Revenue Documents ಒಂದೇ ದಿನ 5 ಕೋಟಿ ದಾಖಲೆಗಳ ವಿತರಣೆ!
- ಪಹಣಿ, ಜಾತಿ, ಆದಾಯ ಪ್ರಮಾಣಪತ್ರ ರೈತರ ಮನೆಗೇ ತಲುಪಿಸುವ ಯೋಜನೆ
- ಚಿಕ್ಕಬಳ್ಳಾಪುರದಲ್ಲಿ ‘ಮನೆ ಬಾಗಿಲಿಗೆ ಕಂದಾಯ ಇಲಾಖೆ’ಗೆ ಬೊಮ್ಮಾಯಿ ಚಾಲನೆ
- ರಾಜ್ಯದ 224 ಕ್ಷೇತ್ರಗಳ 55 ಲಕ್ಷ ರೈತ ಕುಟುಂಬಕ್ಕೆ ದಾಖಲೆ ತಲುಪಿಸಿದ ಸರ್ಕಾರ
ಬೆಂಗಳೂರು (ಮಾ.13): ರೈತರ ಮನೆಬಾಗಿಲಿಗೆ (farmer Doorstep) ಕಂದಾಯ ಇಲಾಖೆಯ ದಾಖಲೆಗಳನ್ನು (Revenue Documents) ತಲುಪಿಸುವ ಮಹತ್ವಾಕಾಂಕ್ಷೆಯ ‘ಮನೆ ಬಾಗಿಲಿಗೆ ಕಂದಾಯ ದಾಖಲೆ’ ಯೋಜನೆಗೆ ರಾಜ್ಯದ 31 ಜಿಲ್ಲೆಗಳ 224 ಕ್ಷೇತ್ರಗಳಲ್ಲಿ ಶನಿವಾರ ಚಾಲನೆ ನೀಡಲಾಯಿತು. ದೇಶದಲ್ಲೇ ಮೊದಲನೆಯದ್ದು ಎನ್ನಲಾದ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM basavaraj bommai) ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಕುಗ್ರಾಮ ಗುಂಗೀರ್ಲಹಳ್ಳಿಯಲ್ಲಿ ಅಧಿಕೃತವಾಗಿ ಚಾಲನೆ ನೀಡಿದರು. ಈ ಕಾರ್ಯಕ್ರಮದ ಮೂಲಕ ಒಂದೇ ದಿನ ರಾಜ್ಯಾದ್ಯಂತ 55 ಲಕ್ಷ ರೈತರಿಗೆ 5 ಕೋಟಿಯಷ್ಟುಕಂದಾಯ ದಾಖಲೆಗಳನ್ನು ಉಚಿತವಾಗಿ ವಿತರಿಸಲಾಯಿತು.
ಗುಂಗೀರ್ಲಹಳ್ಳಿಯಲ್ಲಿ 13 ಕುಟುಂಬಗಳಿಗೆ ಸಾಂಕೇತಿಕವಾಗಿ ಕಂದಾಯ ದಾಖಲೆಗಳನ್ನು ವಿತರಿಸಿದ ಬಳಿಕ ಮಾತನಾಡಿದ ಬೊಮ್ಮಾಯಿ, ಕಂದಾಯ ಇಲಾಖೆಯಲ್ಲಿ ಈ ಯೋಜನೆ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದು ಬಣ್ಣಿಸಿದರು. ಈ ಕಾರ್ಯಕ್ರಮದಿಂದ ರೈತರು, ಸಾರ್ವಜನಿಕರು ದಾಖಲೆ ಪತ್ರಗಳಿಗಾಗಿ ಪದೇ ಪದೇ ಸರ್ಕಾರಿ ಕಚೇರಿಗೆ ಅಲೆದಾಡುವುದು ತಪ್ಪಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡವರು, ರೈತರು, ದೀನದಲಿತರು ಹಿಂದುಳಿದ ವರ್ಗದವರ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡಿದ್ದೇ ಹೆಚ್ಚು. ಬಡವರು, ದೀನದಲಿತರೆಲ್ಲ ಉದ್ಧಾರವಾಗಿದ್ದರೆ ಇಂದು ನಾವು ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಭೂ ದಾಖಲೆಯನ್ನು (Land Documents) ಪಡೆಯುವುದು ಪ್ರತಿಯೊಬ್ಬರ ಹಕ್ಕು. ಆ ಹಕ್ಕನ್ನು ಅತ್ಯಂತ ಸರಳ ರೀತಿಯಲ್ಲಿ ಪಡೆಯಲು ಈ ಮಹತ್ವದ ಯೋಜನೆ ಸಹಕಾರಿಯಾಗಲಿದೆ. ಕಂದಾಯ ದಾಖಲೆಗಳನ್ನು ಫಲಾನುಭವಿಗಳ ಮನೆಬಾಗಿಲಿಗೆ ವಿತರಿಸುವ ಈ ವಿನೂತನ ಯೋಜನೆ 224 ಕ್ಷೇತ್ರಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ರೀತಿ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ( Revenue Minister R. Ashoka ) ಹೇಳಿದರು.
ರೈತರ ಹಕ್ಕನ್ನು ನಿರ್ಧರಿಸುವ ದಾಖಲೆಗಳಾದ ಪಹಣಿ (Pahani), ಅಟ್ಲಾಸ್ (Map), ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ಮುದ್ರಿಸಿ ಕುಟುಂಬವಾರು, ಗ್ರಾಮವಾರು ವಿಂಗಡಿಸಿ ಪೂರ್ವಮುದ್ರಿತ ಫೈಲ್ ಅಥವಾ ಫೋಲ್ಡರ್‌ನಲ್ಲಿ ಹಾಕಿ ಸಂಬಂಧಿಸಿದ ರೈತ ಕುಟುಂಬಕ್ಕೆ ತಲುಪಿಸುವ ವಿಶಿಷ್ಟಯೋಜನೆ ಇದಾಗಿದ್ದು, ಕಂದಾಯ ಇಲಾಖೆ ಸಿಬ್ಬಂದಿಯೇ ಖುದ್ದು ರೈತರ ಮನೆ ಬಾಗಿಲಿಗೆ ತೆರಳಿ ದಾಖಲೆಗಳನ್ನು ವಿತರಿಸುವರು.
ಹಬ್ಬದ ವಾತಾವರಣ: ಬೊಮ್ಮಾಯಿ ಆಗಮನದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಚಿಕ್ಕಬಳ್ಳಾಪುರ ನಗರದಿಂದ 15 ಕಿ.ಮೀ. ದೂರದಲ್ಲಿರುವ ಪರಿಶಿಷ್ಟಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕುಗ್ರಾಮದಲ್ಲಿ ಸಿಎಂಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮುಖ್ಯಮಂತ್ರಿ ಅವರು ಗ್ರಾಮಸ್ಥರ ಮನೆಗೆ ಹೋಗಿ ಅವರ ಅಹವಾಲು ಆಲಿಸಿದ್ದು ವಿಶೇಷವಾಗಿತ್ತು.
'ದೇವೇಗೌಡ-ಎಚ್‌ಡಿಕೆ ಜೊತೆ ಚರ್ಚೆ ಫಲಪ್ರದ, ಸ್ವಾಮೀಜಿಗಳ ಜತೆ ಚರ್ಚಿಸಿ JDS ಸೇರ್ಪಡೆ ದಿನಾಂಕ ನಿಗದಿ'
ಶಿಕಾರಿಪುದಲ್ಲಿ ಬಿಎಸ್ವೈ: ಮುಖ್ಯಮಂತ್ರಿ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಚಾಲನೆ ನೀಡಿದರೆ, ಶಿವಮೊಗ್ಗದ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮೈಸೂರಲ್ಲಿ ಸಚಿವ ಎಸ್.ಟಿ.ಸೋಮಶೇಖರ್, ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡು ಗ್ರಾಪಂನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್, ಬಂಟ್ವಾಳದ ಅಮ್ಮುಂಜೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ವಿವಿಧ ಸಚಿವರು, ಜನಪ್ರತಿನಿಧಿಗಳು, ಶಾಸಕರು ಕಾರ್ಯಕ್ರಮ ಉದ್ಘಾಟಿಸಿದರು.
ಯುಟಿ ಖಾದರ್‌ಗೆ ಶಾಕ್, 24 ವರ್ಷದಿಂದ ಜೊತೆಗಿದ್ದ ಮುಖಂಡ ಬಿಜೆಪಿ ಸೇರ್ಪಡೆ
ಅಶೋಕಣ್ಣನಿಂದ ಕ್ರಾಂತಿ-ಸಿಎಂ
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂದಾಯ ಸಚಿವ ಆರ್.ಅಶೋಕ್ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅಶೋಕಣ್ಣ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ಕಂದಾಯ ಇಲಾಖೆಯಲ್ಲಿ ಕ್ರಾಂತಿ ಸೃಷ್ಟಿಸಲಿದೆ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಸಚಿವ ಅಶೋಕ್, ಜನಪರವಾದ ಸರ್ಕಾರ, ಜನರ ಮುಖ್ಯಮಂತ್ರಿಯಿಂದ ಮಾತ್ರ ಈ ರೀತಿಯ ಕಾರ್ಯಕ್ರಮ ಮಾಡಲು ಸಾಧ್ಯ ಎಂದು ಬೊಮ್ಮಾಯಿ ಅವರನ್ನು ಹೊಗಳಿದರು. ಗರೀಬಿ ಹಟಾವೋ ಹೆಸರೇಳಿ ರಾಜಕಾರಣ ಮಾಡಿದ ಕಾಂಗ್ರೆಸ್ ಬಡವರು, ದಲಿತರ ಉದ್ಧಾರ ಮಾಡಲಿಲ್ಲ. ಅವರೆಲ್ಲಾ ಉದ್ಧಾರವಾಗಿದ್ದರೆ ನಾವು ಕಂದಾಯ ದಾಖಲೆಗಳನ್ನು ಮನೆ ಬಾಗಿಲಿಗೆ ಹೋಗಿ ಕೊಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಶೋಕಣ್ಣ ಮುಂದಾಳತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಈ ಕಾರ್ಯಕ್ರಮ ಕ್ರಾಂತಿ ಸೃಷ್ಟಿಸಲಿದೆ ಎಂದು ಹೇಳಿದರು.