ಕೊರೋನಾ ಸೋಂಕಿತರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಉಚಿತವಾಗಿ ಔಷಧ ಪೂರೈಕೆ ಮಾಡಲಾಗುತ್ತೆ.

ಬೆಂಗಳೂರು(ಆ.15):  ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ದಾಖಲಾಗಿರುವ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಅಗತ್ಯಾನುಸಾರ ‘ರೆಮ್‌ಡೆಸಿವಿರ್‌’ ಔಷಧ ಒದಗಿಸಲು ಶುಕ್ರವಾರ ಆದೇಶಿಸಿರುವ ಸರ್ಕಾರ, ಈ ಔಷಧ ಖರೀದಿಗೆ ತಗುಲುವೆ ವೆಚ್ಚವನ್ನು ಆಸ್ಪತ್ರೆಗಳಿಗೆ ಮರುಪಾವತಿ ಮಾಡುವುದಾಗಿ ಹೇಳಿದೆ.

ಅಮೆರಿಕಾ ಮೂಲದ ರೆಮ್‌ಡೆಸಿವಿರ್‌ ಔಷಧವನ್ನು ಕೋವಿಡ್‌ ಚಿಕಿತ್ಸೆಗೆ ಬಳಸಲು ಕೇಂದ್ರ ಸರ್ಕಾರದ ಅನುಮತಿ ನೀಡಿದ ಬಳಿಕ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಈ ಔಷಧ ಬಳಸಲಾಗುತ್ತಿದೆ. ಈ ಔಷಧ ಸೌಲಭ್ಯ ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರಿಗೂ ಒದಗಿಸಲು ಆದೇಶ ಮಾಡಲಾಗಿದೆ.

ಶುಕ್ರವಾರ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳು ಪತ್ತೆ..!

ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಸರ್ಕಾರದ ಶಿಫಾರಸು ಮೂಲಕ ದಾಖಲಾಗಿರುವ ಸೋಂಕಿತರ ಚಿಕಿತ್ಸೆಗೆ ಎಷ್ಟುಪ್ರಮಾಣದ ರೆಮ್‌ಡೆಸಿವಿರ್‌ ಇಂಜೆಕ್ಷನ್‌ ಅಗತ್ಯ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ (ಸ್ಯಾಟ್‌) ಆಯಾ ಜಿಲ್ಲಾ ಸಂಯೋಜರು, ಪ್ರಾದೇಶಿಕ ಸಲಹೆಗಾರರ ಮೂಲಕ ಬೇಡಿಕೆ ಸಲ್ಲಿಸಬೇಕು. ಸ್ಯಾಟ್‌ ಇದನ್ನು ಪರಿಶೀಲಿಸಿ ಅಗತ್ಯ ಇಂಜೆಕ್ಷನ್‌ ಒದಗಿಸಲು ಕರ್ನಾಟಕ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಗೆ (ಕೆಎಸ್‌ಡಿಎಲ್‌ಡ್ಬ್ಯುಎಸ್‌) ಸಲಹೆ ನೀಡಲಿದೆ.

ತಮಾಷೆಯೇ ಅಲ್ಲ! ಕೊರೋನಾಪೀಡಿತನ ಚಿಕಿತ್ಸೆಗಾಗಿ ಪಿಪಿಇ ಕಿಟ್‌ ಧರಿಸಿ ಬೈಕ್‌ ಸವಾರಿ...

ಖಾಸಗಿ ಆಸ್ಪತ್ರೆಗಳು ಸಂಬಂಧಿಸಿದ ರೋಗಿಗಳ ಹೆಸರಲ್ಲಿ ಈ ಇಂಜೆಕ್ಷನ್‌ ಪಡೆಯಬೇಕು. ಬಳಿಕ ಈ ಔಷಧ ನೀಡಲಾಗುವ ಪ್ರತಿ ರೋಗಿಯ ಜಿಲ್ಲಾ ಕೋವಿಡ್‌ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಸ್ಯಾಟ್‌ಗೆ ಸಲ್ಲಿಸಿ ಚಿಕಿತ್ಸೆಗೆ ಉಪಯೋಗಿಸಬಹುದು. ಈ ಔಷಧ ಬಳಕೆ ವಿಚಾರದಲ್ಲಿ ರಾಜ್ಯದ ಕ್ಲಿನಿಕಲ್‌ ಪರಿಣಿತರ ಸಮಿತಿ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ, ಸಲಹೆಗಳನ್ನು ಚಾಚೂತಪ್ಪದೆ ಅನುಸರಿಸಬೇಕು. ಈ ಔಷಧ ಖರೀದಿಗೆ ಆಸ್ಪತ್ರೆಗಳಿಗೆ ತಗುಲಿದ ವೆಚ್ಚವನ್ನು ಸರ್ಕಾರ ನಿರ್ಧಿಷ್ಟಕಾಲಮಿತಿಯಲ್ಲಿ ಮರುಪಾವತಿ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.