ಶಾಲೆಗಳಲ್ಲಿ ಕೈಗೊಳ್ಳುವ ಕಠಿಣ ಶಿಸ್ತು ಕ್ರಮಗಳು ಕೆಲವೊಮ್ಮೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿವೆ. ಹಾಗಾಗಿ ಶಾಲೆಗಳು ತಮ್ಮ ಪುರಾತನ ಮನಸ್ಥಿತಿ ಬದಲಿಸಿಕೊಳ್ಳಬೇಕು. ಮಕ್ಕಳ ಜೀವಹರಣವಾಗುವುದನ್ನು ತಪ್ಪಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಬೆಂಗಳೂರು(ಜೂ.28): ಕಠಿಣ ಶಿಸ್ತು ಕ್ರಮ ಜರುಗಿಸುವುದರಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಶಾಲೆಗಳು ಅಂತಹ ಶಿಸ್ತು ಕ್ರಮ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಹೈಕೋರ್ಟ್‌ ಸಲಹೆ ನೀಡಿದೆ.

ಶಾಲೆಗೆ ಮದ್ಯ ತಂದ ಕಾರಣಕ್ಕೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಕ್ಕೆ ಮನನೊಂದು 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಸಂಬಂಧ ಕೊಡಗಿನ ಶಾಲೆಯೊಂದರ ಶಾಲಾ ಪ್ರಾಂಶುಪಾಲೆ ಗೌರಮ್ಮ, ನಿರ್ದೇಶಕ ದತ್ತ ಕುರುಂಬಯ್ಯ ಮತ್ತು ಹಾಸ್ಟಲ್‌ ವಾರ್ಡನ್‌ ಚೇತನ ಬೋಪಣ್ಣ ವಿರುದ್ಧ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಸಲಹೆ ನೀಡಿದೆ.
ಶಾಲೆಗಳಲ್ಲಿ ಕೈಗೊಳ್ಳುವ ಕಠಿಣ ಶಿಸ್ತು ಕ್ರಮಗಳು ಕೆಲವೊಮ್ಮೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿವೆ. ಹಾಗಾಗಿ ಶಾಲೆಗಳು ತಮ್ಮ ಪುರಾತನ ಮನಸ್ಥಿತಿ ಬದಲಿಸಿಕೊಳ್ಳಬೇಕು. ಮಕ್ಕಳ ಜೀವಹರಣವಾಗುವುದನ್ನು ತಪ್ಪಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಪಿಎಸ್‌ಐ ಅಕ್ರಮ: ಮರು ಪರೀಕ್ಷೆ ನಡೆಸುವ ಕುರಿತು ಜು.5ಕ್ಕೆ ತಿಳಿಸಿ: ಹೈಕೋರ್ಟ್

ಅಲ್ಲದೆ, ಈ ಪ್ರಕರಣದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 15 ನಿಮಿಷದವರೆಗೆ ಶಾಲೆಯ ಜೊತೆ ಸಂಪರ್ಕದಲ್ಲಿದ್ದನು. ಪ್ರಕರಣದಲ್ಲಿ ಶಾಲೆ ತನ್ನ ತಪ್ಪು ಮುಚ್ಚಿಹಾಕಿಕೊಳ್ಳಲು ವಿದ್ಯಾರ್ಥಿಯ ಮೇಲೆ ಆರೋಪ ಹೊರಿಸುತ್ತಿದೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಸತ್ಯಾಂಶವಿದೆ ಎಂದೆನಿಸುತ್ತಿದೆ. ಹಾಗಾಗಿ, ವಿದ್ಯಾರ್ಥಿ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ತಲುಪಲು ಶಾಲೆಯ ಸಿಬ್ಬಂದಿಯೇ ಪ್ರಚೋದನೆ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಲಿ ಎಂದು ಹೈಕೋರ್ಚ್‌ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರ:

ಶಾಲೆಗೆ ಮದ್ಯ ತಂದ ಆರೋಪದಡಿ ಕೊಡಗಿನ ಶಾಲೆಯೊಂದು ತನ್ನ 9ನೇ ತರಗತಿಯ ವಿದ್ಯಾರ್ಥಿಯನ್ನು ಅಮಾನತುಪಡಿಸಿತ್ತು. ಪರೀಕ್ಷೆಗೂ ಕೂರಿಸದೇ ಮನೆಯಿಂದಲೇ ಪರೀಕ್ಷೆ ಬರೆಸುವುದಾಗಿ ಭರವಸೆ ನೀಡಿತ್ತು. ಆದರೆ, ಆನ್‌ಲೈನ್‌ ಲಿಂಕ್‌ ಕಳುಹಿಸಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿ 2022ರ ಅ.24ರಂದು ಮಧ್ಯಾಹ್ನ 12.30ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ. ಹಾಗಾಗಿ ಮೃತನ ಪೋಷಕರು ಅರ್ಜಿದಾರರ ವಿರುದ್ಧ ಪೊನ್ನಂಪೇಟೆ ಠಾಣಾ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ್ದರು.

ತನಿಖೆ ನಡೆಸಿದ್ದ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದರು. ಆದರೆ ಬಿ ರಿಪೋರ್ಚ್‌ ಅನ್ನು ಪೊನ್ನಂಪೇಟೆ ಜೆಎಂಎಫ್‌ಸಿ ನ್ಯಾಯಾಲಯ ತಿರಸ್ಕರಿಸಿ, ಅರ್ಜಿದಾರರ ವಿರುದ್ಧದ ಪ್ರಕರಣ ಮುಂದುವರಿಸಿದ್ದರು. ಇದರಿಂದ ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.