ರಾಜ್ಯವು ಐಟಿ ಕ್ಷೇತ್ರ ಮಾತ್ರವಲ್ಲ ಹೂಡಿಕೆ ಮತ್ತು ಅಭಿವೃದ್ಧಿಗೂ ಬೇಡಿಕೆಯುಳ್ಳ ಗಮ್ಯವೆಂದು ಗುರುತಿಸಲ್ಪಟ್ಟಿದೆ. ಮುಂದಿನ ಹಂತದ ತಂತ್ರಜ್ಞಾನ ನಾವೀನ್ಯತೆಯ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆಗಳನ್ನು ಮುಂದುವರಿಸಲಾಗುವುದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು(ನ.30): ಮಾಹಿತಿ ತಂತ್ರಜ್ಞಾನ(ಐಟಿ) ನೀತಿಯನ್ನು ರೂಪಿಸಿದ ಮೊದಲ ರಾಜ್ಯವಾಗಿ ಕರ್ನಾಟಕ. ಇಂದಿಗೂ ಐಟಿ ಕ್ಷೇತ್ರವು ರಾಜ್ಯದ ಜಿಡಿಪಿಗೆ ಶೇ.25ರಷ್ಟು ಕೊಡುಗೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ಬೆಂಗಳೂರು ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ‘ಬ್ರೇಕಿಂಗ್‌ ದಿ ಬೌಂಡರೀಸ್‌’ ಘೋಷ ವಾಕ್ಯದ 26ನೇ ಬೆಂಗಳೂರು ಟೆಕ್‌ ಸಮ್ಮಿಟ್‌ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯವು ಐಟಿ ಕ್ಷೇತ್ರ ಮಾತ್ರವಲ್ಲ ಹೂಡಿಕೆ ಮತ್ತು ಅಭಿವೃದ್ಧಿಗೂ ಬೇಡಿಕೆಯುಳ್ಳ ಗಮ್ಯವೆಂದು ಗುರುತಿಸಲ್ಪಟ್ಟಿದೆ. ಮುಂದಿನ ಹಂತದ ತಂತ್ರಜ್ಞಾನ ನಾವೀನ್ಯತೆಯ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆಗಳನ್ನು ಮುಂದುವರಿಸಲಾಗುವುದು ಎಂದರು.

ಬೆಂಗಳೂರು ಟೆಕ್ ಸಮ್ಮಿಟ್: ಅಮೆರಿಕ-ಭಾರತ ಸಹಭಾಗಿತ್ವದ ಅತ್ಯುತ್ತಮ ಉದಾಹರಣೆ, ಬಿಲ್‌ ನೆಲ್ಸನ್‌

ಐಟಿ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಅಸಾಮಾನ್ಯ. 5500 ಐಟಿ, ಐಇಟಿಎಸ್ ಕಂಪನಿಗಳು, 750 ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿದ್ದು ದೇಶದ ರಫ್ತಿಗೆ ಸುಮಾರು 85 ಬಿಲಿಯನ್ ಯುಎಸ್‌ ಡಾಲರ್ ಕೊಡುಗೆ ನೀಡುತ್ತಿದೆ. ಸುಮಾರು 12 ಲಕ್ಷ ವೃತ್ತಿಪರರಿಗೆ ನೇರ ಉದ್ಯೋಗ ಅವಕಾಶಗಳನ್ನು ಹಾಗೂ 31 ಲಕ್ಷ ಪರೋಕ್ಷ ಉದ್ಯೋಗಗಳನ್ನು ಒದಗಿಸಿದೆ. ದೇಶದ ಒಟ್ಟು ಸಾಫ್ಟ್‌ವೇರ್‌ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ 40 ರಷ್ಟಿದ್ದು, ಜಾಗತಿಕ ಐಟಿ ದಿಗ್ಗಜ ಎಂಬ ಸ್ಥಾನವನ್ನು ಗಿಟ್ಟಿಸಿಕೊಂಡಿದೆ ಎಂದು ಶ್ಲಾಘಿಸಿದರು.

ನೀತಿ ಆಯೋಗದ ಭಾರತ ಸೂಚ್ಯಂಕ ದಲ್ಲಿ ಕರ್ನಾಟಕ ಸತತ ಮೂರು ಬಾರಿ ಮೇಲ್ಪಂಕ್ತಿಯನ್ನು ಕಾಯ್ದುಕೊಂಡಿದೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಡಿಪಿಐಐಟಿ ಶ್ರೇಯಾಂಕದಲ್ಲಿ ಅತ್ಯುತ್ತಮ ಪರ್ಫಾರ್ಮರ್ ಎಂಬ ಬಿರುದು ಪಡೆದುಕೊಂಡಿದೆ. ಉದ್ಯಮ ಮತ್ತು ನಾವೀನ್ಯತೆಯ ಬಗ್ಗೆ ನಮಗಿರುವ ಬದ್ಧತೆಗೆ ಈ ಎಲ್ಲಾ ಬಿರುದುಗಳು ಸಾಕ್ಷಿಯಾಗಿವೆ. ನಮ್ಮ ಕೈಗಾರಿಕೆ ಪರವಾದ ನೀತಿಗಳು ನಿಯಂತ್ರಣ ಪ್ರಕ್ರಿಯೆಗಳನ್ನು ಸರಳಗೊಳಿಸಲು ನಾವು ಬದ್ಧವಾಗಿದ್ದೇವೆ. ಅಫಿಡವಿಟ್ ಆಧಾರಿತ ತೀರುವಳಿಯಿಂದ ಹಿಡಿದು ಭೂ ಸುಧಾರಣೆ, ಕೇಂದ್ರೀಯ ಪರಿಶೀಲನಾ ವ್ಯವಸ್ಥೆ ಮತ್ತು ಏಕಗವಾಕ್ಷಿವರೆಗೆ ಪ್ರತಿ ಹೆಜ್ಜೆಯನ್ನೂ ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿಸಲು ಆಧ್ಯತೆ ನೀಡಿದ್ದೇವೆ ಎಂದು ತಿಳಿಸಿದರು.

ಬಯೋಟೆಕ್‌ ನೀತಿ ಕರಡು ಬಿಡುಗಡೆ:

ಜೈವಿಕ ತಂತ್ರಜ್ಞಾನ ಕುರಿತ ಕರಡು ನೀತಿಯನ್ನು ಬಿಡುಗಡೆ ಮಾಡಿದ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌, ಸರಳ ವಾಣಿಜ್ಯ ವಹಿವಾಟು ಸೂಚ್ಯಂಕದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಹಲವು ಸುಧಾರಣೆಗಳನ್ನು ಜಾರಿಗೆ ತಂದ ಪರಿಣಾಮವಾಗಿ ಇದು ಸಾಧ್ಯವಾಗಿದೆ. ದೇಶದ ಐಟಿ ರಫ್ತಿನಲ್ಲಿ ಕರ್ನಾಟಕದ ಶೇ.40ರಷ್ಟು ಪಾಲಿದೆ ಎಂದರು.

ಬೆಂಗಳೂರು ಟೆಕ್ ಮೇಳದಲ್ಲಿ ಹೊರಹೊಮ್ಮಿದ ಧ್ವನಿ: ಬಾಹ್ಯಾಕಾಶ ಕ್ಷೇತ್ರದಲ್ಲೂ ಬೇಕು ಮಹಿಳಾ ನಾಯಕತ್ವ..!

ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ತಂತ್ರಜ್ಞಾನ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಕಾರ್ಯ ಪರಿಸರ ಉಂಟುಮಾಡಲು ಸರ್ಕಾರವು ಆದ್ಯತೆ ಮುಂದುವರೆಸಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಆ್ಯನಿಮೇಷನ್‌, ವಿಶುವಲ್‌ ಎಫೆಕ್ಟ್ಸ್‌, ಗೇಮಿಂಗ್‌ ಆ್ಯಂಡ್‌ ಕಾಮಿಕ್‌ ಪಾಲಿಸಿ (ಎವಿಜಿಸಿ) ಕರಡು ಮುನ್ನೋಟ ಮತ್ತು ಜೈವಿಕ ತಂತ್ರಜ್ಞಾನ ಕಾರ್ಯನೀತಿಯ ಪರಿಷ್ಕೃತ ಕರಡು ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯ ಮಾಹಿತಿ ತಂತ್ರಜ್ಞಾನ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣನ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾಶರ್ಮಾ, ಐಟಿ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.