ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಕನಿಷ್ಠ ಮೋದಿ ಮಾದರಿಯನ್ನಾದರೂ ಕಾಂಗ್ರೆಸ್ಸಿಗರು ಅನುಸರಿಸಬೇಕು. ಇಲ್ಲದಿದ್ದರೆ ಬಿಜೆಪಿ ಜನಪ್ರಿಯತೆಗೆ ಕಾಂಗ್ರೆಸ್ಸಿಗರೇ ಪುಕ್ಕಟೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಪಾಠ ಮಾಡಿದರು. ಮೋದಿ ಹೊಗಳಿಕೆ ಯಾವ ಕಾರಣಕ್ಕಾಗಿ ಎಂದು ಅರ್ಥವಾದ ನಂತರ ಸಭಿಕರು ನಿರುಮ್ಮಳರಾದರು.

ಡೈರಿಗೆ ಹೋಗುವ ಹಾಲಿನ ಕ್ಯಾನು ವರ್ಲ್ಡ್‌ಕಪ್‌ ಮ್ಯಾಚ್‌ ಎದುರು ಕೂತಿತ್ತು. ಸಹಕಾರಿ ಕಾರ್ಯಕ್ರಮದ ಕುರ್ಚಿ ಖಾಲಿಯಾಗಿತ್ತು!

ಗೋಕುಲಾಷ್ಟಮಿಗೂ ಇಮಾಮ್‌ಸಾಬಿಗೂ ಏನು ಸಂಬಂಧವೋ ಸಹಕಾರಿ ಸಪ್ತಾಹದ ಕಾರ್ಯಕ್ರಮಕ್ಕೂ ವರ್ಲ್ಡ್‌ಕಪ್‌ ಕ್ರಿಕೆಟ್‌ಗೂ ಅದೇ ನಂಟು. ಆದರೆ, ಕೆಲವೊಮ್ಮೆ ನಂಟು, ಗಂಟಿನ ಲೆಕ್ಕಾಚಾರ ಬುಡಮೇಲಾಗಿ ಸಂಕಟಕ್ಕೆ ಕಾರಣವಾಗುತ್ತದೆ.

ಕಳೆದ ಭಾನುವಾರ ಆಗಿದ್ದೂ ಇದೇ. ಬೆಂಗಳೂರಲ್ಲಿ ರಾಜ್ಯಮಟ್ಟದ ಸಹಕಾರಿ ಸಪ್ತಾಹದ ಕಾರ್ಯಕ್ರಮವಿತ್ತು. ಅವತ್ತೇ ಕ್ರಿಕೆಟ್‌ ವರ್ಲ್ಡ್‌ಕಪ್‌ ಫೈನಲ್‌, ಭಾರತ-ಆಸ್ಟ್ರೇಲಿಯಾ ಮ್ಯಾಚು. ಕಾರ್ಯಕ್ರಮಕ್ಕೆ ಬರಬೇಕಿದ್ದ ಹಾಲು ಉತ್ಪಾದಕ ರೈತರು ಅವತ್ತು ಟಿವಿ, ಮೊಬೈಲ್‌ ನೋಡುತ್ತಾ ಕುಳಿತಿದ್ದರು. ಆಯೋಜಕರು ಜಪ್ಪಯ್ಯ ಎಂದರೂ ಬಸ್ಸು ಹತ್ತಿ ಸಪ್ತಾಹಕ್ಕೆ ಬಂದಿರಲಿಲ್ಲ. ಹಿಂಗಾಗಿ ಆಯೋಜನೆ ಫೇಲ್‌ ಆಯ್ತು. ಕಾರ್ಯಕ್ರಮಕ್ಕೆ ಪ್ರೇಕ್ಷಕರ ಬರ ಕಾಡಿತು.

ರಿಪೋರ್ಟರ್ಸ್ ಡೈರಿ: ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮಿಕ್ಸೆಡ್‌ ಡಬಲ್ಸ್‌!

ಸಹಕಾರಿ ಧುರೀಣರೂ ಆಗಿರುವ ಸಚಿವ ಕೆ.ಎನ್‌. ರಾಜಣ್ಣ, ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರೆಲ್ಲ ಭರ್ಜರಿ ಭಾಷಣದ ತಯಾರಿ ಮಾಡಿಕೊಂಡು ಬಂದಿದ್ದರು. ಕಾರ್ಯಕ್ರಮದಲ್ಲಿ ವ್ಯವಸ್ಥೆಗಳು ಉತ್ತಮವಾಗಿದ್ದವು. ಹಾಲು ಒಕ್ಕೂಟ ಬಲಪಡಿಸುವುದು ಹಾಗೂ ಸಿಗಬೇಕಾದ ಸೌಲಭ್ಯದ ಬಗ್ಗೆ ಮಾತನಾಡುವವರಿದ್ದರು. ಊಟೋಪಚಾರ, ಪ್ರದರ್ಶನ ಮಳಿಗೆ ಇತ್ತು.

ಆದರೆ, ಕೇಳಲು, ನೋಡಲು ಜನ ಬೇಕಲ್ಲ!?

ಭಾಷಣಕ್ಕೆ ಪೋಡಿಯಂಗೆ ಬಂದವರು ಬೇಜಾರಾದರು. ಜನ ಇಲ್ಲದೆ ಖಾಲಿ ಕುರ್ಚಿಗಳನ್ನು ಕಂಡು ಸಿಡಿಮಿಡಿಯಾದರು. ಕ್ರಿಕೆಟ್‌ ವರ್ಲ್ಡ್‌ಕಪ್ಪು ನಮ್ಮ ತಟ್ಟೆ ತುಂಬಿಸುತ್ತಾ ಎಂದು ಪ್ರಶ್ನೆ ಮಾಡಿದ್ರು.

ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಅಧಿಕಾರಿಗಳನ್ನು ತರಾಟೆಗೆ ತಗೊಂಡ್ರು. ಮಾನ ಮರ್ಯಾದಿ ಬೇಡವೇನ್ರಿ, ಸುತ್ತಮುತ್ತ ಜನರನ್ನ ಕರ್ಕೊಂಡು ಬರೋಕಾಗ್‌ದಿದ್ದ ಮೇಲೆ ನೀವೇನ್‌ ಫಂಕ್ಷನ್‌ ಮಾಡ್ತೀರಿ ಎಂದು ಝಾಡಿಸಿ ತೆರಳಿದರು. ಅವರು ಆ ಕಡೆ ಹೋಗುತ್ತಿದ್ದಂತೆ ‘ ಭಾರತ ಟಾಸ್‌ ಸೋಲ್ತು, ಈ ಸಲ ಕಪ್ಪು ನಮ್ದಲ್ಲ’ ಅಂತ ಅಧಿಕಾರಿಗಳು ಬೇಜಾರಾಗಿದ್ರು..

‘ಮೋದಿ ಮಾದರಿ’ ಪ್ರಚಾರ!

ಅದು ಪಂಚಾಯತ್‌ರಾಜ್‌ ಜನಪ್ರತಿನಿಧಿಗಳ ಜಿಲ್ಲಾ ಮಟ್ಟದ ಸಮಾವೇಶ. ಮಂಗಳೂರು ನಗರದ ಪುರಭವನ ಕಿಕ್ಕಿರಿದು ತುಂಬಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರ್ಕಾರದ ಸಾಧನೆಯನ್ನು ಪಟ್ಟಿ ಮಾಡುತ್ತಿದ್ದರು. ಉದ್ಘಾಟನಾ ಭಾಷಣ ಮುಕ್ಕಾಲಂಶ ತಲಪಿದಾಗ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಲು ಆರಂಭಿಸಿದರು. ಜನರಿಂದ ಚಪ್ಪಾಳೆ ಬೀಳತೊಡಗಿತ್ತು.

ಹಠಾತ್ತನೇ ಪ್ರಿಯಾಂಕ ಅವರಿಗೆ ಅದು ಏನಾಯಿತೋ ಗೊತ್ತಿಲ್ಲ. ಏಕಾಏಕಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಲು ಶುರು ಮಾಡಿಬಿಟ್ಟರು.

ಅಲ್ಲಿವರೆಗೆ ಚಪ್ಪಾಳೆ, ಜೈಕಾರದ ಜೋಶ್‌ನಲ್ಲಿದ್ದ ಪಂಚಾಯತ್‌ರಾಜ್‌ ಜನಪ್ರತಿನಿಧಿಗಳು ಸಚಿವರ ಮೋದಿ ಗುಣಗಾನ ಕೇಳಿ ಅವಕ್ಕಾದರು. ಒಂದು ಕ್ಷಣ ಸಭೆ ಗಪ್‌ಚುಪ್‌. ಸಚಿವರು ಏನು ಹೇಳುತ್ತಿದ್ದಾರೆ ಎಂದು ಕಿವಿ ನೆಟ್ಟಗೆ ಮಾಡಿ ಕೇಳತೊಡಗಿದರು.

ಅಷ್ಟಕ್ಕೂ ಸಚಿವರು ಹೇಳಿದ್ದಿಷ್ಟು, ಪ್ರಚಾರ ಪಡೆಯುವುದರಲ್ಲಿ ನಾವು (ಕಾಂಗ್ರೆಸ್ಸಿಗರು) ಮೋದಿಯಿಂದ ಕಲಿಯಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸುವ ಬಹುತೇಕ ಯೋಜನೆಗಳಿಗೆ ರಾಜ್ಯದ ಸಹಭಾಗಿತ್ವ ಇದೆ. ಇದನ್ನು ಬಹಳ ಅಚ್ಚುಕಟ್ಟಾಗಿ ಯಾರಿಗೂ ಸಂಶಯ ಬಾರದಂತೆ ಮೋದಿ ಅವರು ತಮ್ಮದೇ(ಕೇಂದ್ರ) ಯೋಜನೆ ಎಂದು ಪ್ರಚಾರ ಗಟ್ಟಿಸಿಕೊಳ್ಳುವಲ್ಲಿ ನಿಸ್ಸೀಮ. ಶೇಕಡಾ ನೂರರಷ್ಟು ಕೇಂದ್ರದ್ದೇ ಯೋಜನೆ ಎಂದು ಮೋದಿ ಜನರಲ್ಲಿ ನಂಬಿಕೆ ಮೂಡಿಸುವಂತೆ ಪ್ರಚಾರ ಮಾಡುತ್ತಾರೆ. ಪತ್ರಿಕೆ, ಟಿ.ವಿ.ಗಳಲ್ಲೂ ನಿತ್ಯವೂ ಇದನ್ನೇ ಕಾಣುತ್ತೇವೆ. ಇದುವೇ ನಮಗೆ ತಿರುಗು ಬಾಣವಾಗುತ್ತಿದೆ ಎನ್ನುತ್ತಾ ರಾಜ್ಯ ಸರ್ಕಾರ ಸಹಭಾಗಿತ್ವದ ಯೋಜನೆಗಳ ಪಟ್ಟಿ ಮುಂದಿಟ್ಟರು.

ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಕನಿಷ್ಠ ಮೋದಿ ಮಾದರಿಯನ್ನಾದರೂ ಕಾಂಗ್ರೆಸ್ಸಿಗರು ಅನುಸರಿಸಬೇಕು. ಇಲ್ಲದಿದ್ದರೆ ಬಿಜೆಪಿ ಜನಪ್ರಿಯತೆಗೆ ಕಾಂಗ್ರೆಸ್ಸಿಗರೇ ಪುಕ್ಕಟೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಪಾಠ ಮಾಡಿದರು.

ಮೋದಿ ಹೊಗಳಿಕೆ ಯಾವ ಕಾರಣಕ್ಕಾಗಿ ಎಂದು ಅರ್ಥವಾದ ನಂತರ ಸಭಿಕರು ನಿರುಮ್ಮಳರಾದರು.

ಖಿನ್ನತೆಗೆ ಖಿನ್ನತೆಯೇ ಮದ್ದು!

ನಮ್ಮ ಬಿಬಿಎಂಪಿ ಅಧಿಕಾರಿಗಳಿಗೆ ಖಿನ್ನತೆ ಕಾಡುತ್ತಿದೆಯಂತೆ. ಅದೂ ಕೆಲಸದ ಒತ್ತಡದಿಂದ ಖಿನ್ನತೆ ಕಾಡುತ್ತಿದೆಯಂತೆ...

ಹೀಗಂತ ಬಿಬಿಎಂಪಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ವಾಟ್ಸಾಪ್ ಗ್ರೂಪ್‌ಗಳಲ್ಲಿ ಸಿಕ್ಕಾಪಟ್ಟೆ ಮೆಸೇಜ್ ಗಳು ಹರಿದಾಡುತ್ತಿವೆ.

ತಮ್ಮ ಖಿನ್ನತೆಗೆ ಕಾರಣವೇನು? ಯಾರಿಂದ ಬರುತ್ತಿದೆ ಖಿನ್ನತೆ? ತಮ್ಮ ಮೇಲೆ ಎಂತೆಂತಹ ಒತ್ತಡವಿದೆ ಎಂದು ಆ ಮೇಸೇಜ್ ಓದುವವರ ಕಣ್ಣು ಗುಡ್ಡೆ ಕಿತ್ತು ರಕ್ತ ಬರಬೇಕು. ಅಷ್ಟು ಪ್ರಬಲವಾಗಿ ತಮ್ಮ ದುಃಖವನ್ನು ತೋಡಿಕೊಳ್ಳುತ್ತಿದ್ದಾರೆ.

ಮೇಲಾಧಿಕಾರಿಗಳಿಂದ ಹಿಂಸೆ, ಕಿರುಕುಳ, ನೋವಿನಿಂದ ಸರಿಯಾದ ಸಮಯಕ್ಕೆ ಮನೆಗೆ ಹೋಗಲು ಸಾಧ್ಯವಾಗದೇ ನಮಗೆ ಖಿನ್ನತೆ ಬಂದಿದೆ. ಅರ್ಧ ತಾಸಿಗೆ ಒಂದೊಂದು ಕೆಲಸ ಕೊಡುತ್ತಾರೆ. ಅದು ಅರ್ಜೆಂಟ್‌, ಇದು ಅರ್ಜೆಂಟ್‌ ಅಂತಾರೆ. ತೆರಿಗೆ ವಸೂಲಿ, ಚುನಾವಣೆ ಕೆಲಸ, ಆಸ್ತಿ ಸರ್ವೆ, ಇ ಆಸ್ತಿ, ಬೆಸ್ಕಾಂ ಟ್ಯಾಕ್ಸ್‌ ಪರಿಶೀಲನೆ ಹೀಗೆ ಹತ್ತಾರು ಕೆಲಸ ಮಾಡಬೇಕಿದೆ. ಅನಾರೋಗ್ಯ ಪೀಡಿತ ನೌಕರರಿದ್ದಾರೆ.

ಹೀಗೆ ಮೇಸೇಜ್ ಮಾಡಿ ಮಾಡಿ ಹಲಬುತ್ತಿದ್ದಾರೆ ಬಿಬಿಎಂಪಿಯ ಕೆಲ ನೌಕರರು.

ರಿಪೋರ್ಟರ್ಸ್ ಡೈರಿ: ಕಳ್ಳ ಸುಳ್ಳ ಹೇಳಿಕೆಯಿಂದ ಈಶ್ವರಪ್ಪ ಎಸ್ಕೇಪ್!

ಬಿಬಿಎಂಪಿ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಯ ಈ ಅಳಲನ್ನು ಕೇಳಿದ ಹಿರಿಯ ರಾಜಕಾರಣಿಯೊಬ್ಬರು ಮಮ್ಮಲ ಕರಗಿ ಒಂದು ಸಲಹೆ ಕೊಟ್ಟಿದ್ದಾರಂತೆ...

ಅದು- ಪಾಪ, ಖಿನ್ನತೆಯಿಂದ ಬಳಲುತ್ತಾ ಇವರು ಕೆಲಸ ಮಾಡುವುದು ಬೇಡ. ರಾಜೀನಾಮೆ ನೀಡಲಿ. ಹೇಗೂ ದೇಶದಲ್ಲಿ ಉದ್ಯೋಗ ಸಿಗದೇ ಖಿನ್ನತೆಗೆ ಒಳಗಾಗಿರುವವರ ಸಂಖ್ಯೆ ದೊಡ್ಡದಾಗಿದೆ. ಅವರಿಗೆ ಉದ್ಯೋಗ ಕೊಟ್ಟು ಅವರಿಗೂ ಉದ್ಯೋಗವಿದ್ದಾಗ ಬರುವ ಖಿನ್ನತೆ ಬರುತ್ತದೆಯೋ ನೋಡೋಣ...

ಅಬ್ಬಾ ಎಂತಹ ಪರ್ಫೆಕ್ಟ್ ಸಲಹೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅಂತಾರಲ್ಲ ಹಂಗೇ ಖಿನ್ನತೆಯನ್ನು ಖಿನ್ನತೆಯಿಂದಲೇ ಕಿತ್ತು ಹಾಕಬೇಕು!

ಮಯೂರ್‌

ಆತ್ಮಭೂಷಣ್‌

ವಿಶ್ವನಾಥ ಮಲೇಬೆನ್ನೂರು