ದರ್ಶನ್ 7 ಗಂಟೆಯಲ್ಲಿ ಜೈಲಿನಿಂದ ಹೊರಬಂದ: ಆದರೆ, ಆತನ ಅಭಿಮಾನಿ..?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ 7 ಗಂಟೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು. ಆದರೆ, ಅವರ ಗ್ಯಾಂಗ್‌ನ ಸದಸ್ಯ ರವಿಶಂಕರ್‌ಗೆ ಜಾಮೀನು ಪಡೆಯಲು 17 ದಿನಗಳು ಬೇಕಾಯಿತು.
ತುಮಕೂರು (ಅ.30): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದ ನಂತರ ಕೇವಲ 7 ಗಂಟೆಯಲ್ಲಿ ಆರೋಪಿ ದರ್ಶನ್ ಜೈಲಿನಿಂದ ಹೊರಗೆ ಬಂದಿದ್ದಾನೆ. ಆದರೆ, ದರ್ಶನ್‌ನನ್ನು ಕೊಲೆ ಕೇಸಿನಿಂದ ಪಾರು ಮಾಡಲು ಜೈಲಿಗೆ ಹೋಗಲು ಮುಂದಾಗಿದ್ದ ದರ್ಶನ್ ಗ್ಯಾಂಗ್‌ನ ರವಿಶಂಕರ್‌ಗೆ 2 ಲಕ್ಷ ರೂ. ಶ್ಯೂರಿಟಿ ಕೊಡಲು 17 ದಿನಗಳು ತೆಗೆದುಕೊಂಡಿದೆ. ಇದೀಗ ಹದಿನೇಳು ದಿನಗಳ ಬಳಿಕ ಕೊಲೆ ಗ್ಯಾಂಗ್‌ನ ಆರೋಪಿ ಜೈಲಿನಿಂದ ಹೊರಗೆ ಬಂದಿದ್ದಾನೆ.
ರೇಣುಕಾಸ್ವಾಮಿಯನ್ನು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಸೇರಿದಂತೆ 17 ಜನರ ಪೈಕಿ ಈಗಾಗಲೇ ಹಲವರು ಜೈಲಿನಿಂದ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದೇ ಕೇಸಿನ ಎ-8ನೇ ಆರೋಪಿ ರವಿಶಂಕರ್ ಕೂಡ ಇಂದು ತುಮಕೂರು ಜೈಲಿನಿಂದ ಜೈಲಿನಿಂದ ರಿಲೀಸ್ ಆಗಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ- 8 ಆರೋಪಿಯಾಗಿದ್ದ ರವಿಶಂಕರ್‌ಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿ 17 ದಿನಗಳು ಕಳೆದಿವೆ. ಆದರೆ, ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಗೆ ಹೋಗಲು ಇಬ್ಬರು ಶ್ಯೂರಿಟಿದಾರರು ಹಾಗೂ 2 ಲಕ್ಷ ರೂ. ಮೌಲ್ಯದ ಬಾಂಡ್ ಅನ್ನು ನೀಡುವಂತೆ ನ್ಯಾಯಾಲಯದಿಂದ ಷರತ್ತು ವಿಧಿಸಲಾಗಿತ್ತು.
ಇದನ್ನೂ ಓದಿ: ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಕುಂಟುತ್ತಾ ಹೊರಬಂದ ದರ್ಶನ್ ತೂಗುದೀಪ!
ಆದರೆ, 57 ನೇ ಸಿಸಿಎಚ್ ನ್ಯಾಯಾಲಯ ಕೇಳಿದ್ದ ಶ್ಯೂರಿಟಿಯನ್ನು ಪೂರೈಸಲಾಗದೇ ದರ್ಶನ್ ಗ್ಯಾಂಗ್‌ನ ಸಹಚರ ರವಿಕುಮಾರ್ ಕಳೆದ 16 ದಿನಗಳಿಂದ ಜಾಮೀನು ಸಿಕ್ಕಿದ್ದರೂ ಜೈಲಿನಲ್ಲಿಯೇ ಶಿಕ್ಷೆ ಅನುಭವಿಸುತ್ತಿದ್ದರು. ಇದಕ್ಕೆ ಕಾರಣ ಅವರಿಗೆ 2 ಲಕ್ಷ ರೂ. ಮೌಲ್ಯದ ಬಾಂಡ್ ಅನ್ನು ಕೊಡುವುದಕ್ಕೆ ಅವರ ಕುಟುಂಬದಲ್ಲಿ ಯಾರಿಗೂ ಆರ್ಥಿಕ ಶಕ್ತಿಯೇ ಇರಲಿಲ್ಲ. ಆದ್ದರಿಂದ ಜಾಮೀನು ಸಿಕ್ಕಿದರೂ ಅದರ ಪ್ರಕ್ರಿಯೆಗಳನ್ನು ಪೂರೈಸಲು ಬರೋಬ್ಬರಿ 17 ದಿನಗಳನ್ನು ತೆಗೆದುಕೊಂಡಿದ್ದಾರೆ. ಇಂದು 17ನೇ ದಿನ ಜಾಮೀನು ಪ್ರಕ್ರಿಯೆಗೆ ಬೇಕಾದ ಎಲ್ಲ ಷರತ್ತುಗಳನ್ನು ಪೂರೈಸಿದ ನಂತರ ಎ-8ನೇ ಆರೋಪಿ ರವಿಶಂಕರ್ ಜೈಲಿನಿಂದ ಹೊರಗೆ ಬಂದಿದ್ದಾರೆ.
ಕೇವಲ 7 ಗಂಟೆಗಳಲ್ಲಿ ಹೊರಬಂದ ದರ್ಶನ್:
ರೇಣುಕಾಸ್ವಾಮಿಯನ್ನು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ ಪ್ರಮುಖ ಆರೋಪಿ ದರ್ಶನ್ ತನ್ನ ಕೊಲೆ ಕೇಸಿನಿಂದ ತಪ್ಪಿಸಿಕೊಳ್ಳಲು 30 ಲಕ್ಷ ರೂ. ಹಣವನ್ನು ಕೊಟ್ಟು ನಿಶ್ಚಿಂತೆಯಾಗಿದ್ದನು. ಆದರೆ, ಮಾಡಿದ ಕರ್ಮ ಬಿಡುವುದಿಲ್ಲ ಎಂಬಂತೆ ಪೊಲೀಸರಿಗೆ ಸರೆಂಡರ್ ಆದವರು ನಟ ದರ್ಶನ್ ಹೆಸರನ್ನೂ ಬಾಯಿ ಬಿಟ್ಟಿದ್ದರು. ಇದಾದ ನಂತರ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗಿ 131 ದಿನಗಳ ಕಾಲ ಜೈಲಿನಲ್ಲಿದ್ದು, ಅನಾರೋಗ್ಯ ನಿಮಿತ್ತ ಶಸ್ತ್ರಚಿಕಿತ್ಸೆ ಪಡೆದುಕೊಳ್ಳಲು ದರ್ಶನ್‌ಗೆ 6 ವಾರಗಳ ಕಾಲ ಜಾಮೀನು ಮಂಜೂರು ಮಾಡಲಾಗಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ದರ್ಶನ್‌ಗೆ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಇದಾದ ಕೇವಲ 7 ಗಂಟೆಯೊಳಗೆ (ಸಂಜೆಯೊಳಗೆ) ದರ್ಶನ್‌ಗೆ ವಿಧಿಸಲಾಗಿದ್ದ ಪಾಸ್‌ಪೋರ್ಟ್ ಸಲ್ಲಿಕೆ, 2 ಲಕ್ಷ ರೂ. ಬಾಂಡ್ ಸಲ್ಲಿಕೆ, ಇಬ್ಬರ ಶ್ಯೂರಿಟಿ ಎಲ್ಲವನ್ನೂ ಪೂರೈಸಿದ್ದಾರೆ. ಅಂದರೆ ಜಾಮೀನು ಮಂಜೂರಾದ ದಿನವೇ ಜೈಲಿನಿಂದ ರಿಲೀಸ್ ಆಗಿದ್ದಾರೆ. ದರ್ಶನ್ ನಂಬಿಕೊಂಡು ಹೋದ ಆತನ ಅಭಿಮಾನಿ ಮಾತ್ರ ಜಾಮೀನು ಸಿಕ್ಕಿದರೂ ಕೋರ್ಟ್‌ಗೆ ಶ್ಯೂರಿಟಿ ಕೊಡಲಾಗದೇ ಹೆಚ್ಚುವರಿ 17 ದಿನಗಳ ಕಾಲ ಜೈಲಿನಲ್ಲಿಯೇ ಕೊಳೆಯುತ್ತಿದ್ದರು.
ಇದನ್ನೂ ಓದಿ: ಮೈಸೂರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ದರ್ಶನ್ ಆಸೆಗೆ ತಣ್ಣೀರೆರಚಿದ ಕೋರ್ಟ್!