ಪುತ್ತೂರಿನಲ್ಲಿ ನಡೆದ ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಭಟ್ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿದೆ. ಏನಿದು ಪ್ರಕರಣ?

ಪುತ್ತೂರು (ಜ.22): ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಪುತ್ತೂರಿನಲ್ಲಿ ನಡೆದಿದ್ದ ವಿವಾದಾತ್ಮಕ ಭಾಷಣದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಭಟ್ ಅವರ ವಿರುದ್ಧ ಯಾವುದೇ ರೀತಿಯ 'ಬಲವಂತದ ಕ್ರಮ' ಕೈಗೊಳ್ಳದಂತೆ ನ್ಯಾಯಾಲಯವು ಪೊಲೀಸರಿಗೆ ಮಹತ್ವದ ನಿರ್ದೇಶನ ನೀಡಿದೆ.

ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿವಾದಾತ್ಮಕ ನುಡಿ

ಕಳೆದ ಜನವರಿ 12, 2026 ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪ್ರಭಾಕರ್ ಭಟ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡುವಾಗ, ಮುಸಲ್ಮಾನ ಮತ್ತು ಕ್ರೈಸ್ತ ಸಮುದಾಯದ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುವಂತಹ ಮಾತುಗಳನ್ನು ಆಡಿದ್ದಾರೆ ಎನ್ನಲಾದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಪ್ರಭಾಕರ್ ಭಟ್ ಅವರ ಈ ಭಾಷಣವು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತಿದೆ ಮತ್ತು ಕೋಮು ದ್ವೇಷವನ್ನು ಹರಡುತ್ತಿದೆ ಎಂದು ಆರೋಪಿಸಿ ಪುತ್ತೂರಿನ ನಿವಾಸಿ ರಾಮಚಂದ್ರ ಕೆ ಎಂಬುವವರು ದೂರು ನೀಡಿದ್ದರು. ಈ ದೂರಿನ ಅನ್ವಯ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎಫ್‌ಐಆರ್ ರದ್ದು ಕೋರಿ ಭಟ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಸಾಮರಸ್ಯದ ಭಾಷಣವೋ ಅಥವಾ ಪ್ರಚೋದನೆಯೋ?

ದೂರುದಾರರ ಪ್ರಕಾರ, ಶೈಕ್ಷಣಿಕ ಸಂಸ್ಥೆಯ ಆವರಣದಲ್ಲಿ ಇಂತಹ ಭಾಷಣ ಮಾಡುವುದು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ಅರ್ಜಿದಾರರ ಪರ ವಕೀಲರು ಇದು ಕೇವಲ ಸೈದ್ಧಾಂತಿಕ ಮಾತುಗಳೇ ಹೊರತು ಯಾರಿಗೂ ಹಾನಿ ಮಾಡುವ ಉದ್ದೇಶ ಹೊಂದಿಲ್ಲ ಎಂದು ವಾದಿಸಿದ್ದರು. ಸದ್ಯಕ್ಕೆ ಹೈಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡದಿದ್ದರೂ, ಬಂಧನದಂತಹ ಕಠಿಣ ಕ್ರಮಗಳಿಗೆ ಬ್ರೇಕ್ ಹಾಕಿದೆ.