ಬೆಂಗಳೂರು(ಜೂ.02): ಕೊರೋನಾ ವೈರಸ್‌ ಸೋಂಕಿನಿಂದ ಮೃತಪಟ್ಟಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ಅನಾಥ ಶವಗಳ ಅಸ್ಥಿಯನ್ನು ಕಂದಾಯ ಸಚಿವ ಆರ್‌.ಅಶೋಕ್‌ ಅವರು ವಿಧಿವತ್ತಾಗಿ ವಿಸರ್ಜಿಸಲಿದ್ದಾರೆ.

ಬುಧವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳವಾಡಿಯಲ್ಲಿರುವ ಅನ್ನಪೂರ್ಣೇಶ್ವರಿ ಮತ್ತು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಸಮೀಪದ ಕಾವೇರಿ ನದಿಯಲ್ಲಿ ಮಧ್ಯಾಹ್ನ 12ಕ್ಕೆ ಅಸ್ಥಿ ವಿಸರ್ಜನೆ ನಡೆಯಲಿದೆ. ಕಂದಾಯ ಸಚಿವ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ ಅಸ್ಥಿಯನ್ನು ನೀರಿನಲ್ಲಿ ವಿಸರ್ಜಿಸುವ ಕಾರ್ಯ ನಡೆಯಲಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ವಿವಿಧ ಚಿತಾಗಾರಗಳಲ್ಲಿ ನೆರವೇರಿಸಲಾಗಿತ್ತು. ಆ ನಂತರ ಮೃತ ಸಂಬಂಧಿಕರು ಅಸ್ಥಿ ತೆಗೆದುಕೊಂಡು ಹೋಗಲು ಬಂದಿರಲಿಲ್ಲ. ಅವರಿಗೆ ಸುಮಾರು 15 ದಿನಗಳ ಕಾಲ ಅಸ್ಥಿ ತೆಗೆದುಕೊಂಡು ಹೋಗಲು ತಿಳಿಸಲಾಗಿತ್ತು. ಈವರೆಗೂ ಯಾರು ಕೂಡ ಅಸ್ಥಿ ಪಡೆಯಲು ಮುಂದೆ ಬರದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಹಿಂದು ಸಂಪ್ರದಾಯದ ಪ್ರಕಾರ ಅಸ್ಥಿ ವಿಸರ್ಜನೆಗೆ ನಿರ್ಧರಿಸಲಾಗಿದೆ.

ಸಾಮಾನ್ಯವಾಗಿ ಒಂದೆರಡು ದಿನಗಳ ನಂತರ ಮೃತರ ಸಂಬಂಧಿಕರು ಬಂದು ಅಸ್ಥಿ ತೆಗೆದುಕೊಂಡು ಹೋಗುತ್ತಾರೆ. ಆದರೆ, ಕೆಲ ಪ್ರಕರಣಗಳಲ್ಲಿ ಸಂಬಂಧಿಕರು ಈವರೆಗೂ ಬಂದಿಲ್ಲ. ಕೆಲವು ಸಂಬಂಧಿಕರಿಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಲಾಗಿದ್ದು ಅವರ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಹೀಗಾಗಿ ಸರ್ಕಾರವೇ ಬಡವ ಬಲ್ಲಿದ ಎಂಬ ಭೇದ ಭಾವ ಮಾಡದೇ ಅಸ್ಥಿಯನ್ನು ಪಂಚಭೂತಗಳಲ್ಲಿ ಲೀನವಾಗುವಂತೆ ನೀರಿನಲ್ಲಿ ಹಿಂದೂ ಸಂಪ್ರದಾಯ ಬದ್ಧವಾಗಿ ವ್ಯವಸ್ಥೆ ಮಾಡಿದೆ.

ಉದ್ದಿಮೆಗಳಿಗೆ ಆಕ್ಸಿಜನ್‌ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!

ಕೋವಿಡ್‌ 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಮಿತಿಮೀರಿ ಏರಿಕೆಯಾಗಿದೆ. ಈ ನಡುವೆ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಾಗಿತ್ತು. ಈ ಕಾರಣದಿಂದ ಬಿಬಿಎಂಪಿ ವ್ಯಾಪ್ತಿಯ 12 ಚಿತಾಗಾರಗಳಲ್ಲೂ ಸಾವಿರಾರು ಸೋಂಕಿತ ಶವಗಳ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಶವ ಸಂಸ್ಕಾರಕ್ಕಾಗಿ ದಿನಗಟ್ಟಲೆ ಕಾಯುವಂತ ಪರಿಸ್ಥಿತಿ ಇತ್ತು. ಈ ನಡುವೆ ಕಂದಾಯ ಸಚಿವ ಆರ್‌.ಅಶೋಕ್‌, ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರು ತಾವರೆಕೆರೆ ಸಮೀಪದ ಗಿಡ್ಡೇನಹಳ್ಳಿಯಲ್ಲಿ ದಿನಕ್ಕೆ 50ರಿಂದ 100 ಶವಗಳ ಸಂಸ್ಕಾರ ಮಾಡುವ ಜಾಗ ಗುರುತಿಸಿ ಸಕಲ ಮೂಲಭೂತ ಸೌಕರ್ಯಗಳನ್ನು ಒಂದೆರಡು ದಿನಗಳಲ್ಲಿ ಮಾಡಿದ್ದರು.

ಹೀಗೆ ವಿವಿಧ ಚಿತಾಗಾರಗಳಲ್ಲಿ ಸೋಂಕಿತ ಶವಗಳ ಸಂಸ್ಕಾರ ಮಾಡಿದ್ದು, ಅಸ್ಥಿಯನ್ನು ಸಂಬಂಧಿಕರಿಗೆ ಕೊಡಲು ಸಂಗ್ರಹಿಸಿ ಇಡಲಾಗಿತ್ತು. ಸುಮಾರು 1200ಕ್ಕೂ ಶವಗಳ ಅಸ್ಥಿಯನ್ನು ಪಡೆದುಕೊಳ್ಳಲು ಮೃತರ ಸಂಬಂಧಿಕರು ಮುಂದೆ ಬಂದಿಲ್ಲ. ಹೀಗಾಗಿ ಸರ್ಕಾರದ ವತಿಯಿಂದಲೇ ಗೌರವಯುತವಾಗಿ ಅಸ್ಥಿ ವಿಸರ್ಜನೆ ಹಮ್ಮಿಕೊಳ್ಳಲಾಗಿದ್ದು ಸಚಿವ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona