Asianet Suvarna News Asianet Suvarna News

ಡ್ರಗ್ಸ್‌ ಜಾಲದ ಬಗ್ಗೆ ಮಾಹಿತಿಗಳಿದ್ದರೆ ಪೊಲೀಸರಿಗೆ ನೀಡಿ, ಮುಲಾಜಿಲ್ಲದೇ ಕ್ರಮ: ಕಟೀಲ್

ಸರ್ಕಾರದ ಜೊತೆಗೆ ಬಿಜೆಪಿ ಕಾರ್ಯಕರ್ತರೂ ಕೂಡ ಗ್ರಾಮ, ತಾಲೂಕು, ಜಿಲ್ಲೆಗಳಾದ್ಯಂತ ಡ್ರಗ್ಸ್‌ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕೆ ಜನರು ಕೈಜೋಡಿಸಬೇಕಾಗಿದೆ. ನಿಮ್ಮಲ್ಲಿ ಡ್ರಗ್ಸ್‌ ಜಾಲದ ಬಗ್ಗೆ ಏನೇ ಮಾಹಿತಿಗಳಿದ್ದರೂ ಅದನ್ನು ಸಮೀಪದ ಠಾಣೆಗೆ ನೀಡಿ. ನಿಮ್ಮ ಹೆಸರು, ವಿಳಾಸ ಗೌಪ್ಯವಾಗಿ ಇಡಲಾಗುವುದು. 

Report Drug Use Information with nearest Police station says Nalin Kumar Kateel
Author
Bengaluru, First Published Sep 13, 2020, 9:46 AM IST

ಬೆಂಗಳೂರು (ಸೆ. 13): ಮನಸ್ಸು ಶುದ್ಧ ಇದ್ದಷ್ಟೂಅದನ್ನು ಹತೋಟಿಗೆ ತರುವುದು ಸುಲಭ. ಶತಮಾನದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು ಹೇಳಿದ ಆ ಒಂದು ವಾಕ್ಯದಲ್ಲಿ ನಮ್ಮ ಬದುಕಿನ ಅಷ್ಟೂಸಾರ ಅಡಗಿದೆ. ಯಾವಾಗ ಮನಸ್ಸಿನಲ್ಲಿ ಸ್ವಾರ್ಥ, ವಂಚನೆ ಮತ್ತು ದುರಾಶೆ ತುಂಬುತ್ತದೆಯೋ ಅದನ್ನು ನಿಯಂತ್ರಣಕ್ಕೆ ತರಲಾಗದೆ ಮನುಷ್ಯ ಒದ್ದಾಡಿ ನಂತರ ಒಂದು ದಿನ ಅದರ ಕರ್ಮವನ್ನು ಅನುಭವಿಸಬೇಕಾಗುತ್ತದೆ.

ಸಿಸಿಬಿ ಪೊಲೀಸರು ಸರಣಿಯಲ್ಲಿ ಬಂಧಿಸುತ್ತಿರುವ ಯುವಕ, ಯುವತಿಯರನ್ನು ನೋಡುವಾಗ ಸ್ವಾಮಿ ವಿವೇಕಾನಂದರ ಈ ಮಾತುಗಳು ನೆನಪಾದವು. ಡ್ರಗ್ಸ್‌ ಎನ್ನುವುದು ದೇಹವನ್ನು ನಾಶ ಮಾಡುವ ಅಪ್ಪಟ ಪ್ರಭೇದಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಗೊತ್ತಿಲ್ಲದಷ್ಟುಅಮಾಯಕರು ಯಾರೂ ಇಲ್ಲ. ಆದರೂ ಡ್ರಗ್ಸ್‌ಗೆ ದಾಸರಾಗಿಬಿಟ್ಟಿದ್ದಾರೆ. ಡ್ರಗ್ಸ್‌ ಸರಬರಾಜು, ಖರೀದಿ ಮತ್ತು ಸೇವನೆ ಕಾನೂನು ಪ್ರಕಾರ ಅಪರಾಧಗಳು ಎಂದು ಗೊತ್ತಿದ್ದೂ ಅದನ್ನು ಮಾಡಿದ್ದಾರೆ.

ಯಾಕೆಂದರೆ ಹಾಗೆ ಮಾಡುತ್ತಿದ್ದವರಿಗೆ ಒಂದಲ್ಲ ಒಂದು ದಿನ ನಾವು ಸಿಕ್ಕಿ ಬೀಳುತ್ತೇವೆ ಎಂಬ ಭಯ ಇರಲೇ ಇಲ್ಲ. ಯಾಕೆಂದರೆ ಅವರ ಸುತ್ತಲೂ ಇದ್ದವರು ಕಾನೂನನ್ನೇ ಖರೀದಿಸಬಲ್ಲಷ್ಟುಶಕ್ತರಾಗಿದ್ದರು. ಅವರಿಗೆ ದೇಶ, ರಾಜ್ಯದ ಪ್ರಭಾವಿ ರಾಜಕಾರಣಿಗಳ ಸಂಗವಿತ್ತು. ಅದಕ್ಕಾಗಿ ಮೋಜು, ಮಸ್ತಿಯಲ್ಲಿ ತಮ್ಮನ್ನು ಡ್ರಗ್ಸ್‌ ವಶಕ್ಕೆ ಅನಾಯಾಸವಾಗಿ ಒಪ್ಪಿಸಿಬಿಟ್ಟಿದ್ದರು. ಈಗ ಅಂತಹವರು ನಮ್ಮ ಭವಿಷ್ಯ ಹೋಯಿತಲ್ಲ ಎಂದು ಬಾಯಿಬಡಿದುಕೊಳ್ಳುತ್ತಿದ್ದಾರೆ.

ಕೋವಿಡ್ ಹಗರಣ, ಗಲಭೆಯಲ್ಲಿ ಬಿಎಸ್‌ವೈ ಸರ್ಕಾರದ ವೈಫಲ್ಯ: ಕಟೀಲ್ ಬಿಚ್ಚಿಟ್ರು ವಿಷ್ಯ

ಡ್ರಗ್ಸ್‌ ಅಮಲು ಒಳಗಿಳಿದ ಪರಿ

ಭಾರತದ ಅರ್ಥವ್ಯವಸ್ಥೆಯ ಬುಡ ಅಲುಗಾಡಿಸಬೇಕಾದರೆ ಅಲ್ಲಿನ ಕೃಷಿ ಪದ್ಧತಿಯನ್ನು ನಾಶ ಮಾಡಬೇಕು, ಸ್ವಾವಲಂಬನೆಯನ್ನು ಮುರಿದು ಹಾಕಬೇಕಾದರೆ ಗುರುಕುಲ ಪದ್ಧತಿ ಕೊನೆಗೊಳಿಸಬೇಕು ಮತ್ತು ಯುವ ಶಕ್ತಿಯನ್ನು ಮಟ್ಟಹಾಕಬೇಕಾದರೆ ಡ್ರಗ್ಸನ್ನು ಅವರ ರಕ್ತದೊಳಗೆ ಸೇರಿಸಬೇಕು ಎಂದು ಬ್ರಿಟಿಷರು ಯಾವತ್ತೋ ನಿರ್ಧರಿಸಿಯಾಗಿತ್ತು. ಅವರು ನಮ್ಮ ಸಾವಯವ ಕೃಷಿ ಪದ್ಧತಿಯನ್ನು ನಾಶಗೊಳಿಸಲು ಟ್ರ್ಯಾಕ್ಟರ್‌ ತಂದರು. ಅದನ್ನು ನಮ್ಮ ಆಗಿನ ಪ್ರಧಾನ ಮಂತ್ರಿ ಜವಾಹರ್‌ ಲಾಲ್‌ ನೆಹರೂ ಅಕ್ಷರಶಃ ಒಪ್ಪಿಕೊಂಡು ದೇಶದ ಗದ್ದೆಗಳಲ್ಲಿ ಟ್ರ್ಯಾಕ್ಟರ್‌ ಬಳಕೆಗೆ ಇಂಬು ಕೊಟ್ಟರು. ಮಕ್ಕಳ ಉನ್ನತ ಭವಿಷ್ಯಕ್ಕೆ ಸಾಕಾರವಾಗಿದ್ದ ಗುರುಕುಲ ಪದ್ಧತಿ ಕೊನೆಗೊಂಡು ಲಾರ್ಡ್‌ ಮೆಕಾಲೆ ಬೋಧಿಸಿದ ಶಿಕ್ಷಣವನ್ನು ಜಾರಿಗೆ ತರಲಾಯಿತು.

ಒಂದು ಕಡೆ ರಾಸಾಯನಿಕ ಮಿಶ್ರಿತ ಆಹಾರ ಪದಾರ್ಥ ತಿಂದು ಮತ್ತು ಅಪ್ಪಟ ವ್ಯಾವಹಾರಿಕವಾದ ಶಿಕ್ಷಣ ಪದ್ಧತಿಯಿಂದ ಮನಸ್ಸು ಕೂಡ ಕಳೆದುಕೊಂಡ ನಮ್ಮ ಯುವ ಜನಾಂಗದ ದೇಹವನ್ನು ದುರ್ಬಲಗೊಳಿಸಲು ಡ್ರಗ್ಸ್‌ ದೇಶ ಪ್ರವೇಶಿಸಿತು. ಪಂಜಾಬ್‌ನಲ್ಲಿ ಇದರ ಪ್ರಯೋಗದಲ್ಲಿ ಯಶಸ್ವಿಯಾದ ದುರುಳರು ಎಷ್ಟರ ಮಟ್ಟಿಗೆ ಸಫಲತೆ ಕಂಡರೆಂದರೆ ಒಂದು ಕಾಲದಲ್ಲಿ ಭಾರತೀಯ ಸೇನೆಯಲ್ಲಿ ಪಂಜಾಬಿಗಳ ದೇಹ, ಚುರುಕುತನ ಮತ್ತು ದೃಢ ಮನಸ್ಸುಗಳ ಉತ್ಸವ ನಡೆಯುತ್ತಿತ್ತು. ಅಂತಹ ರಾಜ್ಯದಲ್ಲಿ ಡ್ರಗ್ಸ್‌ ಅಲ್ಲಿನ ಯುವ ಜನಾಂಗದ ದೇಹ ಹೊಕ್ಕು ರಾಜ್ಯದ ಹೆಸರನ್ನು ಹಾಳು ಮಾಡುತ್ತಿದೆ.

ನಂತರ ಅದು ನಮ್ಮ ರಾಜ್ಯದ ಗಡಿಯೊಳಗೆ ಪ್ರವೇಶಿಸಿ ವಿದೇಶಿ ಸಂಸ್ಕೃತಿ ಅಳವಡಿಸಿಕೊಂಡ ನಮ್ಮ ತರುಣ, ತರುಣಿಯರಿಗೆ ಖುಷಿಗೆ ಒಂದು ನೆಪವಾಗಿಹೋಗಿ ನಮ್ಮ ರಾಜ್ಯದ ಸಂಸ್ಕೃತಿಯನ್ನೇ ಹಾಳು ಮಾಡಲು ಹೊರಟುಬಿಟ್ಟಿತ್ತು. ಸಾಫ್ಟ್‌ವೇರ್‌ ಅಬ್ಬರದಲ್ಲಿ ರಾಜ್ಯದೊಳಗೆ ಕಾಲಿಟ್ಟಅಸಂಖ್ಯಾತ ಯುವಪಡ್ಡೆಗಳು ತಮ್ಮ ಜೊತೆಗೆ ಡ್ರಗ್ಸ್‌ ತಂದರು. ಬೆಂಗಳೂರಿನ ಶುಕ್ರವಾರ, ಶನಿವಾರದ ರಾತ್ರಿಗಳು ರಂಗೇರಿ ಹೋದವು. ಅಲ್ಲದೆ ಅವರಿಗೆ ಮದ್ಯದ ಅಮಲು ಸಾಕಾಗದೇ ಡ್ರಗ್ಸ್‌ ಆ ಜಾಗವನ್ನು ಆಕ್ರಮಿಸಿಕೊಂಡು ಬಿಟ್ಟವು. ಸಾಫ್ಟ್‌ವೇರ್‌ ಲೋಕ ಇಲ್ಲಿನ ಆದಾಯಕ್ಕೆ ಹೊಸ ದಿಕ್ಕು ತೋರಿಸಿತು. ಉದ್ಯಮಗಳು ಬೆಳೆದೆವು. ಅದರೊಂದಿಗೆ ಮೋಜು, ಮಸ್ತಿ ಮತ್ತು ಸೆಲೆಬ್ರಿಟಿಗಳೂ ಬೆಳೆದರು.

ಸಂಬರಗಿ ಪರ ಕಟೀಲ್ ಬ್ಯಾಟಿಂಗ್; ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಪೊಲೀಸರು ಅವಕಾಶಕ್ಕೆ ಕಾಯುತ್ತಿದ್ದರು

ಭಾಜಪಾ ರಾಜ್ಯದ ಆಡಳಿತವನ್ನು ಕೈಗೆ ತೆಗೆದುಕೊಳ್ಳುವ ತನಕದ ಮೊದಲು ಕಳೆದ ಒಂದು ದಶಕದಲ್ಲಿ ರಾಜ್ಯವನ್ನು ಆಳುತ್ತಿದ್ದವರಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಬೇಕಿತ್ತೇ ವಿನಃ ಡ್ರಗ್ಸ್‌ ತಮ್ಮದೇ ಮನೆಯ ಮಕ್ಕಳನ್ನೂ ಸಾವಿನ ಅಂಚಿಗೆ ತಳ್ಳಬಹುದು ಎನ್ನುವ ಯೋಚನೆಯೂ ಬರಲಿಲ್ಲ. ಪ್ರಭಾವಿಗಳ ಮಕ್ಕಳಿಗೆ ಮನೆಯಲ್ಲಿ ದಂಡಿಯಾಗಿ ಸಿಗುತ್ತಿದ್ದ ಹಣದೊಂದಿಗೆ, ತಂದೆಯ ಅಧಿಕಾರ ಮತ್ತು ಪ್ರಭಾವ ಪುಕ್ಕಟೆ ಜೊತೆಯಾಗಿ ಬಂದಿದ್ದವು. ಇಂತಹವರ ಅಟಾಟೋಪಕ್ಕೆ ಲಗಾಮು ಹಾಕಲು ಪೊಲೀಸರಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಡ್ರಗ್ಸ್‌ ಪೂರೈಸುವವರು ಸಿಕ್ಕಿಬಿದ್ದರೂ ಅವರನ್ನು ಬಿಡಿಸಲು ಕೆಲವು ಪ್ರಭಾವಿಗಳ ಮಕ್ಕಳೇ ಮುಂದಾಗುತ್ತಿದ್ದರು.

ಪೊಲೀಸ್‌ ಇಲಾಖೆಯ ಕೈಯನ್ನು ಅಕ್ಷರಶಃ ಕಟ್ಟಿಹಾಕಲಾಗಿತ್ತು. ದಕ್ಷ ಪೊಲೀಸ್‌ ಅಧಿಕಾರಿಗಳು ಮೌನಕ್ಕೆ ಶರಣಾಗಬೇಕಾದ ಪರಿಸ್ಥಿತಿ ಇತ್ತು. ನಮಗೆ ಅಧಿಕಾರ ಚಲಾಯಿಸುವ ಅವಕಾಶ ಕೊಡಿ. ರಾಜ್ಯದಲ್ಲಿ ಒಂದು ಕಡೆಯಿಂದ ಡ್ರಗ್ಸ್‌ ವಿರುದ್ಧ ಸಮರ ಸಾರುತ್ತಾ ಬರುತ್ತೇವೆ ಎನ್ನುವ ಮನಸ್ಸು ಪೊಲೀಸ್‌ ಇಲಾಖೆಯ ಒಳಗಿನಿಂದ ಕೇಳಿಬರುತ್ತಿತ್ತು. ಅಂತಹ ಒಂದು ಮುಹೂರ್ತಕ್ಕಾಗಿ ರಾಜ್ಯ ಪೊಲೀಸ್‌ ಇಲಾಖೆ ಕಾಯುತ್ತಿತ್ತು.

ತನ್ನ ಖದರ್‌ ತೋರಿಸಿದ ಸರ್ಕಾರ

ಮುಂಬೈಯಲ್ಲಿ ಯುವ ನಾಯಕ ನಟ ಸುಶಾಂತ್‌ ಸಿಂಗ್‌ ರಾಜಪೂತ್‌ ಸಾವಿಗೂ ಡ್ರಗ್ಸ್‌ಗೂ ಸಂಬಂಧವಿದೆ ಮತ್ತು ಅದರ ಪೂರೈಕೆದಾರರಿಗೂ ಬೆಂಗಳೂರಿನ ಧಾರಾವಾಹಿ ನಟಿಗೂ ಲಿಂಕ್‌ ಇದೆ ಎಂದು ಗೊತ್ತಾದ ನಂತರ ಇದನ್ನು ಬುಡಸಮೇತ ಕಿತ್ತೊಗೆಯಲು ನಮ್ಮ ಸರ್ಕಾರ ನಿರ್ಧರಿಸಿತು. ಮುಖ್ಯಮಂತ್ರಿ ಯಡಿಯೂರಪ್ಪನವರ ಸೂಚನೆಯ ಮೇರೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್‌ ಉನ್ನತ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಸಿಎಂ ಆದಿಯಾಗಿ ಗೃಹ ಸಚಿವರು ಹೇಳುತ್ತಿದ್ದಂತೆ ಪೊಲೀಸ್‌ ಅಧಿಕಾರಿಗಳು, ಸಿಸಿಬಿ ಅಧಿಕಾರಿಗಳು ಡ್ರಗ್ಸ್‌ ಜಾಲವನ್ನು ಜಾಲಾಡಿಬಿಟ್ಟರು.

ಅದರಲ್ಲಿ ಸಿಕ್ಕಿದ್ದು ಸಣ್ಣಪುಟ್ಟಹೆಸರುಗಳೇನಲ್ಲ. ಸಿನಿಮಾ ರಂಗದ ತಾರೆಯರ ಹೆಸರು ಕೇಳಿಬರುತ್ತಿದ್ದಂತೆ ಅವರನ್ನು ವಿಚಾರಣೆಗೊಳಪಡಿಸಲಾಯಿತು. ಒಂದು ಸರ್ಕಾರ ಹೀಗೂ ಜನರ ಪರವಾಗಿ ಕೆಲಸ ಮಾಡಬಹುದು ಎಂದು ಎಲ್ಲರೂ ಆಶ್ಚರ್ಯಪಡುವಂತೆ ನಮ್ಮ ಸರ್ಕಾರ ಕಠಿಣ ನಿಲುವು ತಳೆಯಿತು. ಆ ನಡುವೆ ಬಂಧಿತರಾದವರು ನಮ್ಮ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಫೋಟೋಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತ ರಾಗಿಣಿ ವಿಷಯದಲ್ಲಿ ಮೃದು ಧೊರಣೆ ತಳೆಯಬಹುದು ಎಂದೇ ಹಲವರು ಭಾವಿಸಿದರು. ಆದರೆ, ನಮ್ಮ ನಿಲುವು ಅಚಲವಾಗಿತ್ತು. ಈ ನೆಲದ ಕಾನೂನನ್ನು ಯಾರೇ ಉಲ್ಲಂಘಿಸಲಿ, ಅವರು ಎಂತಹುದೇ ಪ್ರಭಾವಿ ವ್ಯಕ್ತಿಯಾಗಿರಲಿ, ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಎಲ್ಲಾ ಸಚಿವರು, ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದರು. ಅಷ್ಟಕ್ಕೂ ರಾಗಿಣಿ ತರಹ ಅನೇಕ ಸಿನಿಮಾ ತಾರೆಯರು ಚುನಾವಣಾ ಸಂದರ್ಭಗಳಲ್ಲಿ ವಿವಿಧ ಪಕ್ಷದ ತಾರಾ ಪ್ರಚಾರಕರಾಗಿ ಕೆಲಸ ಮಾಡುತ್ತಾರೆ. ಅವರು ಆ ಸಂದರ್ಭಕ್ಕೆ ಮಾತ್ರ ಸೀಮಿತ. ಇದೇ ರಾಗಿಣಿ ಬೇರೆ ಪಕ್ಷಗಳ ಮುಖಂಡರನ್ನು ಭೇಟಿಯಾಗಿ ಫೋಟೋಗಳನ್ನು ತೆಗೆಸಿದ್ದಾರೆ. ಅದನ್ನೂ ನಾವು ಗಮನಿಸಿದ್ದೇವೆ. ಆದರೆ ಈ ವಿಷಯದಲ್ಲಿ ನಮ್ಮ ಪಕ್ಷದ ನಿಲುವು ದೃಢವಾಗಿದೆ.

ಡ್ರಗ್ಸ್‌ ವಿರುದ್ಧ ಮುಲಾಜಿಲ್ಲದೆ ಕ್ರಮ

ನಮಗೆ ರಾಜ್ಯದ ಯುವ ಜನಾಂಗದ ಭವಿಷ್ಯ ಮುಖ್ಯ. ಡ್ರಗ್ಸ್‌ ಜಾಲದಲ್ಲಿ ಸಿಲುಕಿ ಅಪರಾಧ ಮಾಡಿದವರು ಎಂತವರೇ ಆಗಿರಲಿ ನಮಗೆ ಅದು ಮುಖ್ಯವಲ್ಲ. ಒಂದು ವೇಳೆ ಬೇರೆ ಪಕ್ಷ ಈಗ ಅಧಿಕಾರದಲ್ಲಿದ್ದು, ಸಿನಿಮಾ ತಾರೆಯರು ಅವರ ಪಕ್ಷಕ್ಕೆ ಪ್ರಚಾರ ಮಾಡಿದ್ದಿದ್ದರೆ ಅಂತಹವರನ್ನು ರಕ್ಷಿಸುವ ಕೆಲಸ ಆಗುತ್ತಿದ್ದುದರಲ್ಲಿ ಸಂಶಯವಿಲ್ಲ. ಆದರೆ ನಮ್ಮ ಪಕ್ಷ ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರೀಯ ಚಿಂತನೆಯನ್ನು ಹೊಂದಿರುವುದರಿಂದಲೇ ನಮ್ಮಲ್ಲಿ ಅದೆಲ್ಲ ನಡೆಯುವುದೇ ಇಲ್ಲ. ಹಿಂದೆ ಇಂತಹ ಘಟನೆಗಳು ನಡೆದು ಅಂತಹವರನ್ನು ರಕ್ಷಿಸುವ ಕೆಲಸ ಆಗಿರಬಹುದು, ಅದಕ್ಕಾಗಿ ಪೊಲೀಸ್‌ ಇಲಾಖೆಯ ಮೇಲೆ ಒತ್ತಡವನ್ನೂ ಹಾಕಿರಬಹುದು. ಅದರಿಂದಲೇ ಡ್ರಗ್ಸ್‌ ಜಾಲ ಈ ಪ್ರಮಾಣದಲ್ಲಿ ಬೆಳೆದಿರುವುದು. ಇದು ಕೇವಲ ಬೆಂಗಳೂರಿನಂತಹ ಮಹಾನಗರಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿದೆ. ಇವತ್ತು ಹಳ್ಳಿಗಳ ಗುಡಿಸಲುಗಳಲ್ಲಿ ಅಡಗಿಸಿಟ್ಟಿರುವ ಗಾಂಜಾಗಳು ಸಿಕ್ಕ ಪ್ರಮಾಣ ನೋಡಿದಾಗಲೇ ಇದು ಸ್ಪಷ್ಟವಾಗುತ್ತದೆ.

ಬಿಜೆಪಿಯಿಂದ ಎಲ್ಲೆಡೆ ಜಾಗೃತಿ

ಈ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣಿಸುವುದಕ್ಕೆ ನಮ್ಮ ಗೃಹ ಇಲಾಖೆ ಹೇಗೆ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆಯೋ ಅದೇ ರೀತಿಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರೂ ಗ್ರಾಮ, ತಾಲೂಕು, ಜಿಲ್ಲೆಗಳಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕೆ ನಾಗರಿಕ ಬಂಧುಗಳು ಕೈಜೋಡಿಸಬೇಕಾಗಿದೆ. ನಿಮ್ಮಲ್ಲಿ ಡ್ರಗ್ಸ್‌ ಜಾಲದ ಬಗ್ಗೆ ಏನೇ ಮಾಹಿತಿಗಳಿದ್ದರೂ ಅದನ್ನು ಸಮೀಪದ ಠಾಣೆಗೆ ನೀಡಿ. ನೀವು ಕೊಡುವ ಮಾಹಿತಿಯನ್ನು ಆಧರಿಸಿ ಪೊಲೀಸ್‌ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಹೆಸರು, ವಿಳಾಸ ಗೌಪ್ಯವಾಗಿ ಇಡಲಾಗುವುದು. ಇನ್ನು ನೀವು ಮಾಧ್ಯಮಗಳಲ್ಲಿ ನೋಡುವಂತೆ ರಾಜ್ಯದ ರಾಜಧಾನಿಯ ಪೊಲೀಸರು ಮಾತ್ರ ಈ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ. ರಾಜ್ಯದ ಪ್ರತಿ ಜಿಲ್ಲೆ, ಪ್ರತಿ ತಾಲೂಕಿನಲ್ಲೂ ಪೊಲೀಸರು ಈ ಜಾಲ ಭೇದಿಸಲು ಕ್ರಮ ಕೈಗೊಂಡಿದ್ದಾರೆ. ಡಿಐಜಿ, ಐಜಿಪಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಅಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿ, ಆಯುಕ್ತರ ಜೊತೆ ಸಭೆ ಮಾಡಿ ನಿರ್ದೇಶನ ನೀಡುತ್ತಿದ್ದಾರೆ.

ಇದು ಡ್ರಗ್ಸ್‌ ಭಯೋತ್ಪಾದನೆ

ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಯುವಜನಾಂಗವನ್ನು ಹೊಂದಿರುವ ದೇಶ ನಮ್ಮದು. ಬೇರೆ ದೇಶಗಳು ಇಳಿವಯಸ್ಸಿನ ನಾಗರಿಕರನ್ನು ಹೆಚ್ಚೆಚ್ಚು ಹೊಂದಿವೆ. ಹೀಗಾಗಿ ಅವುಗಳ ಉತ್ಪಾದನಾ ಕಾರ್ಯಕ್ಷಮತೆ ಇಳಿಮುಖವಾಗುತ್ತಾ ಹೋಗುತ್ತವೆ. ಆದರೆ, ಭಾರತದಲ್ಲಿ ಹಾಗಲ್ಲ. ನಾವು ಪ್ರಬಲ ಶಕ್ತಿವಂತ ಯುವಜನಾಂಗವನ್ನು ದೇಶದ ಆಸ್ತಿಯನ್ನಾಗಿ ಹೊಂದಿದ್ದೇವೆ. ಇದನ್ನು ದುರ್ಬಲಗೊಳಿಸಲು ವಿದೇಶಿಗರಿಗೆ ಇರುವುದು ದೇಹದೊಳಗೆ ಪರೋಕ್ಷವಾಗಿ ವಿಷವನ್ನು ಚುಚ್ಚುವುದು. ಈಗಾಗಲೇ ನೈಜೀರಿಯಾದಿಂದ ಇಲ್ಲಿಗೆ ಬಂದು ವೀಸಾ ಅವಧಿ ಮುಗಿದರೂ ಹಿಂದಿರುಗದೇ ಇರುವ ಅಲ್ಲಿನ ಪ್ರಜೆಗಳು ಡ್ರಗ್ಸ್‌ ಪೂರೈಸುವಂತಹ ಕೆಲಸ ಮಾಡುತ್ತಿರುವುದು ಹೆಚ್ಚೆಚ್ಚು ಗಮನಕ್ಕೆ ಬರುತ್ತಿದೆ. ಆ ಕುರಿತು ಪೊಲೀಸ್‌ ಇಲಾಖೆ ವಿಚಾರಣೆ ನಡೆಸುತ್ತಿದೆ.

ಇನ್ನು ವಿದೇಶಗಳಿಂದ ಪಾರ್ಸಲ್‌ ಮೂಲಕ ಬರುವ ವಸ್ತುಗಳ ಬಗ್ಗೆಯೂ ಕಸ್ಟಮ್ಸ್‌ ಅಧಿಕಾರಿಗಳು ಪ್ರಬಲ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಒಂದು ರೀತಿಯಲ್ಲಿ ಇದೊಂದು ಡ್ರಗ್ಸ್‌ ಭಯೋತ್ಪಾದನೆ. ಡ್ರಗ್ಸ್‌ ನಮ್ಮ ಯುವಜನಾಂಗವನ್ನು ಇಂಚಿಂಚಾಗಿ ಕೊಲ್ಲುವ ಮೂಲಕ ಅಂತಹ ಮಕ್ಕಳ ಪೋಷಕರಲ್ಲಿ ಭಯವನ್ನು ಉಂಟುಮಾಡುತ್ತಿದೆ. ಆದ್ದರಿಂದ ಈ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ. ಡ್ರಗ್ಸ್‌ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದವರ ಪ್ರಮಾಣ ಕಡಿಮೆ ಇರುವುದರಿಂದ ಈ ಬಗ್ಗೆ ಹೆದರಿಕೆ ಯಾರಿಗೂ ಆಗುತ್ತಿರಲಿಲ್ಲ. ಪೊಲೀಸರು ಆಳವಾಗಿ ತನಿಖೆ ಮಾಡಲು ಸಾಧ್ಯವಾಗದಷ್ಟುಹಸ್ತಕ್ಷೇಪ ಹಿಂದಿನ ಸರ್ಕಾರಗಳಿಂದ ಇರುತ್ತಿತ್ತು. ಅದರಿಂದಾಗಿ ಇಷ್ಟುಬೃಹದಾಕಾರವಾಗಿ ಈ ಮಾಫಿಯಾ ಬೆಳೆದು ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಆ ರೀತಿ ಆಗದಂತೆ ನಮ್ಮ ಸರ್ಕಾರ ಮಾಡುತ್ತದೆ.

ನಶಾಮುಕ್ತ ಕರ್ನಾಟಕ ಕಟ್ಟೋಣ

ಮುಂದಿನ ದಶಕ ಯುವಜನಾಂಗಕ್ಕೆ ಹೊಸ ಆಶೋತ್ತರಗಳನ್ನು ನೀಡಲಿ. ಡ್ರಗ್ಸ್‌ ಪಿಡುಗು ಈ ದಶಕಕ್ಕೆ ಅಂತ್ಯವಾಗಲಿ. ಎಲ್ಲರೂ ಕೈ ಜೋಡಿಸಿ ಡ್ರಗ್ಸ್‌ ಮುಕ್ತ ಕರ್ನಾಟಕ ಕಟ್ಟೋಣ. ಕೊರೋನಾದೊಂದಿಗೆ ಡ್ರಗ್ಸ್‌ ಕೂಡ ನಮ್ಮನ್ನು ಬಿಟ್ಟು ಹೋಗಲಿ. ಅನೇಕ ಯೋಧರನ್ನು, ಅಸಂಖ್ಯಾತ ವಿಜ್ಞಾನಿಗಳು, ವಿಶ್ವ ಕಂಡಂತಹ ಸಾಫ್ಟ್‌ವೇರ್‌ ದಿಗ್ಗಜರು, ಜಗತ್ತೇ ನೋಡುವಂತಹ ಶ್ರೇಷ್ಠ ಸಿನಿಮಾಗಳು, ರಾಷ್ಟ್ರಕವಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಕೊಟ್ಟನಾಡು ನಮ್ಮದು. ಈ ಡ್ರಗ್ಸ್‌ ಎಂಬ ವಿಷ ಮತ್ತು ಅದನ್ನು ಪೂರೈಸುವ ಸಮಾಜದ್ರೋಹಿಗಳಿಂದ ನಮ್ಮ ನಮಗೆ ಕಪ್ಪು ಚುಕ್ಕೆ ಬಾರದಿರಲಿ.

ಸ್ವಾಮಿ ವಿವೇಕಾನಂದರ ಮತ್ತೊಂದು ವಾಣಿಯೊಂದಿಗೆ ಈ ಅಂಕಣ ಮುಗಿಸುತ್ತಿದ್ದೇನೆ- ಶಕ್ತಿಯೇ ಜೀವನ, ಬಲಹೀನತೆಯೇ ಮರಣ. ಸ್ವಾಮಿ ವಿವೇಕಾನಂದರು ಹೇಳಿದ್ದನ್ನೇ ನಮ್ಮ ಜೀವನದಲ್ಲಿ ಅಳವಡಿಸುವುದಾದರೆ ಡ್ರಗ್ಸ್‌ ನಮ್ಮ ದೇಹದ ಶಕ್ತಿಯನ್ನು ಹೀರಿ ನಮ್ಮನ್ನು ನಾಶ ಮಾಡುತ್ತದೆ. ಡ್ರಗ್ಸ್‌ ಸೇವಿಸದ ಮನುಷ್ಯ ಶಕ್ತಿವಂತನಾಗಿರುತ್ತಾನೆ. ಸೇವಿಸುವ ವ್ಯಕ್ತಿ ದುರ್ಬಲನಾಗುತ್ತಾನೆ. ದುರ್ಬಲತೆ ಮರಣದೊಂದಿಗೆ ಅಂತ್ಯವಾಗುತ್ತದೆ. ದೇಶಕ್ಕಾಗಿ ಏನಾದರೂ ಸಾಧನೆ ಮಾಡಿ ರಾಷ್ಟ್ರದ ಕೀರ್ತಿ ಪತಾಕೆಯನ್ನು ಜಾಗತಿಕವಾಗಿ ಹಾರಾಡಿಸಲು ನಾವು ಬದುಕಬೇಕಿದೆ. ಡ್ರಗ್ಸ್‌ ಆ ದಾರಿಯಲ್ಲಿರುವ ಮುಳ್ಳಾಗಿದೆ.

- ನಳಿನ್‌ ಕುಮಾರ್‌ ಕಟೀಲ್‌

ಬಿಜೆಪಿ ರಾಜ್ಯಾಧ್ಯಕ್ಷ

Follow Us:
Download App:
  • android
  • ios