ಅರಣ್ಯಾಧಿಕಾರಿಗಳ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ: ರಿಷಬ್ ಶೆಟ್ಟಿ
ಕಾಡಿನ ಸಮಸ್ಯೆ, ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯಾಧಿಕಾರಿಗಳ ಕಷ್ಟ-ಸುಖಗಳ ಕುರಿತು ಪ್ರಕೃತಿ ನಡುವೆ ಅರಣ್ಯಾಧಿಕಾರಿಗಳೊಂದಿಗೆ ನಡೆಯುತ್ತಿರುವ ಸಂವಾದ ತಮಗೆ ಹೆಚ್ಚು ಸಂತೋಷ ತಂದುಕೊಟ್ಟಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ಅನಂತ ನಾಡಿಗ್
ತರೀಕೆರೆ (ಮಾ.30): ಕಾಡಿನ ಸಮಸ್ಯೆ, ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯಾಧಿಕಾರಿಗಳ ಕಷ್ಟ-ಸುಖಗಳ ಕುರಿತು ಪ್ರಕೃತಿ ನಡುವೆ ಅರಣ್ಯಾಧಿಕಾರಿಗಳೊಂದಿಗೆ ನಡೆಯುತ್ತಿರುವ ಸಂವಾದ ತಮಗೆ ಹೆಚ್ಚು ಸಂತೋಷ ತಂದುಕೊಟ್ಟಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಹಮ್ಮಿಕೊಂಡಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ, ‘ಕಾಂತಾರ’ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಬುಧವಾರ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಹುಲಿ ಸಂರಕ್ಷಿತ ದಟ್ಟಾರಣ್ಯ ಪ್ರದೇಶಗಳಾದ ಭದ್ರಾ ಅಭಯಾರಣ್ಯ, ಲಕ್ಕವಳ್ಳಿ ಅರಣ್ಯ, ಹೆಬ್ಬೆ ಅರಣ್ಯ, ಮುತ್ತೋಡಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 40 ಕಿ.ಮಿ.ಪ್ರವಾಸ ಮಾಡಿದರು.
ಬಳಿಕ, ಮುತ್ತೋಡಿ ಭದ್ರಾ ವನ್ಯಜೀವಿ ವಲಯ ಕಚೇರಿ ಬಳಿ ಅರಣ್ಯಾಧಿಕಾರಿಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿ, ಹಗಲು-ರಾತ್ರಿ ಅರಣ್ಯವನ್ನು ಸಂರಕ್ಷಿಸುವ ಅಧಿಕಾರಿಗಳು ಚೆನ್ನಾಗಿದ್ದರೆ ಕಾಡು ಕೂಡ ಸಮೃದ್ಧವಾಗಿರುತ್ತದೆ. ನೀವು ಕಾಡು, ಭೂಮಿಯ ರಕ್ಷಣೆ ಮಾಡುತ್ತೀರಿ. ಕಾಡು ಮತ್ತು ಮನುಷ್ಯರ ನಡುವೆ ಮೊದಲಿನಿಂದಲೂ ಸಂಘರ್ಷ ನಡೆಯುತ್ತಲೇ ಇದೆ. ಆದರೆ, ಕಾಡಿನ ಕುರಿತಾಗಿ ಹಲವು ಸಿನಿಮಾಗಳು ಬಂದ ಮೇಲೆ ಜನರಲ್ಲಿ ಪ್ರಕೃತಿ ಆರಾಧನೆ ಹೆಚ್ಚಾಗಿದೆ. ಡಾ.ರಾಜಕುಮಾರ್ ಅವರು ಅಭಿನಯಿಸಿದ ‘ಗಂಧದಗುಡಿ’ ನೋಡಿದ ಮೇಲೆ ಅರಣ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ಆಸೆ ಎಲ್ಲರಲ್ಲೂ ಹೆಚ್ಚಾಗಿದೆ ಎಂದರು.
ವನ್ಯಸಂಪತ್ತು ಅರಣ್ಯ ಇಲಾಖೆಯದ್ದೆಂಬ ಮನೋಭಾವ ಬಿಡಿ: ರಿಷಬ್ ಶೆಟ್ಟಿ
ಈ ಕಾಡು ಮತ್ತು ವನ್ಯಪ್ರಾಣಿಗಳು ನಮ್ಮದು ಎಂಬ ಮನೋಭಾವನೆ ಎಲ್ಲರಲ್ಲೂ ಬರಬೇಕು. ಅರಣ್ಯಾಧಿಕಾರಿಗಳಾದ ನೀವು ಈ ಸಂವಾದದಲ್ಲಿ ಮನಸ್ಸು ಬಿಚ್ಚಿ ಮಾತನಾಡಬೇಕು. ಅರಣ್ಯಾಧಿಕಾರಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
‘ಕಾಡುಗಳಲ್ಲಿ ಬೆಂಕಿಯಿಂದಲೇ ಹೆಚ್ಚು ಅನಾಹುತಗಳು ಸಂಭವಿಸುತ್ತವೆ. ಬೆಂಕಿಯ ಅನಾಹುತದಿಂದ ಅಮೂಲ್ಯ ಮರಗಳು ನಾಶವಾಗುತ್ತವೆ. ಕಾಡಿನ ಸಂರಕ್ಷಣೆ ಕುರಿತು ಮತ್ತು ಬೆಂಕಿಯ ಅನಾಹುತದ ಬಗ್ಗೆ ಹೆಚ್ಚು ಹೆಚ್ಚು ಸಿನಿಮಾಗಳನ್ನು ತೆಗೆಯಬೇಕು. ಸಿನಿಮಾದವರ ಮಾತನ್ನು ಎಲ್ಲರೂ ಕೇಳುತ್ತಾರೆ’ ಎಂಬ ಅರಣ್ಯಾಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ, ನೀವು ಹಗಲು-ರಾತ್ರಿ ಎನ್ನದೆ ಅರಣ್ಯವನ್ನು ಕಾಪಾಡುತ್ತೀರಿ. ಅರಣ್ಯ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚು ಮಾಡಲು ಸರ್ಕಾರಕ್ಕೆ ವರದಿ ನೀಡಲಾಗುವುದು. ಸಿಬ್ಬಂದಿ ಹೆಚ್ಚು ಇದ್ದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಅರಣ್ಯವನ್ನು ರಕ್ಷಿಸಬಹುದು. ಅರಣ್ಯವನ್ನು ಬೆಳೆಸಬಹುದು ಎಂದು ಭರವಸೆ ನೀಡಿದರು.
ಅರಿವು ಮೂಡಿಸಲು ಕ್ರಮ: ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮಾತನಾಡಿ, ಖ್ಯಾತ ಚಲನಚಿತ್ರ ನಟ, ನಿರ್ಮಾಪಕರಾದ ರಿಷಬ್ ಶೆಟ್ಟಿಅವರು ‘ಕಾಂತಾರ’ ಚಲನಚಿತ್ರದಲ್ಲಿ ಅರಣ್ಯವನ್ನು ದೇವರೆಂದು ತೋರಿಸಿದ್ದಾರೆ. ಅರಣ್ಯಕ್ಕೆ ಬೆಂಕಿ ಹಾಕಬಾರದು ಎಂದು ಸಿನಿಮಾ ಮತ್ತು ಮಾಧ್ಯಮದ ಮೂಲಕ ಹೆಚ್ಚು ಪ್ರಚಾರ ಮಾಡಲಾಗುವುದು. ಅರಣ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು. ಹೆಬ್ಬೆ ವಲಯ ಆರ್‌ಎಫ್‌ಒ ದಯಾನಂದ್ ಮಾತನಾಡಿ, ನಮಗೆ ಹೆಚ್ಚು ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸಬೇಕು ಎಂದು ರವಿ ಹೆಗಡೆ ಅವರಲ್ಲಿ ಮನವಿ ಮಾಡಿದರು.
ಅರಣ್ಯ ನೌಕರರೆಂದರೆ ಯಾರೂ ಹೆಣ್ಣು ಕೊಡುವುದಿಲ್ಲ. ನಮಗೆ ಹೆಚ್ಚು ಭದ್ರತೆ ಕೊಡಬೇಕು. ನೌಕರರಿಗೆ ಸಂಬಳ ಸರಿಯಾಗಿ ಸಿಗುತ್ತಿಲ್ಲ. ಸಂಬಳ, ಸಾರಿಗೆಗಳನ್ನು ನಿಗದಿತ ವೇಳೆಗೆ ಕೊಡಬೇಕು. ಅರಣ್ಯ ನೌಕರರಿಗೆ ಗುರುತು ಪತ್ರಗಳಿಲ್ಲ. ಹೀಗಾಗಿ, ಆಸ್ಪತ್ರೆಗೆ ಚಿಕಿತ್ಸೆಗೆ ಹೋದರೆ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ, ಸರ್ಕಾರ ನಮಗೆ ಅರಣ್ಯ ನೌಕರರೆಂದು ಅಧಿಕೃತವಾದ ಗುರುತು ಪತ್ರ ಕೊಡಬೇಕು. ಅರಣ್ಯ ನೌಕರರನ್ನು ಕಾಯಂಗೊಳಿಸಬೇಕು. ಪಶು ವೈದ್ಯಾಧಿಕಾರಿಗಳ ಸಮಸ್ಯೆ ಇದೆ ಎಂಬುದು ಸೇರಿದಂತೆ ತಮ್ಮ ಹಲವು ಸಮಸ್ಯೆಗಳ ಬಗ್ಗೆ ಅರಣ್ಯಾಧಿಕಾರಿಗಳು ಮನಬಿಚ್ಚಿ ಮಾತನಾಡಿದರು. ಅರಣ್ಯ ನೌಕರರ ಹಲವಾರು ಪ್ರಶ್ನೆಗಳಿಗೆ ರಿಷಬ್ ಶೆಟ್ಟಿ, ರವಿ ಹೆಗಡೆ, ‘ಕನ್ನಡಪ್ರಭ’ದ ಸಹಾಯಕ ಸಂಪಾದಕ ವಿನೋದ್‌ಕುಮಾರ್ ನಾಯಕ್ ಅವರು ಉತ್ತರಿಸಿ, ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು.
ಎಲ್ಲರಲ್ಲೂ‘ನಮ್ಮ ಕಾಡು’ಎಂಬ ಭಾವನೆ ಮೂಡಲಿ: ರಿಷಬ್ ಶೆಟ್ಟಿ
ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಡಿಎಫ್‌ಒ ಪ್ರಭಾಕರನ್, ಅರಣ್ಯಾಧಿಕಾರಿಗಳಾದ ಹೆಬ್ಬೆ ವಲಯ ಆರ್‌ಎಫ್‌ಒ ಸಿ.ಎ.ದಯಾನಂದ್, ಮುತ್ತೋಡಿ ವಲಯ ಆರ್‌ಎಫ್‌ಒ ಕೆ. ಮಂಜುನಾಥ್, ಲಕ್ಕವಳ್ಳಿ ವಲಯ ಆರ್‌ಎಫ್‌ಒ ಆರ್.ಟಿ.ಮಂಜುನಾಥ್, ಯಶಸ್ ಒಡೆಯರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಸಿಬ್ಬಂದಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳಾದ ಲಕ್ಕವಳ್ಳಿ ಅರಣ್ಯ, ಹೆಬ್ಬೆ ಅರಣ್ಯ ಪ್ರದೇಶ, ತಣಿಗೇಬೈಲು ಅರಣ್ಯ ಪ್ರದೇಶ ಮತ್ತು ಮುತ್ತೋಡಿ ಅರಣ್ಯ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ಸಾಯಂಕಾಲ 4ಗಂಟೆವರೆಗೆ ಸುಮಾರು 40 ಕಿ.ಮೀ.ಪ್ರದೇಶದಲ್ಲಿ ರಿಷಬ್ ಶೆಟ್ಟಿಮತ್ತು ರವಿ ಹೆಗಡೆ ಅವರು ಎಲ್ಲರೊಡನೆ ಬೆರೆತು ಸಂಚರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.