ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧಿತರಾಗಿದ್ದ ಕೊಡಗಿನ ವಿಚಾರಣಾಧೀನ ಕೈದಿ ಚಂಗಪ್ಪ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ. ಇದು ಕೇರ್ ಟೇಕರ್ ಮಹಿಳೆಯ ಬ್ಲಾಕ್‌ಮೇಲ್ ಮತ್ತು ವಕೀಲರೊಬ್ಬರ ಹಣಕಾಸು ವಂಚನೆಯಿಂದ ಮಾನಸಿಕ ಆಘಾತಕ್ಕೊಳಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ಜೈಲಿನಲ್ಲಿ ಕೈದಿ ಸಾವು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಕೊಡಗು: 20 ದಿನಗಳ ಹಿಂದಷ್ಟೇ ಬಂಧಿಸಲ್ಪಟ್ಟು ಕೊಡಗು ಜಿಲ್ಲಾ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬದವರಿಂದ ಹಲವು ಅರೋಪಗಳು ಕೇಳಿ ಬಂದಿವೆ. ಲೈಂಗಿಕ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಕೈದಿ ಚಂಗಪ್ಪ ಜೈಲು ಪಾಲಾಗಿದ್ದರು. ಆದರೆ ಮೊನ್ನೆ ಸಂಜೆ ಚಂಗಪ್ಪ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿದ್ದು, ಇಂದು ಸಾವನ್ನಪ್ಪಿದ್ದಾರೆ.
ನಿವೃತ್ತ ಕಾರ್ಮಿಕ ಅಧಿಕಾರಿ ಆಗಿದ್ದ ಚೆಂಗಪ್ಪ ವಿರುದ್ಧ ಸುಳ್ಳು ದೂರು ದಾಖಲಾಗಿತ್ತು. ಆದರೆ ಪೊಲೀಸರು ಈ ಬಗ್ಗೆ ಸರಿಯಾಗಿ ವಿಚಾರಣೆ ನಡೆಸದೇ ಚಂಗಪ್ಪ ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಇದರಿಂದಲೇ ಮಾನಸಿಕ ಆಘಾತಗೊಂಡು ಚಂಗಪ್ಪ ಸಾವನ್ನಪ್ಪಿದ್ದಾರೆ ಎಂದು ಅವರ ಸೋದರ ಬೆಳ್ಳಿ ಪ್ರಕಾಶ್ ಆರೋಪಿಸಿದ್ದಾರೆ.
ಕೇರ್ ಟೇಕರ್ ಮಹಿಳೆಯೇ ಹನಿಟ್ರ್ಯಾಪ್ ಮಾಡಿದಳೇ?
ಮೃತ ಚೆಂಗಪ್ಪ ಅವರಿಗೆ 68 ವರ್ಷ ವಯಸ್ಸಾಗಿತ್ತು. ಕುಶಾಲನಗರ ಪಟ್ಟಣದ ನಿವಾಸಿಯಾಗಿದ್ದ ಅವರು ಒಂಟಿಯಾಗಿ ವಾಸ ಮಾಡುತ್ತಿದ್ದರು. ಹೀಗಾಗಿ ಕಂಪೆನಿಯೊಂದರ ಮೂಲಕ ಮಹಿಳೆಯೊಬ್ಬಳನ್ನು ಕೇರ್ ಟೇಕರ್ ಆಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಆದರೆ ಅದೇ ಮಹಿಳೆ ಚಂಗಪ್ಪ ಅವರನ್ನು ಟ್ರ್ಯಾಪ್ ಮಾಡಿ ಬ್ಲಾಕ್‌ಮೇಲ್ ಮಾಡಿದ ಆರೋಪವನ್ನು ಈಗ ಚಂಗಪ್ಪ ಕುಟುಂಬದವರು ಮಾಡಿದ್ದಾರೆ.
ಚೆಂಗಪ್ಪ ವಿರುದ್ಧ ಜಾತಿನಿಂದನೆ ಕೇಸ್ ದಾಖಲಿಸಿದ್ದ ಮಹಿಳೆ
ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಜಾತಿನಿಂದನೆ ಆಗಿದೆ ಎಂದು ಈ ಕೇರ್ ಟೇಕರ್ ಮಹಿಳೆ ದೂರು ನೀಡಿದ್ದಳು. ಮಹಿಳೆಯ ದೂರು ಸ್ವೀಕರಿಸಿದ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು, ಚೆಂಗಪ್ಪ ಅವರನ್ನು ವಿಚಾರಣೆಗೆಂದು ಕರೆಸಿ ಬಂಧಿಸಿದ್ದರು. ವಿಚಾರಣೆಗೆಂದು ಹೋದ ಚೆಂಗಪ್ಪ ಮತ್ತೆ ಮನೆಗೆ ಬಂದಿಲ್ಲ, ಅವರನ್ನು ಪೊಲೀಸರು ಜೈಲಿಗೆ ಹಾಕಿದ್ದರು. ಆದರೆ ವಿಚಾರಣೆ ನಡೆಯುವ ಮೊದಲೇ ಚೆಂಗಪ್ಪ ಅವರು ಸಾವನ್ನಪ್ಪಿದ್ದಾರೆ.
ಕೇರ್ ಟೇಕರ್ ಮಹಿಳೆ ಸುಳ್ಳು ದೂರು ನೀಡಿದ್ದಳು, ಆಕೆಯ ಸುಳ್ಳು ದೂರನ್ನು ಪರಿಶೀಲಿಸದೆ ಪೊಲೀಸರು ಚೆಂಗಪ್ಪ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಅದೇ ಯೋಚನೆಯಲ್ಲಿ ನಮ್ಮ ಅಣ್ಣ ಮೃತಪಟ್ಟಿದ್ದಾರೆ ಎಂದು ಸಹೋದರ ಬೆಳ್ಳಿ ಪ್ರಕಾಶ್ ಆರೋಪಿಸಿದ್ದಾರೆ.
ಒಂಟಿ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪ
ಮಹಿಳೆ ಇದೇ ರೀತಿ ಇತರ 8 ಜನರ ಮೇಲೆ ಈ ಹಿಂದೆ ಕೇಸ್ ಮಾಡಿದ್ದಾರೆ. ಈ ಮಹಿಳೆ ಒಂಟಿ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದಳು ಎನ್ನುವುದು ಗೊತ್ತಾಗಿದೆ. ಮತ್ತೊಂದೆಡೆ ಜಾಮೀನು ಕೊಡಿಸುವುದಾಗಿ ವಕೀಲರೊಬ್ಬರು ಚೆಂಗಪ್ಪ ಬಳಿ ಲಕ್ಷಾಂತರ ರೂ. ಹಣ ಪಡೆದು ದುರ್ಬಳಕೆ ಮಾಡಿದ್ದಾರೆ. ನಮ್ಮ ಅಣ್ಣನ ಮೊಬೈಲ್ ಹಾಗೂ ಅಕೌಂಟ್ ಇ ಪಿನ್ ಪಡೆದು ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡಿದ್ದಾರೆ. ಬಳಿಕ ಆದರೆ ಜಾಮೀನು ಕೊಡಿಸದೆ ಸುಮ್ಮನಾಗಿದ್ದಾರೆ. ನಮ್ಮ ಅಣ್ಣನ ಬ್ಯಾಂಕ್ ಖಾತೆಯಿಂದ ಹಣ ತೆಗೆದು ಬೈಕ್ ಖರೀದಿಸಿದ್ದಾರೆ. ಹಾಗೂ ತಮ್ಮ ಆಪ್ತರ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದೆಲ್ಲಾ ಗೊತ್ತಾದ ಮೇಲೆ ಬ್ಯಾಂಕಿಗೆ ಹೇಳಿ ಖಾತೆ ಪ್ರೀಜ್ ಮಾಡಿಸಿದ್ದೇವೆ ಎಂದು ಮೃತ ಚಂಗಪ್ಪ ಅವರ ಸೋದರ ಬೆಳ್ಳಿ ಪ್ರಕಾಶ್ ದೂರಿದ್ದಾರೆ. ಕುಟುಂಬದವರ ದೂರಿನಿಂದಾಗಿ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
ಇದನ್ನೂ ಓದಿ: ಟ್ರೇಡ್ ಲೈಸೆನ್ಸ್ ನೀಡಲು ಲಂಚಕ್ಕೆ ಆಗ್ರಹಿಸಿ 3 ತಿಂಗಳಿಂದ ಸತಾಯಿಸಿದ್ದ SDA:ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾ ಬಲೆಗೆ


