ಕರಾವಳಿ, ಮಲೆನಾಡಿನ ನದಿ ತೀರಗಳಲ್ಲಿ ಪ್ರವಾಹ ತುಂಗಭದ್ರ ಡ್ಯಾಂಗೆ ಒಂದೇ ದಿನದಲ್ಲಿ ಬಂತು 6 ಟಿಎಂಸಿ ನೀರು ಅಪಾಯದ ಮಟ್ಟದಲ್ಲಿ ಗಂಗಾವಳಿ, ಅಘನಾಶಿನಿ

 ಬೆಂಗಳೂರು (ಜು.9): ಕರಾವಳಿ, ಮಲೆನಾಡು ಮಾತ್ರವಲ್ಲದೆ ಬಯಲು ಸೀಮೆಯ ಕೆಲ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಜೀವನದಿಗಳಾದ ಕೃಷ್ಣ, ತುಂಗಭದ್ರಾ ಸೇರಿದಂತೆ ಅನೇಕ ನದಿಗಳು (River) ಉಕ್ಕಿ ಹರಿಯುತ್ತಿವೆ.

ಉತ್ತರ ಕನ್ನಡದಲ್ಲಿ (Uttara kannada) ಭಟ್ಕಳದ ಚೌಥನಿ, ಕುಮಟಾದ ಬಡಗಣಿ, ಹೊನ್ನಾವರದ ಗುಂಡಬಾಳ ಹಾಗೂ ಭಾಸ್ಕೇರಿ ನದಿಗಳು ಪ್ರವಾಹಕ್ಕೆ ಕಾರಣವಾಗಿವೆ. ಜಿಲ್ಲೆಯ ಪ್ರಮುಖ ನದಿಗಳಾದ ಗಂಗಾವಳಿ, ಅಘನಾಶಿನಿ ಅಪಾಯದ ಮಟ್ಟದಲ್ಲಿ ಪ್ರವಹಿಸುತ್ತಿದ್ದರೆ, ಶರಾವತಿ, ಕಾಳಿ, ವೆಂಕಟಾಪುರ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಭಟ್ಕಳದಲ್ಲಂತೂ ಚೌಥನಿ ನದಿ ಉಗ್ರ ರೂಪ ತಾಳಿದ್ದು ನದಿ ತೀರದ ಗ್ರಾಮಗಳು ಜಲಾವೃತವಾಗಿವೆ.

ರೈತರಿಗೆ ಗುಡ್‌ನ್ಯೂಸ್, ಅವಧಿಗೂ ಮುನ್ನವೇ ಭರ್ತಿಯಾಗಲಿದೆ ತುಂಗಭದ್ರೆಯ ಒಡಲು

ಉಡುಪಿ ಜಿಲ್ಲೆಯಲ್ಲಿ ಸೌಪರ್ಣಿಕ, ಎಣ್ಣೆಹೊಳೆ ಸೇರಿದಂತೆ ಬಹುತೇಕ ನದಿಗಳು ಉಕ್ಕೇರಿ ಹರಿಯುತ್ತಿವೆ. ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಧರ್ಮಾ, ವರದಾ ನದಿಗಳಲ್ಲಿ ನೀರಿನ ಮಟ್ಟಏರಿಕೆಯಾಗಿದೆ. ಕಳಸೂರು, ನಾಗನೂರು, ಕೂಡಲ ಬ್ರಿಜ್‌ ಕಂ ಬ್ಯಾರೇಜ್‌ ಸಂಪೂರ್ಣ ಮುಳುಗಡೆಯಾಗಿದ್ದು, ಕೆಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಯಾದಗಿರಿ ಜಿಲ್ಲೆಯಲ್ಲಿ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ತುಂಗಾ, ಶರಾವತಿ, ವರದಾ ಮೊದಲಾದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ತುಂಗಾ ಜಲಾಶಯಕ್ಕೆ 48,209 ಕ್ಯುಸೆಕ್‌ ಒಳಹರಿವಿದ್ದು, 54,065 ಕ್ಯುಸೆಕ್‌ ಹೊರಬಿಡಲಾಗುತ್ತಿದೆ. ಹೀಗಾಗಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿ ಅಪಾಯ ಮಟ್ಟಕ್ಕೇರಿದೆ. ಕೋರ್ಪಲಯ್ಯನ ಛತ್ರದ ಬಳಿ ಇರುವ ತುಂಗಾ ನದಿಯ ಕಲ್ಲಿನ ಮಂಟಪ ಮುಳುಗಲು ಅರ್ಧ ಅಡಿಯಷ್ಟುಬಾಕಿ ಇದೆ.

Karnataka Reservoir Water Level: ಪ್ರವಾಹ ಭೀತಿಯ ನಡುವೆ ಸಂತಸದ ಸುದ್ದಿ, ಭರ್ತಿಯಾಗುತ್ತಿವೆ ಜಲಾಶಯಗಳು

ಟಿಬಿ ಡ್ಯಾಂಗೆ ಭಾರೀ ನೀರು: ಭದ್ರಾ ಜಲಾಶಯಕ್ಕೆ 29,042 ಕ್ಯುಸೆಕ್‌ ಒಳಹರಿವಿದ್ದು, 143 ಕ್ಯುಸೆಕ್‌ ಹೊರಬಿಡಲಾಗಿದೆ. ಜಲಾಶಯದ ಮಟ್ಟ166.4 ಅಡಿಗೆ ಏರಿದೆ. ಲಿಂಗನಮಕ್ಕಿ ಜಲಾಶಯಕ್ಕೆ 56,645 ಕ್ಯುಸೆಕ್‌ ನೀರು ಬರುತ್ತಿದ್ದು, ಮಟ್ಟ1772.60 ಅಡಿಗೆ ಏರಿಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯ ಮಟ್ಟಮೀರಿ ಹರಿಯುತ್ತಿವೆ. ತುಂಗಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಹೊಸಪೇಟೆ ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರಿ ಏರಿಕೆಯಾಗಿದ್ದು, ಒಂದೇ ದಿನದ ಅಂತರದಲ್ಲಿ ಜಲಾಶಯಕ್ಕೆ ಆರು ಟಿಎಂಸಿಯಷ್ಟು ನೀರು ಹರಿದು ಬಂದಿದೆ.

ಜಲಾಶಯದ ಒಳಹರಿವು ಶುಕ್ರವಾರ 89,103 ಕ್ಯುಸೆಕ್‌ನಷ್ಟಿದೆ. ಜಿಲ್ಲೆಯ ಹರಪನಹಳ್ಳಿ, ಹೂವಿನಹಡಲಿ, ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆ ತಾಲೂಕುಗಳ ನದಿಪಾತ್ರದ ಜನರು ಮುನ್ನಚ್ಚರಿಕೆ ವಹಿಸಲು ಈಗಾಗಲೇ ಹಳ್ಳಿ, ತಾಂಡಾಗಳಲ್ಲಿ ಡಂಗುರ ಸಾರಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ಹರಿವು ಹೆಚ್ಚಳವಾಗಿರುವುದರಿಂದ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಾಲಯದ ಭಕ್ತರ ಸ್ನಾನಘಟ್ಟಮುಳುಗಿದೆ. ಅಂಗಡಿಗಳು ಜಲಾವೃತವಾಗಿವೆ.

ಅಮರನಾಥ ಯಾತ್ರೆಯಲ್ಲಿ ಸಿಲುಕಿದ ಕನ್ನಡಿಗರಿಗೆ ರಾಜ್ಯದಿಂದ ಸಹಾಯವಾಣಿ!

ಕೃಷ್ಣಾ ಮಟ್ಟಏರಿಕೆ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಒಟ್ಟು 75 ಸಾವಿರ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಬರುತ್ತಿದೆ. ಜತೆಗೆ ವೇದಗಂಗಾ ಮತ್ತು ದೂಧಗಂಗಾ ಉಪನದಿಗಳು ಸಹ ಒಡಲುಕ್ಕಿ ಹರಿಯಲಾರಂಭಿಸಿವೆ.