Asianet Suvarna News Asianet Suvarna News

ಮಳೆಹಾನಿ ಪರಿಹಾರ ನೆರವು ಹೆಚ್ಚಿಸಲು ಕೇಂದ್ರಕ್ಕೆ ಆಗ್ರಹ

  • ಮಳೆಹಾನಿ ಪರಿಹಾರ ನೆರವು ಹೆಚ್ಚಿಸಲು ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ
  •  7 ವರ್ಷದಿಂದ ಎನ್‌ಡಿಆರ್‌ಎಫ್‌ ನಿಧಿಯಡಿ ಪರಿಹಾರ ಹೆಚ್ಚಳ ಇಲ್ಲ
  • ನೆರವು ಏರಿಕೆಗೆ ಸದನದಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳೋಣ: ಸಿದ್ದು
Request to central govt increase rain damage compensation siddaramaiah rav
Author
First Published Sep 14, 2022, 5:15 AM IST

ವಿಧಾನಸಭೆ (ಸೆ.14) : ಮಳೆಯಿಂದಾಗುವ ಅನಾಹುತಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ (ಎನ್‌ಡಿಆರ್‌ಎಫ್‌) ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸಂಬಂಧ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸದನದಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೊಮ್ಮಾಯಿ ಸರಿಯಾಗಿ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ

ಸಿದ್ದು ವಾದ ಏನು?

  • ಪ್ರತಿ 5 ವರ್ಷಕ್ಕೊಮ್ಮೆ ವಿಪತ್ತು ನಿರ್ವಹಣಾ ಪರಿಹಾರ ಪರಿಷ್ಕರಿಸಬೇಕು
  • 2015ರಲ್ಲಿ ಪರಿಷ್ಕರಿಸಿದ್ದೇ ಕೊನೆ, ಈಗ 2022 ಬಂದರೂ ಪರಿಷ್ಕರಿಸಿಲ್ಲ
  • ಎನ್‌ಡಿಆರ್‌ಎಫ್‌ ಅಡಿ ರಾಜ್ಯಕ್ಕೆ ಕೇವಲ 885 ಕೋಟಿ ರು. ಬರುತ್ತದೆ
  • ಕೇಂದ್ರಕ್ಕೆ ನಾವು 3.5 ಲಕ್ಷ ಕೋಟಿ ತೆರಿಗೆ ನೀಡಿ ಬರೀ 50 ಸಾವಿರ ಕೋಟಿ ಮರಳಿ ಪಡೆಯುತ್ತಿದ್ದೇವೆ
  • ಈ ವರ್ಷ ಸರ್ಕಾರ ಹೇಳಿದಂತೆ 5.81 ಲಕ್ಷ ಹೆಕ್ಟೇರ್‌ ಅಲ್ಲ, 10-12 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ

ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ಅನಾಹುತ ಕುರಿತ ಸದನದಲ್ಲಿ ಚರ್ಚೆ ಆರಂಭಿಸಿ ಮಾತನಾಡಿದ ಅವರು, ಎನ್‌ಡಿಆರ್‌ಎಫ್‌ ನೀಡುವ ಪರಿಹಾರ ಮೊತ್ತವನ್ನು ಐದು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕು. 2015ರಲ್ಲಿ ಪರಿಹಾರ ಮೊತ್ತ ಪರಿಷ್ಕರಣೆ ಮಾಡಲಾಗಿತ್ತು. ನಂತರ 2020ರಲ್ಲಿ ಪರಿಷ್ಕರಿಸಬೇಕಿತ್ತು. ಆದರೆ 2022ನೇ ಸಾಲಿಗೆ ಬಂದರೂ ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್‌ ಪರಿಹಾರ ಮೊತ್ತವನ್ನು ಹೆಚ್ಚಿಸುವ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಎನ್‌ಡಿಆರ್‌ಎಫ್‌ ಮೂಲಕ ರಾಜ್ಯಕ್ಕೆ ವಾರ್ಷಿಕ 885 ಕೋಟಿ ರು. ಬರುತ್ತದೆ. ಈ ಪೈಕಿ ಶೇ.75ರಷ್ಟುಕೇಂದ್ರ ಸರ್ಕಾರದ್ದಾಗಿದ್ದು, ಶೇ.25ರಷ್ಟುರಾಜ್ಯ ಸರ್ಕಾರದ್ದಾಗಿರುತ್ತದೆ. ಇದರಲ್ಲಿ ಮೊದಲ ಕಂತು ನೀಡಿರುವ, ಕೇಂದ್ರ ಸರ್ಕಾರವು ಎರಡನೇ ಕಂತು ನೀಡಿಲ್ಲ. ಇದನ್ನು ಬಿಟ್ಟು ಬೇರೆ ಯಾವುದೇ ಪರಿಹಾರವನ್ನು ನೀಡಿಲ್ಲ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆಡಳಿತಾವಧಿಯಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸಂಗ್ರಹವಾಗುತ್ತಿದ್ದ ವಾರ್ಷಿಕ ತೆರಿಗೆ ಕೇವಲ 4,500 ಕೋಟಿ ರು. ಆಗಿದ್ದು, ಈಗ ಇದೇ ತೆರಿಗೆ ಸಂಗ್ರಹ 35 ಸಾವಿರ ಕೋಟಿ ರು. ಆಗಿದೆ. ರಾಜ್ಯದಿಂದ ವಿವಿಧ ರೀತಿಯ ತೆರಿಗೆ ರೂಪದಲ್ಲಿ ವರ್ಷಕ್ಕೆ ಸುಮಾರು ಮೂರೂವರೆ ಲಕ್ಷ ಕೋಟಿ ರು. ಕೇಂದ್ರಕ್ಕೆ ಸಂದಾಯವಾಗುತ್ತಿದೆ. ಇದರಲ್ಲಿ ನಮಗೆ ಹಿಂತಿರುಗಿ ಪಾವತಿಯಾಗುವುದು 50 ಸಾವಿರ ಕೋಟಿ ರು. ಆಗಿದೆ. ಇದನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸಬೇಕಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಆ.20ರವರೆಗಿನ ಅತಿವೃಷ್ಟಿನಷ್ಟಕ್ಕೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ನಂತರ ಸುರಿದ ಮಳೆಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಈವರೆಗೆ ಮನವಿ ನೀಡಿಲ್ಲ. ಕಳೆದ 15 ವರ್ಷದಲ್ಲಿ 28 ಮನವಿ ಪತ್ರಗಳನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ನೀಡಿದೆ. ಇದರಲ್ಲಿ ಬಿಜೆಪಿ ಸರ್ಕಾರ 16 ಬಾರಿ ಮನವಿ ಮಾಡಿದೆ. 2017-18 ವರ್ಷ ಹೊರತುಪಡಿಸಿದರೆ ಉಳಿದ ಎಲ್ಲಾ ವರ್ಷಗಳೂ ಅತಿವೃಷ್ಟಿಅಥವಾ ಅನಾವೃಷ್ಟಿಎದುರಿಸಿದೆ. ಸರ್ಕಾರದ ಮನವಿಯಲ್ಲಿ 110 ಮಂದಿ ಪ್ರಾಣ ಕಳೆದುಕೊಂಡಿದ್ದು, 462 ಜಾನುವಾರುಗಳು ಸಾವಿಗೀಡಾಗಿದ್ದಾರೆ. 5.81 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೆ, ನನ್ನ ಪ್ರಕಾರ 10-12 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರವು ಮಳೆಯಿಂದ 7,647 ಕೋಟಿ ರು. ನಷ್ಟವಾಗಿದೆ ಎಂದು ಕೇಂದ್ರಕ್ಕೆ ಮನವಿ ಮಾಡಿದೆ. 1,012 ಕೋಟಿ ರು. ಪರಿಹಾರ ನೀಡುವಂತೆ ಕೇಳಿದರೂ ಕೇಂದ್ರ ಸರ್ಕಾರವು ನಯಾಪೈಸೆ ನೀಡಿಲ್ಲ ಎಂದು ಟೀಕಿಸಿದರು.

Bengaluru Flood: ಬೆಂಗಳೂರಿನ ನೆರೆಪೀಡಿತ ಪ್ರದೇಶಗಳಲ್ಲಿ ಸಿದ್ದು ಸಂಚಾರ, ಸಮೀಕ್ಷೆ

ಪರಿಹಾರಕ್ಕೆ ಒತ್ತಾಯ: ಮುಂಗಾರಿನಲ್ಲಿ ಬಿತ್ತನೆಯಾಗಬೇಕಿದ್ದ ಬೆಳೆಗಳಲ್ಲಿ ಕಾರಣಾಂತರಗಳಿಂದ ಸುಮಾರು 10-12 ಲಕ್ಷ ಪ್ರದೇಶದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ 10.62 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಇತ್ತು. ಆದರೆ, ಬಿತ್ತನೆಯಾಗಿದ್ದು 8.3 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ. ಜೋಳ 1.24 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿರುವುದು ಕೇವಲ 59 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ. ಸಿರಿಧಾನ್ಯ, ತೊಗರಿ, ರಾಗಿ ಸೇರಿದಂತೆ ಇತರೆ ಬೆಳೆಗಳು ಸಹ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಇದಕ್ಕೆ ಸರ್ಕಾರ ಯಾವುದೇ ಪರಿಹಾರ ನೀಡುವುದಿಲ್ಲ. ಬೆಳೆ ವಿಮೆ ಯೋಜನೆಯಲ್ಲಿಯೂ ರೈತರಿಗೆ ಪರಿಹಾರ ಲಭಿಸುವುದಿಲ್ಲ. ಹೀಗಾಗಿ ಬಿತ್ತನೆಯಾಗದ ಪ್ರದೇಶಗಳಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.

Follow Us:
Download App:
  • android
  • ios