ಬೆಂಗಳೂರು(ಏ.16): ಮುಷ್ಕರ ನಿರತ ಸಾರಿಗೆ ಸಂಸ್ಥೆ ನೌಕರರಿಗೆ ‘ರಾಕಿಂಗ್‌ ಸ್ಟಾರ್‌’ ಎಂದೇ ಖ್ಯಾತರಾದ ಚಿತ್ರನಟ ಯಶ್‌ ಪತ್ರ ಬರೆದಿದ್ದಾರೆ. ‘ಸಾರಿಗೆ ಸಚಿವ ಲಕ್ಷ್ಮಣ ಸವದಿಯವರೊಂದಿಗೆ ಮಾತುಕತೆ ನಡೆಸಿದ್ದು, ಅವರು ವೇತನ ತಾರತಮ್ಯ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ’ ಎಂದು ಮನವಿ ಮಾಡಿದ್ದಾರೆ.

‘ಇಂದು ನಿಮ್ಮ ಯಶ್‌ ಏನೇ ಆಗಿರಬಹುದು, ಆದರೆ ಅದಕ್ಕೂ ಮೊದಲು ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ’ ಎಂದು ಪತ್ರ ಆರಂಭಿಸಿರುವ ಅವರು ‘ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಪ್ರಯತ್ನವೆಂಬಂತೆ ಸಚಿವ ಸವದಿ ಅವರೊಂದಿಗೆ ವಿವರವಾಗಿ ಮಾತನಾಡಿದ್ದೇನೆ. ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಇದ್ದ ಅರಿವು ಮತ್ತು ಕಳಕಳಿ ಖುಷಿ ನೀಡಿದೆ. ಜೊತೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದಾಗ, ವೇತನ ತಾರತಮ್ಯವನ್ನು ತಪ್ಪದೆ ಈಡೇರಿಸುವ ಮಾತನ್ನು ನನಗೆ ಕೊಟ್ಟಿದ್ದು ಮತ್ತಷ್ಟು ಖುಷಿ ಕೊಟ್ಟಿದೆ. ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚುಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ’ ಎಂದು ಬರೆದಿದ್ದಾರೆ.

ನಿಮ್ಮ ತಂದೆ ಅನುಭವಿಸಿದ ನೋವು ನಿಮಗೆ ಅರಿವಿದೆ: ಬೆಂಬಲ ಕೋರಿ ನಟ ಯಶ್‌ಗೆ ಸಾರಿಗೆ ನೌಕರರ ಮನವಿ

ಸಾರಿಗೆ ಸಂಸ್ಥೆಯ ನೌಕರರ ಕರ್ತವ್ಯ ನಿಷ್ಠೆಯನ್ನು ನೆನೆಸಿಕೊಂಡಿರುವ ಅವರು, ‘ಮನೆಯಲ್ಲಿ ನಾನು ತಡ ಮಾಡಿದ್ರೆ, ‘ದಿನಾಲೂ ನನ್ನ ಬಸ್ಸಿನಲ್ಲಿಯೇ ಬರುವ ಪ್ರಯಾಣಿಕರಿಗೆ ಟ್ರೈನ್‌ ಮಿಸ್‌ ಆಗುತ್ತೇನೋ? ಹಾಗೂ ‘ಆಫೀಸ್‌ಗೆ ಲೇಟ್‌ ಆಗುತ್ತೇನೋ’ ಅಂತ ನಮ್ಮಪ್ಪ ಎಷ್ಟೋ ದಿನ ಬೆಳಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೇ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತದೆ. ಬಹುಶಃ ಇದು ನನ್ನ ಅಪ್ಪನ ಕತೆ ಮಾತ್ರವಲ್ಲ. ಕರ್ತವ್ಯ ನಿಷ್ಠೆ ಮೆರೆವ ಸಾವಿರಾರು ಸಾರಿಗೆ ನೌಕರರ ದಿನಚರಿ ಹೀಗೆ ಇರುತ್ತದೆ’ ಎಂದು ಹೇಳಿದ್ದಾರೆ.

ಸಾಮರಸ್ಯದ ಕುರಿತು ಹೇಳಿಕೆ ನೀಡಿರುವ ಯಶ್‌, ‘ಸಾರಿಗೆ ಸಂಸ್ಥೆಯ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಮತ್ತು ಸಹಕಾರ ಲೆಕ್ಕವಿಲ್ಲದಷ್ಟುಗೆಳೆತನಗಳಿಗೆ ಸಾಕ್ಷಿಯಾಗಿವೆ. ಆದರೆ ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯವಿರಬಹುದು, ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು. ಓವರ್‌ಡ್ಯೂಟಿಗಾಗಿ ನಡೆಯುವ ಜಟಾಪಟಿಗಳಿರಬಹುದು ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು. ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು. ಈ ಎರಡು ಕೂಡ ನನ್ನನ್ನು ಬಹುವಾಗಿ ಕಾಡುತ್ತಿವೆ’ ಎಂದು ಬರೆದಿದ್ದಾರೆ.