ಬೆಂಗಳೂರು[ಜ.20]: ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಈಗಲ್ಟನ್‌ ರೆಸಾರ್ಟ್‌ನ ಆಡಳಿತ ಮಂಡಳಿಯು ಭೂ ಕಬಳಿಕೆ ಮಾಡಿ 982 ಕೋಟಿ ರು. ತೆರಿಗೆ ಪಾವತಿಸದೆ ವಂಚಿಸಿರುವುದರಿಂದ ಕಾಂಗ್ರೆಸ್‌ ಮುಖಂಡರು ವಾಪಸ್‌ ಬರುವಾಗ ಆ ಮೊತ್ತವನ್ನು ತೆಗೆದುಕೊಂಡು ಬರಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ವ್ಯಂಗ್ಯವಾಡಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ ಪಾವತಿಸದ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಮರ್ಯಾದಾ ಪುರುಷೋತ್ತಮರಾದ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಡಿ.ಕೆ.ಶಿವಕುಮಾರ್‌ ಅವರು ತಮ್ಮ ಶಾಸಕರನ್ನು ಕರೆ ತರುವಾಗ ಈ 982 ಕೋಟಿ ರು. ಹಣವನ್ನೂ ತರಬೇಕು ಎಂದು ಲೇವಡಿ ಮಾಡಿದರು.

ಮೈತ್ರಿ ಸರ್ಕಾರವು ಒಳಬೇಗುದಿಯಿಂದ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಟಾರ್‌ ಹೊಟೇಲ್‌ನಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದಾರಾ? ಸಿದ್ದರಾಮಯ್ಯ ಮರ್ಯಾದೆ ರಾಜಕಾರಣ ಮಾಡಲು ರೆಸಾರ್ಟ್‌ಗೆ ಹೋಗಿದ್ದಾರಾ? ಕೇಂದ್ರದಿಂದ ಸಚಿವರೊಬ್ಬರು ರಾಜ್ಯಕ್ಕೆ ಬಂದರೆ ಇಲ್ಲಿ ಪೊಲೀಸ್‌ ಮಹಾನಿರ್ದೇಶಕರು ಇಲ್ಲ, ಶಾಸಕರೂ ಬಂದಿಲ್ಲ. ಇದೇನಾ ಸರ್ಕಾರದ ಆಡಳಿತ ವ್ಯವಸ್ಥೆ ಎಂದು ಖಾರವಾಗಿ ಪ್ರಶ್ನಿಸಿದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಬಹಳ ದಿನ ಇರುವುದಿಲ್ಲ. ಈಗಾಗಲೇ ನಾಲ್ವರು ಶಾಸಕರು ಕಾಂಗ್ರೆಸ್‌ನಿಂದ ದೂರ ಉಳಿದಿದ್ದಾರೆ. ಇನ್ನೂ ಹಲವಾರು ಶಾಸಕರಿಗೆ ಅಸಮಾಧಾನ ಇದೆ. ಈ ಆಸಮಾಧಾನವು ತಾನಾಗಿಯೇ ಭುಗಿಲೇಳುತ್ತದೆ. ನಾವು ಯಾವ ಶಾಸಕರಿಗೂ ರಾಜೀನಾಮೆ ಕೊಡಿಸುವುದಿಲ್ಲ. ಪರಿಸ್ಥಿತಿ ಕೈ ಮೀರುವ ಸಂದರ್ಭ ಕಂಡು ಬಂದಾಗ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಅಲ್ಲದೇ, ರಾಜ್ಯಾದ್ಯಂತ ಪ್ರತಿಭಟನೆಗೂ ಕರೆ ನೀಡುತ್ತೇವೆ. ಸದ್ಯಕ್ಕೆ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸಲಿದೆ ಎಂದರು.