ಬಾರ್‌ನಲ್ಲಿ ಮದ್ಯ ಸೇವಿಸುವಾಗ ಕೂಗಾಡಿ ತೊಂದರೆ ಕೊಡಬೇಡಿ ಎಂದ ಇಬ್ಬರು ವ್ಯಕ್ತಿಗಳಿಗೆ ಪಾನಮತ್ತ ಪುಡಿರೌಡಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಕಲಾಸಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಅ.4) :  ಬಾರ್‌ನಲ್ಲಿ ಮದ್ಯ ಸೇವಿಸುವಾಗ ಕೂಗಾಡಿ ತೊಂದರೆ ಕೊಡಬೇಡಿ ಎಂದ ಇಬ್ಬರು ವ್ಯಕ್ತಿಗಳಿಗೆ ಪಾನಮತ್ತ ಪುಡಿರೌಡಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಕಲಾಸಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುನೇಶ್ವರ ಬ್ಲಾಕ್‌ನ ಮೋಹನ ಕುಮಾರ್‌(29) ಮತ್ತು ಸತೀಶ್‌(39) ಹಲ್ಲೆಗೆ ಒಳಗಾದವರು. ಅ.1ರಂದು ಮುಂಜಾನೆ 1ರ ಸುಮಾರಿಗೆ ಕಲಾಸಿಪಾಳ್ಯದ ಶಮಂತ್‌ ಬಾರ್‌ನಲ್ಲಿ ಈ ಘಟನೆ ನಡೆದಿದೆ. ಗಾಯಾಳು ಮೋಹನ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ಪಶ್ಚಿಮ ವಿಭಾಗದ ರೌಡಿ ಶೀಟರ್‌ ಚಂದನ್ ಅಲಿಯಾಸ್‌ ವೀರು, ಗಿರಿ, ದೀಪು, ಮಂಜ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಿ, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ; ಚಿನ್ನಾಭರಣ ದೋಚಿ ಪರಾರಿಯಾಗಿದ್ದವರ ಬಂಧನ

ಏನಿದು ಪ್ರಕರಣ?:

ಹಲ್ಲೆಗೊಳಗಾದ ಮೋಹನ್‌ ಕುಮಾರ್‌ ಮತ್ತು ಸತೀಶ್‌ ಸ್ನೇಹಿತರು. ಅ.1ರಂದು ಮಧ್ಯರಾತ್ರಿ 1ಕ್ಕೆ ಕಲಾಸಿಪಾಳ್ಯದ ಶಮಂತ್‌ ಬಾರ್‌ಗೆ ಮದ್ಯ ಸೇವಿಸಲು ಬಂದಿದ್ದಾರೆ. ಈ ವೇಳೆ ಆರೋಪಿಗಳಾದ ಚಂದನ್, ಗಿರಿ, ದೀಪು, ಮಂಜ ಸೇರಿ ಏಳೆಂಟು ಮಂದಿಯ ಗ್ಯಾಂಗ್‌ ಮದ್ಯ ಸೇವಿಸುತ್ತಾ ಜೋರಾಗಿ ಕೂಗಾಡುತ್ತಿದ್ದರು. ಈ ವೇಳೆ ಮೋಹನ್‌ ಕುಮಾರ್‌ ಆರೋಪಿಗಳ ಟೇಬಲ್‌ ಬಳಿ ತೆರಳಿ ‘ಜೋರಾಗಿ ಕೂಗಾಡಬೇಡಿ, ಅಕ್ಕಪಕ್ಕದವರಿಗೆ ತೊಂದರೆಯಾಗುತ್ತದೆ’ ಎಂದು ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಆರೋಪಿಗಳು, ನಮಗೆ ಸುಮ್ಮನಿರಿ ಎಂದು ಹೇಳುವೆಯಾ ಎಂದು ಗಲಾಟೆ ಆರಂಭಿಸಿದ್ದಾರೆ. ಅಷ್ಟರಲ್ಲಿ ಕೆಲವರು ಕಾರಿನಿಂದ ಮಚ್ಚು ಮತ್ತು ಲಾಂಗ್‌ಗಳನ್ನು ತಂದು ಮೋಹನ್‌ ಕುಮಾರ್‌ ಮೇಲೆ ಹಲ್ಲೆ ಮಾಡಿದ್ದಾರೆ. ಸ್ನೇಹಿತನ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಮುಂದಾದ ಸತೀಶ್‌ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ.

ಕಾರಿನೊಳಗೆ ಎಳೆದುಕೊಂಡು ಹಲ್ಲೆ

ಬಾರ್‌ನೊಳಗೆ ಗಲಾಟೆ ಜೋರಾಗತ್ತಿದ್ದಂತೆ ಕ್ಯಾಶಿಯರ್‌ ಎಲ್ಲ ಗ್ರಾಹಕರನ್ನು ಹೊರಗೆ ಕಳುಹಿಸಿದ್ದಾರೆ. ಈ ವೇಳೆ ಆರೋಪಿಗಳು ಅಷ್ಟಕ್ಕೆ ಸುಮ್ಮನಾಗದೆ, ಮೋಹನ್‌ ಕುಮಾರ್‌ನನ್ನು ಎಳೆದು ಕಾರಿಗೆ ಹತ್ತಿಸಿಕೊಂಡು ಸ್ವಲ್ಪ ಮುಂದೆ ಹೋಗಿ ಹಲ್ಲೆ ಮಾಡಲು ಆರಂಭಿಸಿದ್ದಾರೆ. ಹಲ್ಲೆಯಿಂದ ನೋವು ತಾಳಲಾರದೆ ಮೋಹನ್‌ ಕುಮಾರ್‌ ಕಾರಿನ ಬಾಗಿಲಿಗೆ ಜೋರಾಗಿ ಒದ್ದಾಗ ಬಾಗಿಲು ತೆರೆದುಕೊಂಡಿದೆ. ತಕ್ಷಣ ಹೊರಗೆ ಜಿಗಿದು ತಪ್ಪಿಸಿಕೊಂಡಿದ್ದಾನೆ. ಬಳಿಕ ಆರೋಪಿಗಳು ಪರಾರಿ ಆಗಿದ್ದಾರೆ.

ನಂತರ ಮೋಹನ್‌ ಕುಮಾರ್‌ ತನ್ನ ಸ್ನೇಹಿತ ದಿನೇಶ್‌ ಎಂಬಾತನಿಗೆ ಕರೆ ಮಾಡಿ ಕರೆಸಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಳಿಕ ಕಲಾಸಿಪಾಳ್ಯ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರಿಗೆ ಲಾಡ್ಜ್‌ನಲ್ಲಿ ರೂಂ ಕೊಡಲ್ಲಎಂದಿದ್ದಕ್ಕೆ ಮಾಲಕಿಯ ಕಿಡ್ನಾಪ್‌ ಯತ್ನ

ಜೈಲಿನಿಂದ ರಿಲೀಸ್‌ ಆಗಿದ್ದಕ್ಕೆ ರೌಡಿ ಪಾರ್ಟಿ

ರೌಡಿ ಚಂದನ್‌ ಅಲಿಯಾಸ್‌ ವೀರು ಕೆಲ ದಿನಗಳ ಹಿಂದೆಯಷ್ಟೇ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಹೀಗಾಗಿ ಅಂದು ಸ್ನೇಹಿತರೆಲ್ಲಾ ಸೇರಿಕೊಂಡು ಶಮಂತ್‌ ಬಾರ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಮೋಹನ್‌ ಕುಮಾರ್‌ ಮತ್ತು ಸತೀಶ್‌ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಏರಿಯಾದಲ್ಲಿ ಹವಾ ಸೃಷ್ಟಿಸುವ ಉದ್ದೇಶದಿಂದ ರೌಡಿ ಶೀಟರ್‌ ಹಾಗೂ ಆತನ ಸಹಚರರು ಇಬ್ಬರು ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.