ಈ ಪೋಸ್ಟ್ ಮಾಡಿದ ನಂತರ ಬೆಂಗಳೂರಿನ ಜೀವನ ವೆಚ್ಚದ ಬಗ್ಗೆ ಚರ್ಚೆ ಪ್ರಾರಂಭವಾಗಿದ್ದು,  ಜನರಿಂದ  ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. 

ನಾವು ಎಷ್ಟು ಸಂಪಾದನೆ ಮಾಡುತ್ತೇವೆ?, ಅದರಲ್ಲಿ ಎಷ್ಟು ಉಳಿಸುತ್ತೇವೆ? ಎಂಬುದು ಹೆಚ್ಚಾಗಿ ನಾವು ಕೆಲಸ ಮಾಡುವ ನಗರದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ವಿಪರ್ಯಾಸವೆಂದರೆ ಅನೇಕ ಮಹಾನಗರಗಳಲ್ಲಿ ಜೀವನ ವೆಚ್ಚ, ಆಹಾರ ಮತ್ತು ಇತರ ವಸ್ತುಗಳು ತುಂಬಾ ಹೆಚ್ಚಿದ್ದರೂ ಸಂಬಳ ಮಾತ್ರ ಕಡಿಮೆ ಇರುತ್ತದೆ. ಆಗ ಜನರಿಗೆ ಆ ನಗರವನ್ನು ಬಿಟ್ಟು ಬೇರೆ ಕಡೆ ಹೋಗುವುದೊಂದೇ ಆಯ್ಕೆಯಾಗಿರುತ್ತದೆ ಅಥವಾ ಹೆಚ್ಚಿಗೆ ಸಂಬಳ ಎಲ್ಲಿ ಕೊಡುತ್ತಾರೆ ಅಲ್ಲಿಗೆ ಹೋಗಬೇಕಾಗುತ್ತದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಸಿಸುವ ಉದ್ಯೋಗಿಯೊಬ್ಬರ ವಿಷಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ.

ಅಂದಹಾಗೆ ಈ ಉದ್ಯೋಗಿ ಬೆಂಗಳೂರು ಮತ್ತು ಇಲ್ಲಿನ ಖರ್ಚುಗಳ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆ ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ. ಹೌದು, ಶ್ಯಾಂಕ್_ಟಿಪ್ ಎಂಬ ರೆಡ್ಡಿಟ್ ಬಳಕೆದಾರರು ಬೆಂಗಳೂರು ತೊರೆಯುವ ಬಗ್ಗೆ ಸಂದೇಶವನ್ನು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಮಾಡಿದ ನಂತರ ಬೆಂಗಳೂರಿನ ಜೀವನ ವೆಚ್ಚದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಬಳಕೆದಾರರು ತಾವು ಬೆಂಗಳೂರು ತೊರೆಯಲು ಕಾರಣವೇನು ಎಂದು ಸಹ ತಿಳಿಸಿದ್ದಾರೆ. ಅವರೇ ಹೇಳುವಂತೆ ಇಲ್ಲಿ ವಾಸಿಸುವುದು ತುಂಬಾ ದುಬಾರಿ.

ಪೋಸ್ಟ್‌ನಲ್ಲಿ ಇರುವುದೇನು?
ರೆಡ್ಡಿಟ್ ಬಳಕೆದಾರ ತಮ್ಮ ಪೋಸ್ಟ್‌ನಲ್ಲಿ ಬರೆದಿರುವುದನ್ನು ನೋಡುವುದಾದರೆ "ನಾನು ಕೇವಲ 3 ತಿಂಗಳ ನಂತರ ಬೆಂಗಳೂರು ಬಿಡುತ್ತಿದ್ದೇನೆ. ಇಲ್ಲಿ ಖರ್ಚು ತುಂಬಾ ದುಬಾರಿಯಾಗಿದೆ . ಬಾಡಿಗೆ, ಆಹಾರ ಮತ್ತು ಸಾರಿಗೆಗೆ ಬಹಳಷ್ಟು ಹಣ ಖರ್ಚು ಮಾಡಿದ್ದೇನೆ. ಈಗ ನನ್ನ ಬಳಿ ಬಹಳ ಕಡಿಮೆ ಹಣ ಉಳಿದಿದೆ. ನಾನು ಕೋಲ್ಕತ್ತಾ ಅಥವಾ ಹೈದರಾಬಾದ್‌ಗೆ ಹೋಗುತ್ತಿದ್ದೇನೆ. ಅಲ್ಲಿ ಇದೇ ಕೆಲಸಕ್ಕೆ ನನಗೆ ಹೆಚ್ಚಿನ ಸಂಬಳ ಸಿಗುತ್ತದೆ. ಅಲ್ಲದೆ, ಪ್ರಯಾಣ ದರ ತುಂಬಾ ಕಡಿಮೆ ಇರುತ್ತದೆ ಮತ್ತು ಸಾರ್ವಜನಿಕ ಸಾರಿಗೆಯೂ ಉತ್ತಮವಾಗಿದೆ. ಇಲ್ಲಿ ರಾಪಿಡೋ ಬೈಕ್ ಅಥವಾ ಸರಿಯಾದ ಮೆಟ್ರೋ ಇಲ್ಲ. ಕೆಲಸಕ್ಕೆ ಹೋಗಲು ಪ್ರತಿದಿನ 4 ಗಂಟೆಗಳು ಬೇಕಾಗುತ್ತದೆ. ಇಲ್ಲಿನ ಹವಾಮಾನ ಉತ್ತಮವಾಗಿದೆ ಎಂಬುದು ಒಂದೇ ಒಳ್ಳೆಯ ವಿಷಯ.' ಎಂದು ಅವರು ತಿಳಿಸಿದ್ದಾರೆ.

ಜನರಿಂದ ಬಂತು ಮಿಶ್ರ ಪ್ರತಿಕ್ರಿಯೆ
ಈ ಪೋಸ್ಟ್ ಬಗ್ಗೆ ಅನೇಕ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುತೇಕರು ರೆಡ್ಡಿಟ್‌ ಬಳಕೆದಾರನೊಂದಿಗೆ ಸಹಮತ ವ್ಯಕ್ತಪಡಿಸಿದ್ದಾರೆ. "ಒಳ್ಳೆಯ ನಿರ್ಧಾರ ಸ್ನೇಹಿತ. ನಮ್ಮ ಕಡೆಯಿಂದ ಬೆಸ್ಟ್ ವಿಶ್ ನಿಮಗೆ. ಕೆಲಸ ಮಾಡುವುದಕ್ಕಿಂತ ಇಲ್ಲಿ ವಾಸಿಸುವುದು ಕಷ್ಟ", "ಶುಭವಾಗಲಿ. ಹೆಚ್ಚು ಹೆಚ್ಚು ಜನರು ಇದನ್ನು ಅರ್ಥಮಾಡಿಕೊಂಡು ಬೆಂಗಳೂರನ್ನು ತೊರೆಯಬೇಕೆಂದು ನಾನು ಬಯಸುತ್ತೇನೆ. ಈ ನಗರವು ಇಷ್ಟೊಂದು ಜನರನ್ನು ನಿಭಾಯಿಸಲು ಸಾಧ್ಯವಿಲ್ಲ", ಎಂದರೆ ಮತ್ತೆ ಕೆಲವರು " ಮತ್ತೊಂದು ಹೊಸ ನಗರದ ಆಯ್ಕೆಯನ್ನು ಒಪ್ಪಲಿಲ್ಲ. ಕೆಲವು ಬಳಕೆದಾರರು ಬೆಂಗಳೂರಿಗಿಂತ ಹೈದರಾಬಾದ್ ಹೆಚ್ಚು ದುಬಾರಿ" ಎಂದು ಹೇಳಿರುವುದನ್ನು ನೋಡಬಹುದು.

ಈ ಹಿಂದೆಯೂ ನಡೆದಿವೆ ಘಟನೆಗಳು
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚದ ಬಗ್ಗೆ ಈ ಹಿಂದೆಯೂ ಪ್ರಶ್ನೆಗಳು ಎದ್ದಿವೆ. ಇಲ್ಲಿ ಕೆಲಸ ಮಾಡುವ ಅನೇಕ ಜನರು ಈ ನಗರವನ್ನು ತುಂಬಾ ದುಬಾರಿ ಎಂದು ಬಣ್ಣಿಸಿದ್ದಾರೆ. ಬಾಡಿಗೆ, ಆಹಾರ ಮತ್ತು ಸಾರಿಗೆಗಾಗಿ ಜನರು ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಇಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಿದೆ. ಇದರಿಂದಾಗಿ, ಅನೇಕ ಜನರು ಬೆಂಗಳೂರು ತೊರೆಯುವಂತೆ ಒತ್ತಾಯಿಸಲಾಗುತ್ತಿದೆ. ಹಾಗೆಯೇ ಏನನ್ನೂ ಹೇಳದೆ ಬೆಂಗಳೂರು ತೊರೆದಿರುವುದನ್ನು ನಾವು ಅಲ್ಲಲ್ಲಿ ಕೇಳುತ್ತಿರುತ್ತೇವೆ.