ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬಳಿಕ ಇದೀಗ ಅಕ್ಕಿ ಬೆಲೆಯೂ ಗಗನಕ್ಕೇರಿದೆ. ಪ್ರತಿ ಕೆ.ಜಿ. ಅಕ್ಕಿಗೆ 6 ರಿಂದ 10 ರೂಪಾಯಿವರೆಗೆ ಹೆಚ್ಚಳವಾಗಿದ್ದು, ಕೇಂದ್ರ ಸರ್ಕಾರದ ರಫ್ತು ನೀತಿ ಹಾಗೂ ಸ್ಥಳೀಯ ದಾಸ್ತಾನು ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
- ಪ್ರತಿ ಕೆ.ಜಿ. ಅಕ್ಕಿಗೆ 6ರಿಂದ 10 ರು.ವರೆಗೆ ಹೆಚ್ಚಳ
- ಇರಾನ್ ಬಿಕ್ಕಟ್ಟು ಎಫೆಕ್ಟ್, ಗ್ರಾಹಕರ ಜೇಬಿಗೆ ಬರೆ.
- ನವೆಂಬರ್ ವರೆಗೂ ಇದೇ ಸ್ಥಿತಿ?
ಬೆಂಗಳೂರು (ಜೂ.12): ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿ ಬೆಲೆ ಏರಿಕೆ ನಡುವೆಯೇ ಇದೀಗ ವಿವಿಧ ತಳಿಯ ಅಕ್ಕಿ ಬೆಲೆಯೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಅಕ್ಕಿಗೆ 6 ರಿಂದ 10 ರು.ನಷ್ಟು ಹಾಗೂ 25-26 ಕೆ.ಜಿ. ಚೀಲಕ್ಕೆ 150 ರು.ನಷ್ಟು ದರ ಏರಿಕೆಯಾಗುವ ಮೂಲಕ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ.
ಮಾರುಕಟ್ಟೆಯಲ್ಲಿ ಅಕ್ಕಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಅವಕಾಶ ನೀಡಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯತೆ ಕಡಿಮೆಯಾಗಿದೆ. ಇದೇ ಕಾರಣದಿಂದ ಬೆಲೆ ಏರಿಕೆಯಾಗುತ್ತಿದೆ. ಮುಂದಿನ ನವೆಂಬರ್ ವರೆಗೂ ಅಕ್ಕಿ ಕೊರತೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
10 ದಿನದ ಹಿಂದೆಯೇ ಏರಿಕೆ:
ಸೋನಾ ಮಸೂರಿ, ಸ್ಟೀಮ್ ಅಕ್ಕಿ, ಕೋಲಂ ಮತ್ತು ರಾ ರೈಸ್ ಸೇರಿ ಎಲ್ಲ ಮಾದರಿಯ ಅಕ್ಕಿ ಬೆಲೆ ಕೆಜಿಗೆ 6ರಿಂದ 10 ರು.ಹೆಚ್ಚಳವಾಗಿದೆ. ಹತ್ತು ದಿನಗಳ ಹಿಂದೆಯೇ ಅಕ್ಕಿ ದರ ಏರಿಕೆಯಾಗಿದೆ. ಪ್ರತಿ 26 ಕೆಜಿ ಅಕ್ಕಿ ಮೂಟೆ ಬೆಲೆ ಕನಿಷ್ಠ 150 ರು.ಹೆಚ್ಚಳವಾಗಿದೆ. ‘ಅಕ್ಕಿ ಬೆಲೆ ಏರಿಕೆಯಿಂದ ವ್ಯಾಪಾರದ ಮೇಲೆ ಹೆಚ್ಚಿನ ಪರಿಣಾಮವೇನೂ ಬೀರಿಲ್ಲ. ಜನ ಊಟ ಮಾಡಲೇಬೇಕು. ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಲೇ ಅನಿವಾರ್ಯವಾಗಿ ಹೆಚ್ಚಿನ ದರ ಕೊಟ್ಟು ಅಕ್ಕಿ ಖರೀದಿಸುತ್ತಿದ್ದಾರೆ’ ಎಂದು ಗಿರಿನಗರದ ಶ್ರೀ ಗುರುರಾಘವೇಂದ್ರ ಟ್ರೇಡರ್ಸ್ ಮಾಲೀಕ ಎನ್.ಶ್ರೀಧರ್ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಕ್ಕಿ ದರ ಕೆ.ಜಿ.ಗೆ 1ರಿಂದ 2 ರು. ಜಾಸ್ತಿಯಾಗುತ್ತಿತ್ತು. ಆದರೆ ಈ ಬಾರಿ ಜಾಗತಿಕ ಮಟ್ಟದಲ್ಲಿ ಹದಗೆಡುತ್ತಿರುವ ರಾಜತಾಂತ್ರಿಕ ಪರಿಸ್ಥಿತಿ ಮತ್ತು ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನದಂತೆ ಅಕ್ಕಿ ಬೆಲೆಯೂ ಹೆಚ್ಚಾಗುತ್ತಿದೆ. ಸೋನಾ ಸ್ಟೀಮ್ ರೈಸ್ 43 ರು.ನಿಂದ 49 ರು.ಗೆ ಹಾಗೂ ಸೋನಾ ರಾ ರೈಸ್ 52 ರೂ.ನಿಂದ 59 ರು.ಗೆ ಏರಿಕೆಯಾಗಿದೆ. ಶ್ರೀಲಂಕಾ ಸೇರಿ ಕೆಲ ದೇಶಗಳಿಗೆ ಅಕ್ಕಿ ರಫ್ತು ಹೆಚ್ಚಾಗಿರುವುದು ಮತ್ತು ಸ್ಥಳೀಯವಾಗಿ ದಾಸ್ತಾನು ಕೊರತೆಯಿಂದಾಗಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಬೆಲೆ ಸ್ವಲ್ಪ ಹೆಚ್ಚಾಗಿದೆ. ಅಕ್ಟೋಬರ್, ನವೆಂಬರ್‌ನಲ್ಲಿ ಹೊಸ ಅಕ್ಕಿ ಮಾರುಕಟ್ಟೆಗೆ ಬರುವವರೆಗೂ ಕಾಯಬೇಕಾಗಿರುವುದು ಅನಿವಾರ್ಯ ಎನ್ನುತ್ತಾರೆ ವ್ಯಾಪಾರಸ್ಥರು.

