ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ ಹಾಗೂ ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ನಡೆಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಕಟುವಾಗಿ ಹೇಳಿದೆ. ಕೋಲಾರದ ವೇಮಗಲ್‌ ಒತ್ತುವರಿ ಕೇಸಲ್ಲಿ ಗರಂ ಆಗಿದೆ

ಬೆಂಗಳೂರು : ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ ಹಾಗೂ ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ನಡೆಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಕಟುವಾಗಿ ಹೇಳಿದೆ.

ಕೋಲಾರ ತಾಲೂಕು ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರ್ಕಾರಿ ಶಾಲೆ ಕಾಂಪೌಂಡ್ ಗೋಡೆ ಹಾಗೂ ಗ್ರಾಮದ ರಸ್ತೆಯ ಸರ್ಕಾರಿ ಜಾಗದಲ್ಲಿ ಕಟ್ಟಲಾಗಿರುವ ಮಳಿಗೆಗಳ ತೆರವಿಗೆ ತಹಶೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಗ್ರಾಮದ ವಿರಾಟ್ ಹಿಂದೂ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಜಾಮೀಯಾ ಮಸ್ಜಿದ್ ಕಮಿಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಅರ್ಜಿದಾರರ ಪರ ವಕೀಲರು, ಎರಡೂ ಅರ್ಜಿದಾರ ಸಂಸ್ಥೆಗಳು ಕ್ಯಾಲನೂರು ಗ್ರಾಮದ ಖಾಲಿ ಜಾಗವನ್ನು ದಶಕದಿಂದ ನಿರ್ವಹಿಸಿಕೊಂಡು ಬಂದಿವೆ. ಗ್ರಾಮಸ್ಥರ ಹಿತದೃಷ್ಟಿಯಿಂದ ಸಮುದಾಯದ ದೇಣಿಗೆಗಳಿಂದ ಮಳಿಗೆ ನಿರ್ಮಿಸಿವೆ. ಅದರಿಂದ ಬರುವ ಬಾಡಿಗೆ ಹಣವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈ ಜಾಗವನ್ನು ಅರ್ಜಿದಾರರ ಸಂಸ್ಥೆಗಳಿಗೆ ಮಂಜೂರು ಮಾಡಲು 2015ರಲ್ಲಿ ಸ್ಥಳೀಯ ಗ್ರಾಪಂ ನಿರ್ಣಯ ಕೈಗೊಂಡಿದೆ. ಸದ್ಯ ಆ ಪ್ರಸ್ತಾವನೆ ಜಿಲ್ಲಾಧಿಕಾರಿ ಮುಂದೆ ಬಾಕಿಯಿದೆ. ಈ ಮಧ್ಯೆ ಮಳಿಗೆಗಳನ್ನು ತೆರವುಗೊಳಿಸಲು ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದು, ನ.21 ತೆರವು ಕಾರ್ಯಾಚರಣೆ ನಿಗದಿಯಾಗಿದೆ ಎಂದರು.

ರಾಮ್‌ ರಹೀಂ ಸೇರಿ ಬಂದಿದ್ದಾರೆ:

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರ ಪೀಠ, ಅರ್ಜಿದಾರರು ಮಳಿಗೆ ನಿರ್ಮಿಸಿರುವ ಜಾಗ ಸರ್ಕಾರಿ ಜಮೀನು ಎಂದು ತಿಳಿಯುತ್ತಿದೆ. ಸರ್ಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳ ಕೆಲಸ ಏನಿದೆ? ಯಾವ ಆಧಾರದಲ್ಲಿ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿ, ಹಣ ವಸೂಲಿ ಮಾಡಲಾಗುತ್ತಿದೆ. ಇದು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್‌ ವ್ಯವಹಾರವಾಗಿದೆ. ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಲು ಮತ್ತು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್‌ಗೆ ಅವಕಾಶ ನೀಡಲಾಗದು. ಎರಡೂ ಧರ್ಮದವರು ಅರ್ಜಿ ಸಲ್ಲಿಸಿದ್ದಾರೆ. ‘ರಾಮ್-ರಹೀಮ್’ ಸೇರಿ ಬಂದಿರುವುದೇ ಅನುಮಾನ ಹುಟ್ಟಿಸುತ್ತಿದೆ ಎಂದು ತೀಕ್ಷ್ಣವಾಗಿ ನುಡಿಯಿತು.

ನಂತರ ಅರ್ಜಿ ಸಂಬಂಧ ಸರ್ಕಾರ, ಕೋಲಾರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ನ.21) ಮುಂದೂಡಿತು.

ಏನಿದು ಪ್ರಕರಣ?

- ವೇಮಗಲ್‌ನ ಕ್ಯಾಲನೂರಿನ ಸರ್ಕಾರಿ ಜಾಗದಲ್ಲಿ ಮಳಿಗೆ ನಿರ್ಮಿಸಿದ್ದ ಹಿಂದೂ ಟ್ರಸ್ಟ್‌, ಮಸೀದಿ ಕಮಿಟಿ

- ಇವುಗಳ ತೆರವಿಗೆ ಸೂಚಿಸಿ ನೋಟಿಸ್‌ ಜಾರಿಗೊಳಿಸಿದ್ದ ತಹಶೀಲ್ದಾರ್‌. ಎರಡೂ ಸಂಸ್ಥೆಗಳು ಕೋರ್ಟಿಗೆ

- ಖಾಲಿ ಜಾಗ ನಿರ್ವಹಣೆ, ಮಳಿಗೆಯಿಂದ ಬರುವ ಹಣ ಧಾರ್ಮಿಕ ಕೆಲಸಕ್ಕೆ ಬಳಕೆ ಎಂದು ಸಂಸ್ಥೆಗಳ ವಾದ

- ಸರ್ಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ಕೆಲಸ ಏನಿದೆ? ಎಂದು ಹೈಕೋರ್ಟ್‌ನಿಂದ ತೀವ್ರ ತರಾಟೆ