ಬೆಂಗಳೂರು(ಏ.15):  ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿರುವ ರಾಜ್ಯ ರಸ್ತೆ ಸಾರಿಗೆ ನೌಕರರು, ತಮ್ಮ ಹೋರಾಟ ಬೆಂಬಲಿಸುವಂತೆ ಕೋರಿ ರಾಕಿಂಗ್‌ ಸ್ಟಾರ್‌ ಯಶ್‌ ಅವರಿಗೆ ಮನವಿ ಮಾಡಿದೆ.

ಸಾರಿಗೆ ಇಲಾಖೆಯ ಚಾಲಕರಾಗಿ ಸ್ವಯಂ ನಿವೃತ್ತಿ ಹೊಂದಿರುವ ತಮ್ಮ ತಂದೆ ಅನುಭವಿಸಿರುವ ನೋವು ನಿಮಗೆ ಅರಿವಿರಲಿದೆ. ಸಾರಿಗೆ ನೌಕರರಿಗೆ ಆಗುತ್ತಿರುವ ತಾರತಮ್ಯ, ದೌರ್ಜನ್ಯ, ದಬ್ಬಾಳಿಕೆಗಳಿಂದ ಬೇಸತ್ತು ಕುಟುಂಬ ಸಮೇತರಾಗಿ ಬೀದಿಗಿಳಿದಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ಮುಷ್ಕರಕ್ಕೆ ಮುಂದಾಗಿದ್ದು, ಸರ್ಕಾರ ಹಠಮಾರಿ ಧೋರಣೆಯಿಂದ ದುಡಿಯುವ ಕೈಗಳನ್ನು ಭಿಕ್ಷೆ ಬೇಡುವಂತಾಗಿದೆ. ಇಂತಹ ಸಂಕಷ್ಟದಲ್ಲಿ ತಮ್ಮ ಬೆಂಬಲಕ್ಕೆ ನೀವು ಕೈ ಜೋಡಿಸಿದಲ್ಲಿ ಹೋರಾಟಕ್ಕೆ ಧನಾತ್ಮಕ ಪರಿಣಾಮ ಬೀರಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನಿಲ್ಲದ ಸಾರಿಗೆ ಮುಷ್ಕರ: ಮತ್ತೆ 121 ನೌಕರರ ಅಮಾನತು

ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಸರ್ಕಾರ ಇದಕ್ಕೆ ಸ್ಪಂದಿಸದ ಪರಿಣಾಮ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಸರ್ಕಾರ ಇತ್ತ ಗಮನ ಹರಿಸದೆ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಪರಿಣಾಮ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗುತ್ತಿದೆ. ಹಾಗಾಗಿ ಹೋರಾಟಕ್ಕೆ ಬೆಂಬಲ ನೀಡುವಂತೆ ನೌಕರರು ಯಶ್‌ ಅವರಿಗೆ ಮನವಿ ಮಾಡಿದ್ದಾರೆ.