Asianet Suvarna News Asianet Suvarna News

ಅರಣ್ಯ ಇಲಾಖೆಯಲ್ಲಿನ ಕಂದಾಯ ಭೂಮಿ ಡಿನೋಟಿಫೈಗೆ ಮನವಿ: ಸಚಿವ ಕೃಷ್ಣ ಬೈರೇಗೌಡ

ಗಡಿ ಗುರುತಿಸಿದ ನಂತರ ಅಂತಹ ಜಮೀನಿನಲ್ಲಿ ಒಂದು ವೇಳೆ ಕೃಷಿ ಚಟುವಟಿಕೆ ನಡೆಯುತ್ತಿದ್ದರೆ ಅರ್ಹ ಹಿಡುವಳಿದಾರರಿಗೆ ಸಾಗುವಳಿ ಚೀಟಿ ನೀಡಲು ಸಹ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ 

Request for Denotification of Revenue Land in Forest Department Says Krishna Byre Gowda grg
Author
First Published Mar 8, 2024, 6:39 AM IST

ಬೆಂಗಳೂರು(ಮಾ.08):  ಫೆ.16ರಿಂದ ರಾಜ್ಯಾದ್ಯಂತ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಅರಣ್ಯ ಗಡಿ ಗುರುತಿಸುವಿಕೆಗಾಗಿ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಒಂದು ವೇಳೆ ಕಂದಾಯ ಭೂಮಿ ತಪ್ಪಾಗಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವುದು ಖಚಿತವಾದರೆ ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಅಲ್ಲದೆ ಗಡಿ ಗುರುತಿಸಿದ ನಂತರ ಅಂತಹ ಜಮೀನಿನಲ್ಲಿ ಒಂದು ವೇಳೆ ಕೃಷಿ ಚಟುವಟಿಕೆ ನಡೆಯುತ್ತಿದ್ದರೆ ಅರ್ಹ ಹಿಡುವಳಿದಾರರಿಗೆ ಸಾಗುವಳಿ ಚೀಟಿ ನೀಡಲು ಸಹ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ವಿಚಾರದಲ್ಲಿ ದಶಕಗಳಿಂದಲೂ ಸಮಸ್ಯೆಗಳಿವೆ. ಅರಣ್ಯ ಭೂಮಿಯ ಗಡಿಯನ್ನು ಗುರುತಿಸದ ಕಾರಣ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿರುವ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್‌ಟಿಸಿ, ಪೋಡಿ, ಪೌತಿ ಖಾತೆ ಸೇರಿದಂತೆ ಯಾವ ಕಂದಾಯ ಸೇವೆಯೂ ಸಿಗುತ್ತಿಲ್ಲ. ಹೀಗಾಗಿ ಫೆ.16 ರಿಂದ ಜಂಟಿ ಸರ್ವೆ ಕೈಗೆತ್ತಿಕೊಂಡಿದ್ದು, ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರ ತೆರಿಗೆ ಸವಾರಿ: ಸಚಿವ ಕೃಷ್ಣ ಬೈರೇಗೌಡ

ಈಗಾಗಲೇ ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಹಾಗೂ ಪರವಾನಗಿ ಪಡೆದ ಭೂ ಮಾಪಕರು ಸರ್ವೇ ನಡೆಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 12,70,847 ಎಕರೆ ಭೂಮಿಯನ್ನು ಅಳತೆ ಮಾಡಿದ್ದು, 11,541 ಎಕರೆ ವಿಸ್ತೀರ್ಣದ ಭೂಮಿ ಅಳತೆ ಬಾಕಿ ಇದೆ. ಈವರೆಗಿನ ಸರ್ವೇ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 7910 ಎಕರೆ ಕಂದಾಯ ಜಮೀನು ಇದ್ದು, ಇದನ್ನು ಅರಣ್ಯ ಇಲಾಖೆ ನೋಟಿಫಿಕೇಶನ್ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಈ ಜಮೀನನ್ನು ಡಿನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಭರವಸೆ ನೀಡಿದ್ದಾರೆ.

Follow Us:
Download App:
  • android
  • ios