ಹಾಸನ[ಜ.27]: ನಗರದ ಬಿ.ಎಂ.ರಸ್ತೆ ಅಗಲೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ವೇದಿಕೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಶಾಸಕ ಪ್ರೀತಂ ಗೌಡ ನಡುವೆ ವಾಗ್ವಾದ ನಡೆದ ಘಟನೆ ಶನಿವಾರ ನಡೆದಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ಇಬ್ಬರು ಅಕ್ಕಪಕ್ಕ ಆಸೀನರಾಗಿದ್ದರು. ಈ ವೇಳೆ ಪ್ರೀತಂಗೌಡ ತಾವು ಊರಿನಲ್ಲಿ ಇಲ್ಲದ ಸಮಯದಲ್ಲಿ ಬಿ.ಎಂ.ರಸ್ತೆ ಅಗಲೀಕರಣಕ್ಕಾಗಿ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಆದರೆ, ಆ ವಿಷಯವನ್ನು ತಮಗೆ ತಿಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಚಿವ ರೇವಣ್ಣ, ಅಧಿಕಾರಿಗಳು ಈ ಬಗ್ಗೆ ನನಗೆ ತಿಳಿಸಿಲ್ಲ ಎಂದು ಹೇಳಿದರು.

ಅದಕ್ಕೆ ಶಾಸಕರು, ನಿಮಗೂ ಹೇಳಿಲ್ಲ ಅಂದ್ರೆ ಹೇಗೆ? ಸಂಬಂಧಪಟ್ಟಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದರು. ಆಗ ರೇವಣ್ಣ ಹಕ್ಕು ಚ್ಯುತಿ ಅಂದ್ರೆ ಏನು ಅಂತಾ ಗೊತಾ? ಮೊದಲು ಓದ್ಕೊಳ್ಳಿ. ನೀವು ಹಕ್ಕುಚ್ಯುತಿ ಮಂಡಿಸಿ, ನಾನು ಆಯುಕ್ತರ ಪರವಾಗಿ ಮಾತನಾಡೋಕೆ ಗೊತ್ತಿದೆ ಎಂದು ನಗರಸಭೆ ಆಯುಕ್ತರ ಪರ ನಿಲುವು ಪ್ರಕಟಿಸಿದರು. ಹೀಗೆ ಇಬ್ಬರ ನಡುವೆ ವೇದಿಕೆಯಲ್ಲಿಯೇ ವಾಗ್ವಾದ ನಡೆದಿದೆ.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ರೇವಣ್ಣ, ರಸ್ತೆ ಅಗಲೀಕರಣ ಸಂಬಂಧ ನನ್ನ ಹಾಗೂ ಬಿಜೆಪಿ ಶಾಸಕರ ನಡುವೆ ಯಾವುದೇ ವಾಗ್ವಾದ ನಡೆದಿಲ್ಲ. ನನಗೆ ಅಭಿವೃದ್ಧಿ ಅಷ್ಟೇ ಮುಖ್ಯ. ರಸ್ತೆ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುವಂತೆ ನಾನೇನು ಹೇಳಿಲ್ಲ. ಬಿ.ಎಂ.ರಸ್ತೆ ಅಗಲೀಕರಣಕ್ಕೆ ಕಟ್ಟಡ ತೆರವು ಮಾಡಲಾಗಿದೆ. ರಸ್ತೆ ಅಗಲೀಕರಣ ಕುರಿತು ನಗರಸಭೆ ಆಯುಕ್ತರು ನನಗೆ ಮಾಹಿತಿ ನೀಡಿಲ್ಲ. ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಶಾಸಕರು ಹೇಳಿದರು. ಆ ರೀತಿ ಹಕ್ಕುಚ್ಯುತಿ ಮಂಡಿಸಲು ಆಗಲ್ಲ ಎಂದು ಹೇಳಿದೆ ಅಷ್ಟೇ ಎಂದು ತಿಳಿಸಿದರು.