಾಶ ನೀಡಬಾರದು. ಹೀಗಾಗಿ ಸಿಐಡಿ ತನಿಖೆ ಮುಗಿಯುವವರೆಗೂ ಮರು ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಗಿದೆ. ಈಗಾಗಲೇ ಕಾನ್ಸ್‌ಟೇಬಲ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು. ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದೆ. ಸಿಐಡಿ ಸ್ವತಂತ್ರ ತನಿಖಾ ಸಂಸ್ಥೆಯಾಗಿರುವುದರಿಂದ ತನಿಖೆ ಬಗ್ಗೆ ಈ ಹಂತದಲ್ಲಿ ಯಾವುದೇ ಮಾಹಿತಿ ನೀಡುವುದು ಸರಿಯಲ್ಲ. ಆರೋಪಿಗಳ ವಿರುದ್ಧ ಸಾಕ್ಷ್ಯ ಸಿಗದಿದ್ದಲ್ಲಿ ಆರೋಪ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಹಂತದಲ್ಲಿ ಯಾರ ಬಗ್ಗೆಯೂ ಮಾತನಾಡುವುದು ತಪ್ಪಾಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪಿಎಸ್‌ಐ ಕೇಸಲ್ಲಿ ಆರಗ ಕೂಡ ಜೈಲಿಗೆ ಹೋಗ್ತಾರೆ: ಹರಿಪ್ರಸಾದ್
ಪಿಎಸ್‌ಐ ಅಕ್ರಮ ಚರ್ಚೆಗೆ ಸದನ ಅಸ್ತು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ನಿಲುವಳಿ ಸೂಚನೆಯಡಿ (ನಿಯಮ 60) ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸದನದಲ್ಲಿ ಗದ್ದಲ, ವಾಕ್ಸಮರ ಜರುಗಿತು.
ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ಮಾತಿನ ಚಕಮಕಿಯ ಬಳಿಕ ನಿಲುವಳಿ ಸೂಚನೆಯಡಿ ಚರ್ಚಿಸುವ ಬದಲು ನಿಯಮ 69ರಡಿ ಚರ್ಚೆ ನಡೆಸಲು ಸದನ ಒಪ್ಪಿಗೆ ನೀಡಿದ ಬಳಿಕ ಜಟಾಪಟಿ ತಣ್ಣಗಾಯಿತು. ರಾಜ್ಯದಲ್ಲಿ ಮಳೆಯಿಂದಾಗಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಕುರಿತು ಚರ್ಚೆ ಮತ್ತು ಸರ್ಕಾರದ ಉತ್ತರ ಬಳಿಕ ಪಿಎಸ್‌ಐ ಅಕ್ರಮ ನೇಮಕಾತಿ ಕುರಿತು ಚರ್ಚಿಸಲು ಒಪ್ಪಿಗೆ ನೀಡಲಾಯಿತು. ಶೂನ್ಯವೇಳೆ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ನಿಲುವಳಿ ಸೂಚನೆಯ ಕುರಿತು ವಿಷಯ ಪ್ರಸ್ತಾಪಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಕರಣವು ನ್ಯಾಯಾಲಯದಲ್ಲಿ ಇರುವ ಕಾರಣ ನಿಯಮಗಳ ಪ್ರಕಾರ ನಿಲುವಳಿ ಸೂಚನೆಯಡಿ ಚರ್ಚೆಗೆ ತೆಗೆದುಕೊಳ್ಳುವುದು ಕಷ್ಟಎಂದು ಹೇಳಿದರು.
ಆದರೆ, ತಮ್ಮ ನಿಲುವಳಿ ಸೂಚನೆಯನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಈ ಹಿಂದೆಯೂ ಹಲವು ಪ್ರಕರಣಗಳ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆ ನಡೆಸಲಾಗಿದೆ. ಹೀಗಾಗಿ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಚರ್ಚೆಗೆ ಅವಕಾಶ ನೀಡುವಂತೆ ಪದೇ ಪದೇ ಕಾಂಗ್ರೆಸ್ ಸದಸ್ಯರು ಮಧ್ಯಪ್ರವೇಶಿಸುತ್ತಿದ್ದ ಕಾರಣ ಒಂದು ಹಂತದಲ್ಲಿ ಸಭಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಪರವಾಗಿ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಕರಣವು ಇತ್ತೀಚೆಗೆ ನಡೆದಿರುವುದಲ್ಲ. ಹೀಗಾಗಿ ತುರ್ತಾಗಿ ಚರ್ಚೆ ನಡೆಸಬೇಕಾದ ಅಗತ್ಯ ಇಲ್ಲ ಎಂದು ಹೇಳಿದರು.
ಪಿಎಸ್‌ಐ ಹುದ್ದೆಗೆ .15 ಲಕ್ಷ ಲಂಚ?: ಬಿಜೆಪಿ ಶಾಸಕನ ವಿರುದ್ಧ ‘ಕೈ’ ವಿಡಿಯೋ ದಾಖಲೆ
ತಕ್ಷಣ ಕಾಂಗ್ರೆಸ್‌ನ ಮುಖ್ಯ ಸಚೇತಕ ಅಜಯ್‌ಸಿಂಗ್, ಸದನ ಕರೆದಿರುವುದು ಈಗ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಬೇಕು ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್‌ನ ಸದಸ್ಯರು ಧ್ವನಿಗೂಡಿಸಿದಾಗ ಕೋಪಗೊಂಡ ಮಾಧುಸ್ವಾಮಿ, ಈ ರೀತಿ ಕೂಗಾಡಿದರೆ ಹೇಗೆ, ಸರ್ಕಾರ ಕತ್ತೆ ಕಾಯೋಕೆ ಇರೋದಾ? ನಿಯಮಗಳ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದು ಕಿಡಿಕಾರಿದರು. ಈ ವೇಳೆ ಎರಡೂ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು. ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಕಾಂಗ್ರೆಸ್ ಸದಸ್ಯರನ್ನು ಸಮಾಧಾನಪಡಿಸಿದರು. ಮಾತು ಮುಂದುವರಿಸಿದ ಮಾಧುಸ್ವಾಮಿ, ಪ್ರತಿಪಕ್ಷ ನಾಯಕರು ನೀಡಿರುವ ನೊಟೀಸ್‌ನಲ್ಲಿ ಸಚಿವರು, ಶಾಸಕರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.