ಎಲ್ಲರಲ್ಲೂ‘ನಮ್ಮ ಕಾಡು’ಎಂಬ ಭಾವನೆ ಮೂಡಲಿ: ರಿಷಬ್ ಶೆಟ್ಟಿ
ವನ್ಯಜೀವಿಗಳು ನಾಡಿಗೆ ಬಂದಾಗ ನಿಮ್ಮ ಆನೆ ನಮ್ಮ ಜಮೀನಿಗೆ ಬಂದಿದೆ ಎನ್ನುವ ಬದಲು ಪ್ರತಿಯೊಬ್ಬರಲ್ಲೂ ನಮ್ಮ ಕಾಡು, ನಮ್ಮ ಆನೆ, ನಮ್ಮ ಹುಲಿ ಎನ್ನುವ ಭಾವನೆ ಬಂದಾಗ ಮಾತ್ರ ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಯಲು ಸಾಧ್ಯ ಎಂದು ರಿಷಬ್ ಶೆಟ್ಟಿಅಭಿಪ್ರಾಯ ವ್ಯಕ್ತಪಡಿಸಿದರು.
ದೇವರಾಜು ಕಪ್ಪಸೋಗೆ
ಚಾಮರಾಜನಗರ (ಫೆ.16): ವನ್ಯಜೀವಿಗಳು ನಾಡಿಗೆ ಬಂದಾಗ ನಿಮ್ಮ ಆನೆ ನಮ್ಮ ಜಮೀನಿಗೆ ಬಂದಿದೆ ಎನ್ನುವ ಬದಲು ಪ್ರತಿಯೊಬ್ಬರಲ್ಲೂ ನಮ್ಮ ಕಾಡು, ನಮ್ಮ ಆನೆ, ನಮ್ಮ ಹುಲಿ ಎನ್ನುವ ಭಾವನೆ ಬಂದಾಗ ಮಾತ್ರ ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಯಲು ಸಾಧ್ಯ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವನ್ಯಜೀವಿ ಅಭಿಯಾನದ ರಾಯಭಾರಿ ಹಾಗೂ ನಟ ರಿಷಬ್‌ಶೆಟ್ಟಿಅಭಿಪ್ರಾಯ ವ್ಯಕ್ತಪಡಿಸಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವನ್ಯಜೀವಿ ಅಭಿಯಾನದ ಅಂಗವಾಗಿ ಬುಧವಾರ ಬಿಳಿಗಿರಿರಂಗನಾಥಸ್ವಾಮಿ ವನ್ಯಧಾಮದ ಸೀಮೆಟ್ಟಿಕಳ್ಳಬೇಟೆ ತಡೆ ಶಿಬಿರ ದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವರ್ಷವಿಡೀ ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ವನ್ಯಜೀವಿಗಳು ನಾಶ ಮಾಡಿದಾಗ ಪ್ರತಿಯೊಬ್ಬರಿಗೂ ಸಿಟ್ಟು ಬರುವುದು ಸಾಮಾನ್ಯ. ರೈತರಿಗೆ ನಷ್ಟಭರಿಸುವ ನಿಟ್ಟಿನಲ್ಲಿ ಸರ್ಕಾರ ವೈಜ್ಞಾನಿಕ ಪರಿಹಾರ ನೀಡಬೇಕು ಎಂದರಲ್ಲದೆ, ಸಾರ್ವಜನಿಕರು ಸಹ ವನ್ಯ ಸಂಪತ್ತು ನಮಗೂ ಸೇರಿದ್ದು ಎಂಬ ಪ್ರಜ್ಞೆ ಬೆಳೆಸಿಕೊಳ್ಳಬೇಕು.
ಮಾನವ, ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ಅಗತ್ಯ: ರಿಷಬ್ ಶೆಟ್ಟಿ
ಈ ನಿಟ್ಟಿನಲ್ಲಿ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಜನರಲ್ಲಿರುವ ಮನೋಭಾವನೆ ಬದಲಾಗಬೇಕಿದೆ ಎಂದು ಸಲಹೆ ನೀಡಿದರು. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವನ್ಯಜೀವಿ ಅಭಿಯಾನದ ಮೂಲಕ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ವೇದಿಕೆ ನಿರ್ಮಾಣ ಮಾಡಿಕೊಟ್ಟಿದೆ. ಅಭಿಯಾನ ದಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಮುಖ್ಯಮಂತ್ರಿ ಪದಕ ನೀಡಲಾಗುತ್ತದೆ. ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳ ವೇತನ ಹೆಚ್ಚಳವಾಗಿದೆ. ಇದೇ ರೀತಿ ಮುಂದೆ ಮತ್ತಷ್ಟುಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಅತ್ಯಾಧುನಿಕ ಉಪಕರಣ ಬೇಕು: ಕಾಡಿನೊಳಗೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಾಣಿಗಳಿಂದ ಬಚಾವಾಗಲು ಅತ್ಯಾಧುನಿಕ ಉಪಕರಣ ಬೇಕು ಎಂದು ಸಿಬ್ಬಂದಿಗಳು ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ನಟ ರಿಷಬ್ ಶೆಟ್ಟಿ, ಅತ್ಯಾಧುನಿಕ ಉಪಕರಣ ಕೊಡಿಸುವ ನಿಟ್ಟಿನಲ್ಲಿ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಅರಣ್ಯ ಪಬ್ಲಿಕ್ ಶಾಲೆ ತೆರೆಯಿರಿ: ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತ ಅರಣ್ಯ ಮತ್ತು ಎರಡು ವನ್ಯಧಾಮಗಳಿದ್ದು, ಶೇ.50ರಷ್ಟುಅರಣ್ಯಇದೆ.
ಸಿಬ್ಬಂದಿ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕೊಡಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ಪಬ್ಲಿಕ್ ಶಾಲೆ ಮಾದರಿಯಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಅರಣ್ಯ ಪಬ್ಲಿಕ್ ಶಾಲೆಯನ್ನು ಚಾಮರಾಜನಗರ, ಬೆಳೆಗಾವಿ, ಶಿವಮೊಗ್ಗ, ಧಾರವಾಡ ಮುಂತಾದ ಕಡೆ ತೆರೆದರೆ ಅನುಕೂಲವಾಗುತ್ತದೆ ಎಂದು ಸಿಬ್ಬಂದಿ ಮನವರಿಕೆ ಮಾಡಿಕೊಟ್ಟರು. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಾಯಕ ಸಂಪಾದಕ ವಿನೋದ್‌ಕುಮಾರ್ ಬಿ.ನಾಯಕ್, ವಾಸವಿ ಹೆಲ್ತ್ ಕೇರ್ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್. ಪ್ರದೀಪ್ ಶೆಟ್ಟಿ, ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿನೋದ್‌ಗೌಡ, ಲೋಕೇಶ್ ಮೂರ್ತಿ ಇದ್ದರು.
ಅರಣ್ಯ ಸಿಬ್ಬಂದಿ ಬೇಡಿಕೆಗಳಿವು..
1. ದಿನಗೂಲಿ ನೌಕರರನ್ನು ಕಾಯಂ ಮಾಡಬೇಕು.
2. ಅರಣ್ಯಸಿಬ್ಬಂದಿ ನೇಮಕಾತಿಯಲ್ಲಿ ಹಾಲಿ ಸಿಬ್ಬಂದಿಗೆ ಶೇ. 75ರಷ್ಟು ಬಡ್ತಿ ನೀಡಬೇಕು
3. ವನ್ಯಧಾಮದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವರ್ಗಾವಣೆಯಲ್ಲಿ ಆದ್ಯತೆ ನೀಡಬೇಕು
4. ವನ್ಯಧಾಮದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡಬೇಕು
5. ವನ್ಯಧಾಮದಿಂದ ಬೇರೆ ವೃತ್ತಕ್ಕೆ ವರ್ಗಾವಣೆಯಾದಲ್ಲಿ ಸೇವಾ ಹಿರಿತನ ಕಡಿತಗೊಳಿಸಬಾರದು
6. ಕಳ್ಳಬೇಟೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಆಹಾರ ಭತ್ಯೆ ಹೆಚ್ಚಳ ಮಾಡಬೇಕು.
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರ ಮಾರ್ಗದರ್ಶನದಲ್ಲಿ ಕಾಡಂಚಿನ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸಮಸ್ಯೆ ಬಗ್ಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿದ್ದೇವೆ. ಅಭಿಯಾನದ ಬಳಿಕ ಮುಖ್ಯಮಂತ್ರಿಗಳಿಗೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು.
-ರಿಷಬ್ ಶೆಟ್ಟಿ, ನಟ ಹಾಗೂ ವನ್ಯಜೀವಿ ಅಭಿಯಾನದ ರಾಯಭಾರಿ.
ಅರಣ್ಯ, ವನ್ಯಜೀವಿ ಉಳಿದರೆ ಮಾತ್ರ ಮನುಕುಲ ಉಳಿವು: ರಿಷಬ್ ಶೆಟ್ಟಿ
ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯದ ವೇಳೆ ಮೃತಪಟ್ಟರೆ 50 ಲಕ್ಷ ರು. ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ನಮ್ಮ ಜೊತೆಗೆ ನಮ್ಮಂತೆಯೇ ಕರ್ತವ್ಯ ನಿರ್ವ ಹಿಸುವ ದಿನಗೂಲಿ ನೌಕರರು ಸತ್ತರೆ 15 ಲಕ್ಷ ರು. ಮಾತ್ರ ಪರಿಹಾರ ನೀಡಲಾಗುತ್ತದೆ. ಇಂತಹ ತಾರತಮ್ಯ ಸರಿಯಲ್ಲ. ಅವರನ್ನೂ ನಮ್ಮಂತೆ ಕಾಣಬೇಕಿದೆ.
-ಡಿ.ಕೆ.ಮಧು, ಅರಣ್ಯ ರಕ್ಷಕ, ಬಿಆರ್‌ಟಿ