ಚಿಲ್ಲರೆ ಬೀಡಿ, ಸಿಗರೇಟ್ ವ್ಯಾಪಾರಕ್ಕೂ ಲೈಸೆನ್ಸ್ ಕಡ್ಡಾಯ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ
ಚಿಲ್ಲರೆ ಬೀಡಿ, ಸಿಗರೇಟ್ ವ್ಯಾಪಾರಕ್ಕೂ ಲೈಸೆನ್ಸ್ ಕಡ್ಡಾಯ ಸಲ್ಲದು ಎಂದು ರಾಜ್ಯದ ವಿವಿದೆಡೆ ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟು ಮಾರಾಟಗಾರರ ಸಂಘ ಪ್ರತಿಭಟನೆ ನಡೆಸಿದೆ.
ಬೆಂಗಳೂರು (ಆ.27): ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸೆನ್ಸ್ ಪಡೆಯಬೇಕು ಎಂದು ಸರ್ಕಾರ ನಿಯಮ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ರಾಜ್ಯ ಸಣ್ಣ ಬೀಡಿ-ಸಿಗರೆಟ್ ಮಾರಾಟಗಾರರ ಸಂಘದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳಿಕ ಸಂಘದ ಅಧ್ಯಕ್ಷ ಬಿ.ಎಂ.ಮುರಳಿಕೃಷ್ಣ ಮಾತನಾಡಿ, ಸರ್ಕಾರವು ಎನ್‌ಜಿಒಗಳ ಒತ್ತಡದಿಂದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಪಡೆಯಬೇಕು ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ. ತಂಬಾಕು ಚಿಲ್ಲರೆ ವ್ಯಾಪಾರವನ್ನು ವಿದೇಶಿ ಕಂಪನಿಗಳು, ಸೂಪರ್ ಮಾರ್ಕೆಟ್‌ಗಳಿಗೆ ವರ್ಗಾಯಿಸುವ ಹುನ್ನಾರ ಇದರ ಹಿಂದಿದೆ ಎಂದು ಆರೋಪಿಸಿದರು.ದೇಶದಲ್ಲಿ ಈಗಾಗಲೇ ಕಠಿಣವಾದ ತಂಬಾಕು ನಿರೋಧಕ ಕಾನೂನು ಜಾರಿಯಲ್ಲಿದೆ. ಪಾಕೆಟ್‌ಗಳ ಮೇಲೆ ಶೇ.85ರಷ್ಟುಭಾಗ ಆರೋಗ್ಯದ ಎಚ್ಚರಿಕೆ ನೀಡುವ ಚಿತ್ರಗಳನ್ನು ಮುದ್ರಿಸಲಾಗುತ್ತಿದೆ. ಅಪ್ರಾಪ್ತರಿಗೆ ಮಾರಾಟ ಮಾಡುವಂತಿಲ್ಲ. ಶಿಕ್ಷಣ ಸಂಸ್ಥೆಗಳ 100 ಅಡಿ ಅಂತರದಲ್ಲಿ ವ್ಯವಹಾರ ನಡೆಸುವಂತಿಲ್ಲ ಎಂದು ಕಾನೂನು ಜಾರಿ ಮಾಡಲಾಗಿದೆ. ಹೀಗಿರುವಾಗ ಹೊಸ ಕಾನೂನಿನ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಿದರು. ಅನಕ್ಷರಸ್ಥರಾದ ನಾವು ಕಾನೂನಿನ ನೀತಿ-ನಿಯಮ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಲೈಸೆನ್ಸ್ ಪಡೆಯಲು ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಯುವುದಿಲ್ಲ.
ಪ್ರತಿ ವರ್ಷವೂ ಲೈಸೆನ್ಸ್ ನವೀಕರಣ ಮಾಡಬೇಕಿರುವುದರಿಂದ ಹಣಕಾಸಿನ ತೊಂದರೆ ಉಂಟಾಗುತ್ತದೆ. ಈಗಾಗಲೇ ಯಾವುದೇ ನಿಯಮ ಇಲ್ಲದಿದ್ದರೂ ಕೆಲವು ಕಾರ್ಪೊರೇಷನ್ ಮತ್ತು ಪೊಲೀಸರು ನಿತ್ಯ ಶೋಷಣೆ ಮಾಡುತ್ತಿದ್ದಾರೆ. ಹೊಸ ನಿಯಮ ಜಾರಿಯಾದರೆ ಮತ್ತಷ್ಟುಭ್ರಷ್ಟಾಚಾರಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೈಸೂರಿನಲ್ಲೂ ಪ್ರತಿಭಟನೆ: ಚಿಲ್ಲರೆ ಬೀಡಿ, ಸಿಗರೇಟ್ ವ್ಯಾಪಾರಕ್ಕೂ ಲೈಸೆನ್ಸ್ ಕಡ್ಡಾಯಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟು ಮಾರಾಟಗಾರರ ಸಂಘದವರು ಮೈಸೂರಿನಲ್ಲಿ ಶುಕ್ರವಾರ ಪ್ರತಿಭಟಿಸಿದರು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಮೆರವಣಿಗೆ ಹೊರಟ ನೂರಾರು ಮಂದಿ ಪ್ರತಿಭಟನಾಕಾರರು ಗಾಂಧಿ ಚೌಕ, ಚಿಕ್ಕಗಡಿಯಾರ, ಡಿ. ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಮೆಟ್ರೋಪೊಲ್ ವೃತ್ತ, ಹುಣಸೂರು ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ತಮ್ಮ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಸಣ್ಣ ಬೀಡಿ- ಸಿಗರೇಟು ಮಾರಾಟಗಾರರ ಸಂಘದ ಅಡಿಯಲ್ಲಿ 50 ಸಾವಿರಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ಜೀವನ ಕಂಡುಕೊಂಡಿದ್ದಾರೆ. ಆದರೆ, ಸರ್ಕಾರ ಚಿಲ್ಲರೆ ಮಾರಾಟಕ್ಕೂ ಲೈಸೆನ್ಸ್ ಕಡ್ಡಾಯಗೊಳಿಸಲು ಮುಂದಾಗಿರುವುದು ಸರಿಯಲ್ಲ. ಕೋವಿಡ್ ಲಾಕ್‌ಡೌನ್ ಮತ್ತಿತರೆ ನಿರ್ಬಂಧಗಳಿಂದ ಕಳೆದ ಕೆಲವು ವರ್ಷಗಳಿಂದ ಈಗಾಗಲೇ ಸಾಕಷ್ಟುಆರ್ಥಿಕ ಹಿನ್ನಡೆ ಅನುಭವಿಸಿದ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಇದ ವಿನಾಶಕಾರಿಯಾಗಿದೆ. ಅತಿಯಾದ ತಂಬಾಕು ಕಾನೂನುಗಳು ಕೂಡಾ ಅವುಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರಿಗಳಿಂದ ಶೋಷಣೆಗಳು ಹಾಗೂ ಭ್ರಷ್ಟಾಚಾರ ಹೆಚ್ಚಿಸುತ್ತಿವೆ ಎಂದು ಅವರು ಆರೋಪಿಸಿದರು.
ಜಾಹೀರಾತು ಮತ್ತು ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಪೂರೈಕೆ ಮತ್ತು ವಿತರಣೆಯ ನಿಷೇಧ ಕಾಯ್ದೆ ಅನ್ವಯ ನಮ್ಮ ಸದಸ್ಯರು ಈಗಾಗಲೇ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದು, ಅವರ ಅನಕ್ಷರತೆ ಹಾಗೂ ಅಜ್ಞಾನದ ಲಾಭ ಪಡೆದು ಶೋಷಿಸುತ್ತಿದ್ದಾರೆ. ಮಾರಾಟಗಾರರು ಲೈಸೆನ್ಸ್ ಪಡೆಯಬೇಕು, ಪ್ರತಿವರ್ಷ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಲೈಸೆನ್ಸ್ ಪ್ರದರ್ಶಿಸುವುದು ಮತ್ತು ಸಲಹಾ ಪುಸ್ತಕ ಇರಿಸುವುದು ಹಲವು ಜವಾಬ್ದಾರಿಗಳಿದ್ದರೂ ಇವುಗಳೊಂದಿಗೆ ನಿಯಂತ್ರಣಕ್ಕೆ ಹೊಂದಾಣಿಕೆ ಇಲ್ಲದಿದ್ದಲ್ಲಿ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಇದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಧೂಮಪಾನಿಗಳನ್ನು ಕಾಡ್ತಿದೆ ಡೇಂಜರಸ್ ಬುರ್ಗರ್ಸ್ ಕಾಯಿಲೆ
ಹೀಗಾಗಿ ನಗರಾಭಿವೃದ್ಧಿ ಇಲಾಖೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸೆನ್ಸ್ ಪಡೆಯುವ ಕರ್ನಾಟಕ ಮುನಿಸಿಪಾಲಿಟಿಗಳ ಮಾದರಿ ಬೈಲಾ ಅನುಷ್ಠಾನ ಮಾಡಬಾರದು. ಬದಲಿಗೆ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಉಂಟಾದ ಆದಾಯ ನಷ್ಟದಿಂದ ಹೊರಬರಲು ನೆರವಾಗಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯಗಳಿಗೆ ಪರಿಹಾರ ಕೊಡಲು ಮಾಡಿದ್ದ ಸಾಲ ತೀರಿಸಲೆಂದು ಸೆಸ್ 4 ವರ್ಷ ವಿಸ್ತರಣೆ!
ಸಂಘದ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಗುರುಸ್ವಾಮಿ, ನೂರುಲ್ಲಾ, ಕೀರ್ತಿ, ಶಬ್ಬೀರ್, ಸೌಕತ್, ಮೋಹನ್, ರಾಜೇಂದ್ರ, ನಾರಾಯಣಶೆಟ್ಟಿ, ಪ್ರದೀಪ್, ಪ್ರಕಾಶ್, ಗುರುದೇವ್, ರಾಜಾರಾಂ, ರಾಮದೇವ್ ಮೊದಲಾದವರು ಇದ್ದರು.