Asianet Suvarna News Asianet Suvarna News

ಅವಧಿ ಮುಗಿದ 30 ದಿನದಲ್ಲಿ ಡಿಎಲ್‌ ನವೀಕರಿಸಿ: ಹೈಕೋರ್ಟ್‌

ಪರವಾನಗಿ ಅವಧಿ ಮುಗಿದ ದಿನದಿಂದ 30 ದಿನಗಳಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಸಾಕ್ಷ್ಯ ಒದಗಿಸದ ಅಂಶ ಪರಿಗಣಿಸಿರುವ ಹೈಕೋರ್ಟ್‌, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾದ ಆ್ಯಂಬುಲೆನ್ಸ್‌ ಚಾಲಕನ ಮೇಲೆ ಮೋಟಾರು ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ ಹೊರಿಸಿದ್ದ ಶೇ.50ರಷ್ಟು ಹೊಣೆಗಾರಿಕೆಯನ್ನು ಶೇ.100ಕ್ಕೆ ಹೆಚ್ಚಿಸಿ ಆದೇಶಿಸಿದೆ.

Renew DL Within 30 Days of Expiry Says High Court of Karnataka grg
Author
First Published Mar 21, 2024, 10:58 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು(ಮಾ.21):  ವಾಹನ ಚಾಲನಾ ಪರವಾನಗಿಯ ಅವಧಿ ಮುಗಿದ ಸಮಯದಿಂದ 30 ದಿನಗಳ ಒಳಗೆ ನವೀಕರಣ ಮಾಡಿಸಿಕೊಳ್ಳಬೇಕು. ಒಂದೊಮ್ಮೆ ಅರ್ಜಿ ಸಲ್ಲಿಸದೆ ಇದ್ದು, ಅಪಘಾತ ಸಂಭವಿಸಿದರೆ ಅದರ ಪೂರ್ಣ ಪ್ರಮಾಣದ ಹೊಣೆಯನ್ನು ವಾಹನ ಚಾಲಕ ಹೊರಬೇಕಾಗುತ್ತದೆ ಹಾಗೂ ವಾಹನದ ಮಾಲೀಕ ಸಂತ್ರಸ್ತರಿಗೆ ಕೈಯಿಂದ ಪರಿಹಾರ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಆದೇಶ ನೀಡಿದೆ.

ಪರವಾನಗಿ ಅವಧಿ ಮುಗಿದ ದಿನದಿಂದ 30 ದಿನಗಳಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಸಾಕ್ಷ್ಯ ಒದಗಿಸದ ಅಂಶ ಪರಿಗಣಿಸಿರುವ ಹೈಕೋರ್ಟ್‌, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾದ ಆ್ಯಂಬುಲೆನ್ಸ್‌ ಚಾಲಕನ ಮೇಲೆ ಮೋಟಾರು ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ ಹೊರಿಸಿದ್ದ ಶೇ.50ರಷ್ಟು ಹೊಣೆಗಾರಿಕೆಯನ್ನು ಶೇ.100ಕ್ಕೆ ಹೆಚ್ಚಿಸಿ ಆದೇಶಿಸಿದೆ. ಅಪಘಾತ ಪ್ರಕರಣವೊಂದರ ಸಂಬಂಧ ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಈ ಆದೇಶ ಮಾಡಿದೆ.

ಪಾದರಾಯನಪುರ ಗಲಭೆ ಪ್ರಕರಣ ರದ್ದು: ಹೈಕೋರ್ಟ್ ಆದೇಶ

ಪ್ರಕರಣದ ವಿವರ:

2010ರ ಮೇ 29ರಂದು ಚಿತ್ರದುರ್ಗದ ಜೋಗಿಮಟ್ಟಿ ಪ್ರದೇಶ ಸಮೀಪ ಮಹೀಂದ್ರ ಮ್ಯಾಕ್ಸಿಕ್ಯಾಬ್‌ ಮತ್ತು ಆ್ಯಂಬುಲೆನ್ಸ್‌ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದರು. ಆ್ಯಂಬುಲೆನ್ಸ್‌ ಚಾಲಕನ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜತೆಗೆ, ಸ್ವಲ್ಪ ಪ್ರಮಾಣದ ನಿರ್ಲಕ್ಷ್ಯವನ್ನು ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಹೊರಿಸಿದ್ದರು.

ಜೀವ ರಕ್ಷಣೆ ಮಾಡಬೇಕಾದ್ದರಿಂದ ಆ್ಯಂಬುಲೆನ್ಸ್‌ ಸುಗಮ ಸಂಚಾರಕ್ಕೆ ಮ್ಯಾಕ್ಸಿಕ್ಯಾಬ್ ಚಾಲಕ ದಾರಿ ಮಾಡಿಕೊಡಬೇಕು. ಈ ಪ್ರಕರಣದಲ್ಲಿ ಮ್ಯಾಕ್ಸಿಕ್ಯಾಬ್‌ ಚಾಲಕ ವೇಗ ಕಡಿಮೆಗೊಳಿಸಿ, ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡದ ಹಿನ್ನೆಲೆಯಲ್ಲಿ ಅಪಘಾತ ಉಂಟಾಗಿದೆ ಎಂದು ನಿರ್ಧರಿಸಿದ್ದ ನ್ಯಾಯಾಧಿಕರಣ, ಮ್ಯಾಕ್ಸಿಕ್ಯಾಬ್‌ ಮತ್ತು ಆ್ಯಂಬುಲೆನ್ಸ್‌ ಚಾಲಕನ ಮೇಲೆ ತಲಾ ಶೇ.50ರಷ್ಟು ಅಪಘಾತದ ಹೊಣೆಗಾರಿಕೆ ನಿಗದಿಪಡಿಸಿ 2012ರ ಏ.18ರಂದು ಆದೇಶಿಸಿತ್ತು. ಘಟನೆಯಲ್ಲಿ ಗಾಯಗೊಂಡವರಿಗೆ ಶೇ.50:50 ಅನುಪಾತದಲ್ಲಿ ಪರಿಹಾರ ಪಾವತಿಸುವಂತೆ ಆ ಎರಡೂ ವಾಹನಗಳಿಗೆ ವಿಮಾ ಪಾಲಿಸಿ ವಿತರಿಸಿದ್ದ ಕಂಪನಿಗಳಿಗೆ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಮ್ಯಾಕ್ಸಿ ಕ್ಯಾಬ್‌ಗೆ ವಿಮಾ ಪಾಲಿಸಿ ವಿತರಿಸಿದ್ದ ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಮೇಲ್ಮನವಿದಾರ ಕಂಪನಿ ಪರ ವಕೀಲರು, ಆ್ಯಂಬುಲೆನ್ಸ್‌ ಚಾಲಕನ ಚಾಲನಾ ಪರವಾನಗಿ ಅವಧಿ 2010ರ ಏ.24ರಂದು ಪೂರ್ಣಗೊಂಡಿದೆ. 2010ರ ಮೇ 31ರಂದು ಪರವಾನಗಿ ನವೀಕರಣಗೊಂಡಿದೆ. ಮೇ 29ರಂದು ಅಪಘಾತ ನಡೆದಿದ್ದು, ಈ ವೇಳೆ ಚಾಲಕ ಚಾಲನಾ ಪರವಾನಗಿ ಹೊಂದಿರಲಿಲ್ಲ. ಆದ್ದರಿಂದ ಮ್ಯಾಕ್ಸಿಕ್ಯಾಬ್‌ ಮೇಲೆ ಹೊರಿಸಿರುವ ಶೇ.50ರಷ್ಟು ಹೊಣೆಗಾರಿಕೆಯನ್ನು ಆ್ಯಂಬುಲೆನ್ಸ್‌ ಮಾಲೀಕನ ಮೇಲೆ ವರ್ಗಾಯಿಸಬೇಕು ಎಂದು ಕೋರಿದರು.

ಆ್ಯಂಬುಲೆನ್ಸ್‌ಗೆ ವಿಮಾ ಪಾಲಿಸಿ ನೀಡಿದ್ದ ಕಂಪನಿ ಪರ ವಕೀಲರು, ನಿಯಮಗಳ ಪ್ರಕಾರ ಚಾಲನಾ ಪರವಾನಗಿ ನವೀಕರಣಕ್ಕೆ 30 ದಿನ ಕಾಲಾವಕಾಶ ಅವಕಾಶವಿರುತ್ತದೆ. ಕಾರ್ಯವಿಧಾನ ವಿಳಂಬ ಸಾಧ್ಯತೆ ಕಾರಣ ಈ 30 ದಿನದೊಳಗೆ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರೆ ಪರವಾನಗಿ ನೀಡುವ ಅವಧಿಯು 30 ದಿನಗಳವರೆಗೆ ವಿಸ್ತರಣೆಯಾಗುತ್ತದೆ. ಅಲ್ಲದೇ ಅವಧಿ ಮುಗಿದಿದ್ದರೂ ನವೀಕರಣಗೊಂಡ ರೀತಿಯಲ್ಲೇ ಪರವಾನಗಿದಾರನಿಗೆ ಪ್ರಯೋಜನ ಸಿಗುತ್ತದೆ ಎಂದು ತಿಳಿಸಿದರು.

ಕೇರಳದಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಂಡ ನ್ಯಾಯಮೂರ್ತಿ ಅನು ಶಿವರಾಮನ್!

ಆ್ಯಂಬುಲೆನ್ಸ್‌ ವಿಮಾ ಕಂಪನಿಯ ವಕೀಲರ ವಾದ ಸ್ವೀಕಾರಾರ್ಹ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ಪ್ರಕರಣದಲ್ಲಿ ಆ್ಯಂಬುಲೆನ್ಸ್‌ ಚಾಲಕನ ಪರವಾನಗಿ ಅವಧಿ ಮುಗಿದ ನಂತರದ 30 ದಿನಗಳ ಒಳಗೆ ನವೀಕರಣಕ್ಕೆ ಆರ್‌ಟಿಓಗೆ ಅರ್ಜಿ ಸಲ್ಲಿಸಿದ್ದ ಮತ್ತು ಅಪಘಾತ ನಡೆದ ದಿನ ಆ ಅರ್ಜಿ ಕುರಿತ ಪ್ರಕ್ರಿಯೆ ಬಾಕಿಯಿತ್ತು ಎಂಬ ಬಗ್ಗೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಇದರಿಂದ ಅಪಘಾತ ನಡೆದ ವೇಳೆ ಆ್ಯಂಬುಲೆನ್ಸ್‌ ಚಾಲಕ ಅಧಿಕೃತ ಪರವಾನಗಿ ಹೊಂದಿರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದರಿಂದ ಮ್ಯಾಕ್ಸಿ ಕ್ಯಾಬ್‌ ಚಾಲಕನ ಮೇಲಿದ್ದ ಶೇ.50ರಷ್ಟು ಹೊಣೆಗಾರಿಕೆಯನ್ನು ಆ್ಯಂಬುಲೆನ್ಸ್‌ ಚಾಲಕನ ಮೇಲೆ ಹೊರಿಸುವುದು ಸೂಕ್ತವಾಗಿದೆ ಎಂದು ಹೈಕೋರ್ಟ್‌ ತೀರ್ಮಾನಿಸಿದೆ.

ಅಲ್ಲದೆ, ಪ್ರಕರಣದ ಗಾಯಾಳುಗಳಿಗೆ ಸುಮಾರು 10 ಲಕ್ಷ ರು. ಪರಿಹಾರ ಮೊತ್ತವನ್ನು ಶೇ.6ರಷ್ಟು ಬಡ್ಡಿದರದಲ್ಲಿ ಆ್ಯಂಬುಲೆನ್ಸ್‌ ಮಾಲೀಕನೇ ಪಾವತಿಸಬೇಕು. ಆ್ಯಂಬುಲೆನ್ಸ್‌ಗೆ ವಿಮಾ ಪಾಲಿಸಿ ವಿತರಿಸಿದ್ದ ಕಂಪನಿ ಸಹ ಯಾವುದೇ ಪರಿಹಾರ ಪಾವತಿಸುವಂತಿಲ್ಲ ಎಂದು ಆದೇಶಿಸಿದೆ.

Follow Us:
Download App:
  • android
  • ios