ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ಕೊಟ್ಟಿದ್ದು ಬೆಂಗಳೂರಿನ ಬಿಜೆಪಿ ಶಾಸಕರ ಸಂಬಂಧಿ ದೀಪಕ್
ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ನಟ ದರ್ಶನ್ ಆಪ್ತ ದೀಪಕ್ ಕುಮಾರ್ ಹಾಗೂ ನಂದೀಶ್ ವಿದ್ಯುತ್ ಶಾಕ್ ಕೊಟ್ಟಿದ್ದರು ಎಂಬ ಸಂಗತಿಯನ್ನು ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು (ಜೂ.16): ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ನಟ ದರ್ಶನ್ ಆಪ್ತ ದೀಪಕ್ ಕುಮಾರ್ ಹಾಗೂ ನಂದೀಶ್ ವಿದ್ಯುತ್ ಶಾಕ್ ಕೊಟ್ಟಿದ್ದರು ಎಂಬ ಸಂಗತಿಯನ್ನು ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದಾರೆ. ಮೃತ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ಅನ್ನು ಪ್ರಕರಣದ ಎ.5 (ನಂದೀಶ್) ಹಾಗೂ ಎ.13 (ದೀಪಕ್) ಆರೋಪಿಗಳು ನೀಡಿದ್ದರು. ಈಗ ವಿದ್ಯುತ್ ಶಾಕ್ ನೀಡಲು ಬಳಸಿದ್ದ ಉಪಕರಣವನ್ನು ಜಪ್ತಿ ಮಾಡಬೇಕಿದೆ ಎಂದು ಎಸ್‌ಪಿಪಿ ಹೇಳಿದ್ದಾರೆ. ಈ ವಿದ್ಯುತ್ ಶಾಕ್ ನೀಡುವ ವೇಳೆ ದರ್ಶನ್ ಸಹ ಉಪಸ್ಥಿತರಿದ್ದರು ಎನ್ನಲಾಗಿದೆ. ಅಲ್ಲದೆ ವಿದ್ಯುತ್ ಶಾಕ್ ನೀಡಿದ್ದ ದೀಪಕ್ ಬೆಂಗಳೂರು ನಗರದ ಪ್ರಭಾವಿ ಬಿಜೆಪಿ ಶಾಸಕರೊಬ್ಬರ ಸಂಬಂಧಿ ಎಂಬುದು ಗೊತ್ತಾಗಿದೆ.
ದರ್ಶನ್ ಮನೆಯಲ್ಲಿ ಮಹಜರ್: ಈ ಹತ್ಯೆ ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿರುವ ನಟ ದರ್ಶನ್ ಮನೆಯಲ್ಲಿ ಪೊಲೀಸರು ಮಹಜರ್ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಹತ್ಯೆ ಕೃತ್ಯದ ಬಳಿಕ ತಮ್ಮ ಮನೆಯಲ್ಲಿ ಆಪ್ತರ ಸಭೆ ನಡೆಸಿ ತನ್ನ ಹೆಸರು ಪ್ರಕರಣದಲ್ಲಿ ಬಾರದಂತೆ ನೋಡಿಕೊಳ್ಳಲು 30 ಲಕ್ಷ ರು. ಹಣವನ್ನು ದರ್ಶನ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಮಹಜರ್ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಏನೋ ಆಗಿಹೋಯ್ತು ಸಾರ್... ತನಿಖೆ ವೇಳೆ ಪೊಲೀಸರೆದುರು ದರ್ಶನ್ ಕಣ್ಣೀರು: ನಖರಾ ಬಿಡದ ಪವಿತ್ರಾಗೌಡ
ಎರಡು ಕಡೆ ಸ್ಥಳ ಮಹಜರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ಗುರುವಾರ ಮಧ್ಯರಾತ್ರಿ ಚಿತ್ರದುರ್ಗದ ಎರಡು ಕಡೆ ಸ್ಥಳ ಮಹಜರು ಮಾಡಿದ್ದಾರೆ. ನಗರದ ಚಳ್ಳಕೆರೆ ಗೇಟ್ ಬಳಿ ಬಾಲಾಜಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಬೆಂಗಳೂರು ರಸ್ತೆಯಲ್ಲಿನ ಜಗಳೂರು ಮಹಲಿಂಗಪ್ಪ ಪೆಟ್ರೋಲ್ ಬಂಕ್ ಬಳಿ ಮಹಜರು ನಡೆಸಲಾಯಿತು. ಗುರುವಾರ ಸಂಜೆ ಸ್ಥಳ ಮಹಜರಿಗೆ ಬರುತ್ತಾರೆ, ದರ್ಶನ್ ಕೂಡಾ ಆಗಮಿಸುತ್ತಾರೆಂಬ ವದಂತಿ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಬಾಲಾಜಿ ಬಾರ್ ಬಳಿ ಕಾದಿದ್ದರು.
ಆದರೆ ಯಾರೂ ಬರುವ ಸೂಚನೆ ಸಿಗದ ಕಾರಣ ರಾತ್ರಿ ಎಂಟೂವರೆ ನಂತರ ಎಲ್ಲರೂ ನಿರ್ಗಮಿಸಿದ್ದರು. ಆ ಬಳಿಕ ಜನಸಂದಣಿ, ಮಾಧ್ಯಮದ ಕಣ್ತಪ್ಪಿಸಿ ಪೊಲೀಸರು ಮಧ್ಯರಾತ್ರಿ ಒಂದು ಗಂಟೆಗೆ ಆಗಮಿಸಿ ಸ್ಥಳ ಮಹಜರು ಮಾಡಿದ್ದಾರೆ. ಸಿಪಿಐ ಸಂಜೀವ್ ಗೌಡ ನೇತೃತ್ವದಲ್ಲಿ ಮಹಜರು ಮಾಡಲಾಗಿದೆ. ಈ ವೇಳೆ ದರ್ಶನ್ ಅಭಿಮಾನಿಗಳ ಸಂಘದ ಚಿತ್ರದುರ್ಗ ಅಧ್ಯಕ್ಷ ರಾಘವೇಂದ್ರ ಪೊಲೀಸರ ಮುಂದೆ ರೇಣುಕಾಸ್ವಾಮಿ ಕಿಡ್ನಾಪ್ ಹೇಗೆ ಮಾಡಿದೆ ಎಂಬುದನ್ನು ವಿವರಿಸಿದ್ದಾನೆ. ಬಾಲಾಜಿ ಬಾರ್ ಬಳಿ ಜೂ.8ರ ಬೆಳಗ್ಗೆ 9.48ರ ವೇಳೆಗೆ ಸ್ಕೂಟರ್ ಅಡ್ಡಗಟ್ಟಿ ಕಿಡ್ನಾಪ್ ಮಾಡಲಾಯಿತು.
ವಿಶೇಷ ಸೌಲಭ್ಯ ಆರೋಪ ಹಿನ್ನೆಲೆ: ನಟ ದರ್ಶನ್ ಇರುವ ಠಾಣೆ ಸಿಸಿಟೀವಿ ದೃಶ್ಯ ಕೋರಿ ಆರ್‌ಟಿಐ ಅರ್ಜಿ!
ನಂತರ ಆಟೋವೊಂದರಲ್ಲಿ ಚಳ್ಳಕೆರೆ ಗೇಟಿನಿಂದ ಬೆಂಗಳೂರು ರಸ್ತೆಯಲ್ಲಿನ ಜಗಳೂರು ಮಹಲಿಂಗಪ್ಪ ಪೆಟ್ರೋಲ್ ಬಂಕ್ ವರೆಗೆ ತೆರಳಲಾಯಿತು. ಬಳಿಕ ಟ್ಯಾಕ್ಸಿ ಚಾಲಕ ರವಿಶಂಕರ್‌ಗೆ ಹೇಳಿ ಅಲ್ಲಿಗೆ ಕಾರು ತರಿಸಿಕೊಂಡು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದ ಬಗೆ ವಿವರಿಸಿದ್ದಾನೆ. ಪ್ರಕರಣದ ಇಂಚಿಂಚು ಮಾಹಿತಿ, ಸ್ಥಳದಲ್ಲಿ ಅಳತೆ ಮಾಡಿ ಸಾಕ್ಷಿ ಸಂಗ್ರಹ ಮಾಡಲಾಯಿತು. ಎರಡೂ ಜಾಗದಲ್ಲಿ ಪೋಲೀಸ್ ಬಿಗಿ ಭದ್ರತೆಯಲ್ಲೇ ಮಧ್ಯರಾತ್ರಿ 1.30ರಿಂದ 2.30 ವರೆಗೆ ಎರಡೂ ಜಾಗದಲ್ಲಿ ಸ್ಥಳ ಮಹಜರು ನಡೆಯಿತು.